ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರ ಆಯ್ಕೆ ವಿವಾದ: ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ತಡೆ

ಸಮಿತಿಯ ಸದಸ್ಯ ಸ್ಥಾನಕ್ಕೆ ಗಣೇಶ್ ಕಿಣಿ ಹಾಗೂ ಚಂದ್ರಶೇಖರ್ ಶೆಟ್ಟಿ ನೀಡಿದ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ನಂತರ ನಡೆದ ಸಭೆಯಲ್ಲಿ ಶೆಟ್ಟಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದ ಮೇಲ್ಮನವಿದಾರರ ಪರ ವಕೀಲರು.
Karnataka High Court
Karnataka High Court

ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠವು ಗುರುವಾರ ಷರತ್ತುಬದ್ಧ ತಡೆಯಾಜ್ಞೆ ನೀಡಿದೆ.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚಂದ್ರಶೇಖರ ಶೆಟ್ಟಿ ಮತ್ತು ಸದಸ್ಯ ಗಣೇಶ್ ಕಿಣಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಚಂದ್ರಶೇಖರ ಶೆಟ್ಟಿ ಮತ್ತು ಸದಸ್ಯ ಸ್ಥಾನದಲ್ಲಿ ಗಣೇಶ್ ಕಿಣಿ ಮುಂದುವರಿಯಬಹುದು. ಅವರು ಸಮಿತಿಯು ಸಭೆ ಹಾಗೂ ದೈನಂದಿನ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಮತದಾನ ಮಾಡುವಂತಿಲ್ಲ” ಎಂಬ ಷರತ್ತು ವಿಧಿಸಿ ಪೀಠವು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಮೇಲ್ಮನವಿದಾರರ ಪರ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್ ಅವರು “ಸಮಿತಿಯ ಸದಸ್ಯ ಸ್ಥಾನಕ್ಕೆ ಗಣೇಶ್ ಕಿಣಿ ಹಾಗೂ ಚಂದ್ರಶೇಖರ್ ಶೆಟ್ಟಿ ನೀಡಿದ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ನಂತರ ನಡೆದ ಸಭೆಯಲ್ಲಿ ಶೆಟ್ಟಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಹೀಗಾಗಿ, ಏಕ ಸದಸ್ಯ ಪೀಠದ ಆದೇಶ ಕಾನೂನುಬಾಹಿರವಾಗಿದೆ” ಎಂದು ತಿಳಿಸಿದರು.

ಪ್ರತಿವಾದಿಗಳಾದ ಉಡುಪಿಯ ಗೋಪಾಲಕೃಷ್ಣ ಮತ್ತಿತರರು ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಸಮಿತಿ ಸದಸ್ಯರಲ್ಲದವರು ಮತ್ತು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ರಾಜೀನಾಮೆ ನೀಡಿದ ನಂತರ ಹಿಂಪಡೆಯುವುದಕ್ಕೆ ಇದು ಸರ್ಕಾರಿ ಉದ್ಯೋಗವಲ್ಲ. ಆದ್ದರಿಂದ ಸದಸ್ಯರಲ್ಲದ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸಿದ ಏಕ ಸದಸ್ಯ ಪೀಠದ ಆದೇಶ ಸೂಕ್ತವಾಗಿದೆ. ಅದರಲ್ಲಿ ವಿಭಾಗೀಯ ನ್ಯಾಯಪೀಠ ಮಧ್ಯಪ್ರವೇಶಿಸಬಾರದು” ಎಂದು ಕೋರಿದರು.

Also Read
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಗಣೇಶ್ ಕಿಣಿ ಹಾಗೂ ಚಂದ್ರಶೇಖರ್ ಶೆಟ್ಟಿ ಸೇರಿದಂತೆ 9 ಮಂದಿಯನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಧಾರ್ಮಿಕ ಪರಿಷತ್ತು 2020ರ ಅಕ್ಟೋಬರ್ 27ರಂದು ಆದೇಶಿಸಿತ್ತು. ಆದರೆ, 2021ರ ಮಾರ್ಚ್‌ 24ರಂದು ಗಣೇಶ್ ಕಿಣಿ ಹಾಗೂ ಏಪ್ರಿಲ್‌ 15ರಂದು ಚಂದ್ರಶೇಖರ ಶೆಟ್ಟಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಏಪ್ರಿಲ್‌ 26ರಂದು ನಡೆದ ವ್ಯವಸ್ಥಾಪನಾ ಸಭೆಯಲ್ಲಿ ಅವರಿಬ್ಬರು ಭಾಗವಹಿಸಿದ್ದರು. ಸಭೆಯಲ್ಲಿ ಸದಸ್ಯರ ಮತದಾನದ ಮೇರೆಗೆ ಚಂದ್ರಶೇಖರ ಶೆಟ್ಟಿ ಅವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಗಿತ್ತು.

ಈ ಕ್ರಮವನ್ನು ಪ್ರಶ್ನಿಸಿ ಉಡುಪಿಯ ಗೋಪಾಲಕೃಷ್ಣ ಮತ್ತಿತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ, ಚಂದ್ರಶೇಖರ ಶೆಟ್ಟಿ ಅವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಸಮಿತಿ ಸಭೆಯ ನಡಾವಳಿಯನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com