

ಮತ ತಿರುಚಿದ ಆರೋಪ ಸಂಬಂಧ ಶೃಂಗೇರಿಯ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಡಿ ಎನ್ ಜೀವರಾಜ್ ವಿರುದ್ಧ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಕರ್ನಾಟಕ ಹೈಕೋರ್ಟ್ ಜೂನ್ 3ರವರೆಗೆ ವಿಸ್ತರಿಸಿದೆ.
ಮತ ತಿರುಚಿದ ಆರೋಪದ ಮೇಲೆ ಕಾಂಗ್ರೆಸ್ ಏಜೆಂಟ್ ಸುಧೀರ್ ಮುರೋಳ್ಳಿ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ಟೌನ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದತಿ ಕೋರಿ ಜೀವರಾಜ್, ಚಿಕ್ಕಮಗಳೂರು ಹಿಂದಿನ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮತ್ತು ಅಂದಿನ ಚುನಾವಣಾಧಿಕಾರಿ ಟಿ ಆರ್ ವೇದಮೂರ್ತಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಕರಣದ ದೂರದಾರ ಸುಧೀರ್ ಕುಮಾರ್ ಮುರೋಳ್ಳಿ ಅವರ ಪರ ವಕೀಲರು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅದನ್ನು ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಎಫ್ಐಆರ್‌ಗೆ ತಡೆ ನೀಡಿ ಮೇ 5ರಂದು ಹೊರಡಿಸಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿತು. ಈ ಆದೇಶವನ್ನು ವೇದಮೂರ್ತಿ ಅವರ ಅರ್ಜಿಗೂ ಅನ್ವಯಿಸಿತು. ಹಾಗೆಯೇ ಈ ಅರ್ಜಿ ಸಂಬಂಧ ಪ್ರತಿವಾದಿಗಳಾದ ರಾಜ್ಯ ಸರ್ಕಾರ (ಚಿಕ್ಕಮಗಳೂರು ಟೌನ್ ಠಾಣಾ ಪೊಲೀಸರು) ಮತ್ತು ದೂರುದಾರ ಸುಧೀರ್ ಮುರೋಳ್ಳಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ಟಿ ಡಿ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು. ರಾಜೇಗೌಡರ ಆಯ್ಕೆ ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ಗೆ ಚುನಾವಣಾ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ , ತಿರಸ್ಕೃತವಾಗಿರುವ 279 ಅಂಚೆ ಮತಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸುವಂತೆ 2026ರ ಏಪ್ರಿಲ್ 6ರಂದು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2026ರ ಮೇ 2 ಹಾಗೂ 3ರಂದು ಚುನಾವಣಾಧಿಕಾರಿ ಗೌರವ್ ಶೆಟ್ಟಿ, ನ್ಯಾಯಾಲಯದ ನಿರ್ದೇಶನದ ಅನುಸಾರ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಕಾಂಗ್ರೆಸ್ ರಾಜೇಗೌಡ ವಿರುದ್ಧ ಜೀವರಾಜ್ ವಿಜೇತರು ಎಂದು ಫಾರ್ಮ್ 21C ಪತ್ರ ನೀಡಿದ್ದರು.
ಅದರ ಬೆನ್ನಲ್ಲೇ 2026ರ ಮೇ 3ರಂದು ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ನ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿ, 2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ದೇವರಾಜ್, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರ ಅನ್ವಯ ಪೋಲೀಸರು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120B (ಪಿತೂರಿ), and 149 (ಸಮಾನ ಉದ್ದೇಶ) ಜೊತೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 136ರ (ಚುನಾವಣಾ ಅಕ್ರಮ) ಅಡಿ ಎಫ್ ಐ ಆರ್ ದಾಖಲಿಸಿದ್ದರು.