

“ಮುಸಲ್ಮಾನ್ ಹುಡುಗಿಯರು ಗಂಡಸರಿಗಿಂತ ಡೇಂಜರ್. ಮುಸ್ಲಿಮ್ ಹುಡುಗರ ಸ್ನೇಹ ಮಾಡಿದರೂ ಪರವಾಗಿಲ್ಲ, ಮುಸ್ಲಿಮ್ ಹೆಣ್ಣು ಮಕ್ಕಳ ಸ್ನೇಹ ಮಾಡಲೇಬೇಡಿ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ಚಕ್ರವರ್ತಿ ಸೂಲಿಬೆಲೆ ಅಲಿಯಾಸ್ ಮಿಥುನ್ ಚಕ್ರವರ್ತಿ ದೇವಿದಾಸ್ ಶೇಟ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ತಡೆ ನೀಡಿದೆ.
ಧಾರವಾಡ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್‌ಕುಮಾರ್ ಹಂಚಾಟೆ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸುವ ಅಗತ್ಯವಿದೆ. ಮೇಲ್ನೋಟಕ್ಕೆ ತಡೆ ನೀಡುವ ಪ್ರಕರಣ ಇದಾಗಿರುವುದರಿಂದ ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಸೂಲಿಬೆಲೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಪೊಲೀಸ್ ಪೇದೆ ದೂರು ನೀಡಿದ್ದು, ಅವರು ಬಾದಿತರಲ್ಲದಿರುವುದರಿಂದ ದೂರು ನೀಡುವ ಯಾವುದೇ ಹಕ್ಕು ಅವರಿಗೆ ಇಲ್ಲ. ಚಕ್ರವರ್ತಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದು ಸಂವಿಧಾನದ 19ನೇ ವಿಧಿಯ ವ್ಯಾಪ್ತಿಗೆ ಬರುತ್ತದೆ. ಹಾಲಿ ಪ್ರಕರಣಕ್ಕೆ ಬಿಎನ್‌ಎಸ್ ಸೆಕ್ಷನ್ 196 ಅನ್ವಯಿಸುವುದಿಲ್ಲ” ಎಂದಿದ್ದರು.
ಪ್ರಕರಣದ ಹಿನ್ನೆಲೆ: 2026ರ ಏಪ್ರಿಲ್ 8ರಂದು ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು “ಮುಸಲ್ಮಾನ್ ಹುಡುಗಿಯರು ಗಂಡಸರಿಗಿಂತ ಡೇಂಜರ್. ಮುಸ್ಲಿಮ್ ಹುಡುಗರ ಸ್ನೇಹ ಮಾಡಿದರೂ ಪರವಾಗಿಲ್ಲ, ಮುಸ್ಲಿಮ್ ಹೆಣ್ಣು ಮಕ್ಕಳ ಸ್ನೇಹ ಮಾಡಲೇಬೇಡಿ ಎಂದು ಮನೆಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಹೇಳಿಕೊಡಿ. ಮುಸ್ಲಿಮ್ ಸ್ನೇಹಿತೆ ಪದೇಪದೇ ಮನೆಗೆ ಕರೆದಳು ಎಂದು ನಮ್ಮ ಹೆಣ್ಣು ಮಕ್ಕಳು ಹಾಳಾಗಿ ಹೋಗಲಿ ಎಂದು ಅವರ ಮನೆಗೆ ಹೋದಾಗ ಕುಡಿಯುವ ನೀರಿಗೆ ಏನೋ ಮತ್ತು ಬರುವ ಅಂಶ ಹಾಕಿ ಕೊಟ್ಟು ರಾಕ್ಷಸರಂತಿರುವ ತನ್ನ ಅಣ್ಣ ತಮ್ಮಂದಿರ ಕಡೆಗೆ ಕೊಟ್ಟು ವಿಡಿಯೊ ಕಳಿಸಿದ್ರೆ ಹೆಣ್ಣು ಮಕ್ಕಳ ಮುಗಿತು. ಅವರಿಗೆ ಜೀವನವೇ ಇರೋದಿಲ್ಲ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ಧಾರವಾಡ ಟೌನ್ ಪೊಲೀಸರು ಸ್ವಯಂಪ್ರೇರಿತವಾಗಿ ಬಿಎನ್‌ಎಸ್ ಸೆಕ್ಷನ್ 196(1) ಅಡಿ ಪ್ರಕರಣ ದಾಖಲಿಸಿದ್ದರು.