ರವಿ ಬೆಳಗೆರೆಯ ʼಹೇಳಿ ಹೋಗು ಕಾರಣ’ ಕೃತಿ ನಕಲು ಮಾಡಿ ಮಾರಾಟ: ಅಮೆಜಾನ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮೀಶೊ ಎಂಬ ಕಂಪನಿಗಳು ಮತ್ತು ಕೆಲವರು ಪುಸ್ತಕ ನಕಲಿ ಮಾಡಿ/ಪೈರಸಿ ರೂಪದಲ್ಲಿ ಯಾವುದೇ ಅನುಮತಿ ಪಡೆಯದೇ ತಮ್ಮ ಆಪ್‌ಗಳ ಮೂಲಕ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಭಾವನಾ ಬೆಳಗೆರೆ ದೂರು ನೀಡಿದ್ದರು.
ರವಿ ಬೆಳಗೆರೆಯ ʼಹೇಳಿ ಹೋಗು ಕಾರಣ’ ಕೃತಿ ನಕಲು ಮಾಡಿ ಮಾರಾಟ: ಅಮೆಜಾನ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
Published on

ಪತ್ರಕರ್ತ ರವಿ ಬೆಳೆಗೆರೆ ರಚಿಸಿರುವ ʼಹೇಳಿ ಹೋಗು ಕಾರಣʼ ಪುಸ್ತಕವನ್ನು ಅನುಮತಿ ಪಡೆಯದೆ ನಕಲು ಮಾಡಿ ಮಾರಾಟ ಮಾಡಿದ ಆರೋಪ ಸಂಬಂಧ ಅಮೆಜಾನ್‌ ಸೆಲ್ಲರ್ಸ್‌ ಸರ್ವೀಸಸ್‌ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಪ್ರಕರಣದ ತನಿಖೆಗೆ ತಡೆ ನೀಡುವಂತೆ ಕೋರಿ ಅಮೆಜಾನ್‌ ಸೆಲ್ಲರ್ಸ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

Justice K V Aravind
Justice K V Aravind

ಸುಬ್ರಹ್ಮಣ್ಯಪುರ ಪೊಲೀಸ್‌ ಮತ್ತು ಭಾವನಾ ಬೆಳಗೆರೆ ಅವರಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯವು ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿತು. ಅಲ್ಲದೇ, ವಿಚಾರಣೆಯನ್ನು ಜೂನ್‌ ಮೂರನೇ  ವಾರಕ್ಕೆ ಮುಂದೂಡಿತು.

ಅಮೆಜಾನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಅಮೆಜಾನ್‌ ಮಧ್ಯಸ್ಥಿಕೆ ಸಂಸ್ಥೆಯಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 79ರ ಅಡಿ ರಕ್ಷಣೆ ಒದಗಿಸಲಾಗಿದೆ. ಮಾರಾಟಗಾರರು ಮತ್ತು ಖರೀದಿದಾರರಿಗೆ ವೇದಿಕೆಯಾಗಿ ಅಮೆಜಾನ್‌ ಕೆಲಸ ಮಾಡುತ್ತದೆ. ಸೆಕ್ಷನ್‌ 79 ಮಧ್ಯಸ್ಥಿಕೆ ಸಂಸ್ಥೆಗಳಿಗೆ ಸುರಕ್ಷಿತ ತಾಣವಾಗಿದೆ. ಅನಾಮಿಕ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡುವ ಬದಲಿಗೆ ಮಧ್ಯಸ್ಥಿಕೆ ಸಂಸ್ಥೆಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ” ಎಂದರು.

“ಪುಸ್ತಕ ಮಾರಾಟಗಾರರಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ತನಿಖಾಧಿಕಾರಿಗೆ ಹಂಚಿಕೆ ಮಾಡಲಾಗಿದೆ. ಹೆಸರು, ಈಮೇಲ್‌ ಐಡಿ, ಮೊಬೈಲ್‌ ನಂಬರ್‌, ಮೊದಲ ಮತ್ತು ಕೊನೆಯ ಮಾರಾಟದ ದಿನಾಂಕ, ಎಷ್ಟು ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿಯನ್ನೂ ವಿವರಿಸಲಾಗಿದೆ” ಎಂದರು.

