ಸಿಎಂ ಸಿದ್ದರಾಮಯ್ಯ ವಿರುದ್ಧ ಮಾನಹಾನಿ ದಾವೆ ದಾಖಲಿಸಲು ಕೋರಿ ವಿಶೇಷ ನ್ಯಾಯಾಲಯಕ್ಕೆ ಅಬ್ರಹಾರಿಂದ ಖಾಸಗಿ ದೂರು ಸಲ್ಲಿಕೆ

ಆಗಸ್ಟ್‌ 9ರಂದು ಸಿಎಂಗೆ ₹ 2 ಕೋಟಿ ಪರಿಹಾರ ಕೋರಿ ಸಿವಿಲ್‌ ಮತ್ತು ಕ್ರಿಮಿನಲ್‌ ಮಾನಹಾನಿ ದಾವೆ ಹೂಡುವ ಎಚ್ಚರಿಕೆ ನೀಡಿ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಬೇಷರತ್‌ ಕ್ಷಮೆ ಕೋರಬೇಕು ಎಂದು ಲೀಗಲ್‌ ನೋಟಿಸ್‌ ಕಳುಹಿಸಿರುವ ಅಬ್ರಹಾಂ.
CM Siddaramaiah
CM Siddaramaiah
Published on

ತಮ್ಮ ವಿರುದ್ಧ ಕೀಳು ಅಭಿರುಚಿಯ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದು, ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಬೆಂಗಳೂರಿನ ಜನಪ್ರತಿನಿಧಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಈಚೆಗೆ ಖಾಸಗಿ ದೂರು ದಾಖಲಿಸಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮನವಿ ಆಧರಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಷೋಕಾಸ್‌ ನೋಟಿಸ್‌ ನೀಡಿದ ನಂತರ ಸಿದ್ದರಾಮಯ್ಯನವರು ತಮ್ಮ ವಿರುದ್ಧ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಬ್ರಹಾಂ ಆಪಾದಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯಿದೆ ಸೆಕ್ಷನ್‌ 356(1) ಮತ್ತು (2)ರ ಅಪರಾಧಕ್ಕಾಗಿ ಸಂಜ್ಞೇ ಪರಿಗಣಿಸಬೇಕು ಎಂದು ಖಾಸಗಿ ದೂರಿನಲ್ಲಿ ಅಬ್ರಹಾಂ ಮನವಿ ಮಾಡಿದ್ದಾರೆ.

2024ರ ಆಗಸ್ಟ್‌ 2ರಂದು ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಿ ಆದೇಶಿಸಿದ್ದ ಷೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯಿಸಿದ ಬಳಿಕ ಸಿಎಂ ಮಾಧ್ಯಮ ಗೋಷ್ಠಿ ಮಾಡಿದ್ದರು. ಅಲ್ಲಿ ತಮ್ಮ ವಿರುದ್ಧ ಮಾನಹಾನಿ, ಕಪೋಲಕಲ್ಪಿತ, ಸುಳ್ಳು ಆರೋಪಗಳನ್ನು ಮಾಡುವುದಲ್ಲದೇ ಏಕವಚನದಲ್ಲಿ ನಿಂದಿಸುವ ಮೂಲಕ ತನ್ನ ಘನತೆಗೆ ಹಾನಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ತನಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದೂ ಹೇಳಿದ್ದಾರೆ. ಇದನ್ನು ಕನ್ನಡ ಮತ್ತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ತನ್ನನ್ನು ಬ್ಲ್ಯಾಕ್‌ಮೇಲರ್‌ ಎಂದು ಜರಿದಿದ್ದಾರೆ. ಇದೇ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಾದ ಎಕ್ಸ್‌, ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಅಲ್ಲಿಯೂ ತೇಜೋವಧೆ ಮಾಡಲಾಗಿದೆ. ಈ ಸಂಬಂಧ ತನ್ನ ವಿರುದ್ಧ ನೀಡಿರುವ ಮಾನಹಾನಿ ಹೇಳಿಕೆ ಹಿಂಪಡೆದು, ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುವಂತೆ ಕೋರಿದ್ದರೂ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಆದರೆ, ತನ್ನ ವಿರುದ್ಧ ಮತ್ತದೇ ನಿರಾಧಾರ ಆರೋಪ, ತೇಜೋವಧೆ ಮುಂದುವರಿಸಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ತಾನು ಖಾಸಗಿ ದೂರು ದಾಖಲಿಸಿ, ಕಾನೂನು ಹೋರಾಟ ಮುಂದುವರಿಸಿರುವುರಿಂದ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅಬ್ರಹಾಂ ಸಲ್ಲಿಸಿರುವ ಮನವಿಯಲ್ಲೇನಿದೆ?

ಕೆಎಎಸ್‌ ಅಧಿಕಾರಿ ಡಾ. ಸುಧಾ ಅವರು ತನ್ನ ವಿರುದ್ಧ ಹೂಡಿರುವ ನಕಲಿ ಪ್ರಕರಣವನ್ನು ಉಲ್ಲೇಖಿಸಿ ತೇಜೋವಧೆ ಮಾಡುವ ಪ್ರಯತ್ನವನ್ನೂ ಆಗಸ್ಟ್‌ 9ರಂದು ಸಿದ್ದರಾಮಯ್ಯ ಮಾಡಿದ್ದಾರೆ. ಈ ಸಂಬಂಧ ₹ 2 ಕೋಟಿ ಪರಿಹಾರ ಕೋರಿ ಸಿವಿಲ್‌ ಮತ್ತು ಕ್ರಿಮಿನಲ್‌ ಮಾನಹಾನಿ ದಾವೆ ಹೂಡುವ ಎಚ್ಚರಿಕೆ ನೀಡಿ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಬೇಷರತ್‌ ಕ್ಷಮೆ ಕೋರಬೇಕು ಎಂದು ಸೆಪ್ಟೆಂಬರ್‌ 9ರಂದು ಲೀಗಲ್‌ ನೋಟಿಸ್‌ ನೀಡಲಾಗಿತ್ತು. ಅದಕ್ಕೂ ಸಿದ್ದರಾಮಯ್ಯ ಅವರಿಂದ ಉತ್ತರ ಬಂದಿಲ್ಲ ಎಂದು ವಿವರಿಸಲಾಗಿದೆ.

Kannada Bar & Bench
kannada.barandbench.com