ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯಿಂದ ಮಾನಹಾನಿ ಪ್ರಕರಣ: ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

ರಾಹುಲ್‌ ಗಾಂಧಿ ಅವರ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಪ್ರತಿವಾದಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದ ನ್ಯಾಯಾಲಯ.
Karnataka HC & Rahul Gandhi
Karnataka HC & Rahul Gandhi
Published on

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ದಿನ ಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿದ್ದನ್ನು ಆಕ್ಷೇಪಿಸಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬಿಜೆಪಿ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಹುಲ್‌ ಗಾಂಧಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು “ಬಿಜೆಪಿಯು (ಜಾಹೀರಾತನ್ನು) ತಪ್ಪಾಗಿ ಅರ್ಥೈಸಿದೆ” ಎಂದರು.

ಇದನ್ನು ಆಲಿಸಿದ ಪೀಠವು ರಾಹುಲ್‌ ಗಾಂಧಿ ಅವರ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಪ್ರತಿವಾದಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.

2023ರ ಜೂನ್‌ನಲ್ಲಿ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ ಕಾಂಗ್ರೆಸ್‌, ಡಿ ಕೆ ಶಿವಕುಮಾರ್‌, ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಿತ್ತು.

ಪ್ರಕರಣದ ಹಿನ್ನೆಲೆ: ಬಿಜೆಪಿಯ ವಿರುದ್ಧ ಆಧಾರರಹಿತ, ಅತಾರ್ಕಿಕ ಮತ್ತು ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡಿರುವುದಲ್ಲದೇ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಜಾಹೀರಾತಿನಲ್ಲಿ “ಭ್ರಷ್ಟಾಚಾರ ದರ ಪಟ್ಟಿ” ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ. ಆರೋಪಿಗಳು ತಮಗೆ ಸರಿ ಎನಿಸಿದ್ದನ್ನು ರಂಜಕವಾಗಿ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಂದು ಬಿಜೆಪಿ ಆಕ್ಷೇಪಿಸಿದೆ.

ಕೆಎಸ್‌ಡಿಎಲ್‌ನಲ್ಲಿ ಹುದ್ದೆಗೆ 5-15 ಕೋಟಿ ರೂಪಾಯಿ, ಎಂಜಿನಿಯರ್‌ ಹುದ್ದೆಗೆ ರೂ. 1-5 ಕೋಟಿ, ಉಪ ನೋಂದಣಾಧಿಕಾರಿ ಹುದ್ದೆಗೆ ರೂ. 50 ಲಕ್ಷದಿಂದ- 5 ಕೋಟಿ, ಬೆಸ್ಕಾಂನಲ್ಲಿನ ಹುದ್ದೆಗೆ ರೂ. 1 ಕೋಟಿ, ಪಿಎಸ್‌ ಹುದ್ದೆಗೆ ರೂ. 80 ಲಕ್ಷ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರೂ. 50-70 ಲಕ್ಷ, ಪ್ರಾಧ್ಯಾಪಕರ ಹುದ್ದೆಗೆ ರೂ. 30-50  ಲಕ್ಷ, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೂ. 30 ಲಕ್ಷ, ಅಂತೆಯೇ ಕಿರಿಯ ಎಂಜಿನಿಯರ್‌, ಬಮೂಲ್‌, ಲೋಕೋಪಯೋಗಿ ಕಿರಿಯ ಎಂಜಿನಿಯರ್‌, ಪೇದೆಗಳ ಹುದ್ದೆಗೆ ಲಂಚ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಬಿಡಿಎ ಆಯುಕ್ತರು, ಕೆಪಿಎಸ್‌ಸಿ ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ, ಕುಲಪತಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಹುದ್ದೆಗಳಿಗೂ ಲಂಚದ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಬಹಿರಂಗವಾಗಿ ಹೇಳಿರುವುದರಿಂದ ಇದು ಕ್ರಿಮಿನಲ್‌ ಮಾನಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Also Read
ಸಿಎಂ ಸಿದ್ದರಾಮಯ್ಯ ವಿರುದ್ಧ ಮಾನಹಾನಿ ದಾವೆ ದಾಖಲಿಸಲು ಕೋರಿ ವಿಶೇಷ ನ್ಯಾಯಾಲಯಕ್ಕೆ ಅಬ್ರಹಾರಿಂದ ಖಾಸಗಿ ದೂರು ಸಲ್ಲಿಕೆ

ಕೋವಿಡ್‌ ಸಂಬಂಧಿತ ಸಾಮಗ್ರಿಗಳ ಪೂರೈಕೆ ಮತ್ತು ಖರೀದಿಯಲ್ಲಿ ಶೇ. 70ರಷ್ಟು ಕಮಿಷನ್‌ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ, ರಸ್ತೆ ನಿರ್ಮಾಣದಲ್ಲಿ 70:30ರಷ್ಟು ಲಂಚ ಪಡೆಯಲಾಗಿದೆ ಎಂದು ದೂರಿದ್ದಾರೆ. ಅಲ್ಲದೇ, ಶೇ 40ರ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಬಿಜೆಪಿಯ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಜನಪ್ರಿಯ ʼಡಬಲ್‌ ಎಂಜಿನ್‌ ಸರ್ಕಾರʼಕ್ಕೆ ಪರ್ಯಾಯವಾಗಿ ʼಟ್ರಬಲ್‌ ಎಂಜಿನ್‌ ಸರ್ಕಾರʼ ಎಂಬ ಪದ ಬಳಕೆ ಮಾಡಲಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕುಸಿಯುವಂತೆ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಫೋಟೊಗಳನ್ನು ಬಳಕೆ ಮಾಡಲಾಗಿದ್ದು, ಈ ಇಬ್ಬರೂ ನಕಲಿ ಮತ್ತು ಸಳ್ಳು ಹೇಳಿಕೆಗಳಿಗೆ ನೇರವಾಗಿ ಕಾರಣವಾಗಿದ್ದಾರೆ. ಈ ಜಾಹೀರಾತು ಪ್ರಕಟವಾದ ತಕ್ಷಣ ರಾಹುಲ್‌ ಗಾಂಧಿ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದರು. ನಕಲಿ ಮತ್ತು ಪೂರ್ವಾಗ್ರಹ ಪೀಡಿತ ಜಾಹೀರಾತು ನೀಡಲು ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ ಎಂದು ದೂರಿನಲ್ಲಿ ವಾದಿಸಲಾಗಿದೆ.

Kannada Bar & Bench
kannada.barandbench.com