“ಮೂರನೇ ವ್ಯಕ್ತಿಗಳು ತಮ್ಮ ಉತ್ಪನ್ನವನ್ನು ಪಟ್ಟಿ ಮಾಡಿ, ದರ ನಿಗದಿ ಮಾಡುತ್ತಾರೆ. ಅಮೆಜಾನ್‌ ಉತ್ಪನ್ನ ಪಟ್ಟಿ ಮಾಡಿ, ಮಾರಾಟಕ್ಕೆ ಅನುಕೂಲ ಮಾಡಿಕೊಡುತ್ತದೆಯಷ್ಟೆ ಎಂದರು.

Also Read
ರವಿ ಬೆಳಗೆರೆ ʼಹೇಳಿ ಹೋಗು ಕಾರಣ’ ಕೃತಿ ನಕಲು ಮಾಡಿ ಮಾರಾಟ: ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಮೆಜಾನ್

ಪ್ರಕರಣದ ಹಿನ್ನೆಲೆ: ಪತ್ರಕರ್ತ ರವಿ ಬೆಳಗೆರೆ ರಚಿಸಿರುವ ʼಹೇಳಿ ಹೋಗು ಕಾರಣʼ ಕೃತಿಯು 2003ರ ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಕಟಣೆ ಕಂಡಿತ್ತು. ಈ ಕೃತಿಯ 31ನೇ ಮುದ್ರಣ ಏಪ್ರಿಲ್‌ 2005ರಲ್ಲಿ ಆಗಿದೆ. ಈ ಪುಸ್ತಕದ ಸಂಪೂರ್ಣ ಹಕ್ಕು ಸ್ವಾಮ್ಯವು ರವಿ ಅವರ ಪುತ್ರಿ ಭಾವನಾ ಬೆಳಗೆರೆ ಅವರ ಭಾವನ ಪ್ರಕಾಶನಕ್ಕೆ ಸೇರಿದೆ. ಮುದ್ರಣ ಮಾರಾಟ ಮತ್ತು ವಿತರಣೆ ಮಾಡುವ ಏಕೈಕ ಕಾನೂನು ಬದ್ಧ ಹಕ್ಕು ಪ್ರಕಾಶನಕ್ಕೆ ಸೇರಿದೆ. ಆದರೆ, ಇತ್ತೀಚೆಗೆ ಕೆಲವರು ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮೀಶೊ ಎಂಬ ಕಂಪನಿಗಳು ಪುಸ್ತಕ ನಕಲಿ ಮಾಡಿ/ಪೈರಸಿ ರೂಪದಲ್ಲಿ ಯಾವುದೇ ಅನುಮತಿ ಪಡೆಯದೇ ತಮ್ಮ ಆಪ್‌ಗಳ ಮೂಲಕ ಅಕ್ರಮವಾಗಿ ರಿಯಾಯಿತಿ ನೆಪದಲ್ಲಿ ಮೂಲ ಬೆಲೆಗಿಂತ (ಪ್ರಸ್ತುತ 350 ರೂಪಾಯಿ) ಕಡಿಮೆ ದರದಲ್ಲಿ 149 ರೂಪಾಯಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಅಕ್ರಮದಿಂದ ಪ್ರಕಾಶನಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಲೇಖಕರ ಹಕ್ಕುಗಳಿಗೆ ದಕ್ಕೆಯಾಗಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾಫಿರೈಟ್‌ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘಿಸಿರುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಭಾವನಾ ಫೆಬ್ರವರಿ 4ರಂದು ದೂರು ನೀಡಿದ್ದರು.

ಇದನ್ನು ಆಧರಿಸಿ ಸುಬ್ರಹ್ಮಣ್ಯಪುರ ಪೊಲೀಸರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಮೀಶೊ ಕಂಪನಿಗಳ ವಿರುದ್ಧ ಕಾಫಿರೈಟ್‌ ಕಾಯಿದೆ 1957ರ ಸೆಕ್ಷನ್‌ 51(1)(b), 63 ಅಡಿ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com