

ಅಂಚೆ ಮತಗಳ ಮರು ಎಣಿಕೆಯಲ್ಲಿ ಚಿಕ್ಕಮಗಳೂರಿನ ಶೃಂಗೇರಿಯ ಬಿಜೆಪಿ ಶಾಸಕಾರಗಿ ಆಯ್ಕೆಯಾಗಿರುವ ಡಿ ಎನ್ ಜೀವರಾಜ್ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೌಖಿಕವಾಗಿ ಮಂಗಳವಾರ ಹೇಳಿರುವ ಕರ್ನಾಟಕ ಹೈಕೋರ್ಟ್, ಪ್ರಕರಣಕ್ಕೆ ತಡೆ ನೀಡಿದೆ.
ಮತ ತಿರುಚಿದ ಆರೋಪದ ಮೇಲೆ ಕಾಂಗ್ರೆಸ್ ಏಜೆಂಟ್ ಸುಧೀರ್ ಮುರೋಳ್ಳಿ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಜೀವರಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.
ಜೀವರಾಜ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು 13.5.2023ರಲ್ಲಿ ನಡೆದಿದೆ ಎನ್ನಲಾದ ಆರೋಪ ಆಧರಿಸಿ ಈಗ ಪ್ರಕರಣ ದಾಖಲಿಸಲಾಗಿದೆ. ಸೋತ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದ್ದು, ಇಲ್ಲಿ ರಾಜಕೀಯ ದುರುದ್ದೇಶವಿದೆ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಮತಗಳ ಮೇಲೆ ಡಬಲ್ ಟಿಕ್ ಇದೆ. ಈ ವಿಚಾರವನ್ನು ಸುಧೀರ್ ಅವರು ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರ ಗಮನಕ್ಕೆ ಮರು ಎಣಿಕೆ ನಡೆಯುವುದಕ್ಕೆ ಮುನ್ನವೇ ತಂದಿದ್ದಾರೆ. ಇಲ್ಲಿ ಮತ ತಿರುಚುವ ಕೃತ್ಯ ನಡೆದಿದೆ” ಎಂದರು.
ಇದರಿಂದ ಕೆರಳಿದ ಪೀಠವು 13.5.2023ರಲ್ಲಿ ಮತ ತಿರುಚಿರುವುದು ನಡೆದಿದೆ ಎನ್ನುವುದಾದರೆ ಆ ವಿಚಾರವನ್ನು ಮರು ಎಣಿಕೆಗೆ ಆದೇಶಿಸಿದ ನ್ಯಾಯಾಲಯದ ಗಮನಕ್ಕೆ ತಂದು, ನಿರ್ದೇಶನ ಪಡೆದು ಮುಂದುವರಿಯಬೇಕಿತ್ತು. ಹಾಲಿ ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅದನ್ನು ಮಾಡಬೇಕಿತ್ತು. ದೂರಿನಲ್ಲಿ ಗೌರವ್ ಶೆಟ್ಟಿಯನ್ನು ಏಕೆ ಆರೋಪಿ ಮಾಡಲಾಗಿಲ್ಲ. ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಅಂದಿನ ಜಿಲ್ಲಾಧಿಕಾರಿಯನ್ನು ಏಕೆ ಆರೋಪಿಗಳನ್ನಾಗಿಸಲಾಗಿದೆ. ದೂರು ದಾಖಲಿಸುವುದಕ್ಕೂ ಮುನ್ನ ಅವರ ವಾದ ಆಲಿಸಬೇಕಿತ್ತಲ್ಲವೇ. ಇದು ಸಹಜ ನ್ಯಾಯತತ್ವವೇ ಎಂದು ಪೊಲೀಸರನ್ನು ಪ್ರಶ್ನಿಸಿತು.
ಮುಂದುವರಿದು, “ಪ್ರಕರಣದ ತನಿಖಾಧಿಕಾರಿ ಎಲ್ಲಿ?” ಎಂದ ಪೀಠವು ತನಿಖಾಧಿಕಾರಿ ಮುಂದೆ ಬರುತ್ತಿದ್ದಂತೆ ಗೌರವ್ ಶೆಟ್ಟಿಯನ್ನು ಏಕೆ ಆರೋಪಿ ಮಾಡಿಲ್ಲ. ಎಲ್ಲಿಂದ ಬಂದಿದ್ದೀರಿ. ನಿಮಗೆ ಕಣ್ಣು ಕಾಣುವುದಿಲ್ಲವೇ? ಯಾರೋ ಎಸಗಿದ ಪ್ರಮಾದಕ್ಕೆ ಇನ್ಯಾರ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದೀರಿ? ನಿಮ್ಮನ್ನು ಅಮಾನತು ಮಾಡಲು ಆದೇಶ ಬರೆಯಲಾಗುವುದು” ಎಂದಿತು.
“ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸ ಮಾಡಬಾರದು. ಆದರೆ, ಈ ಪ್ರಕರಣದಲ್ಲಿ ಅದು ಕಾಣುತ್ತದೆ. ರಾಜಕೀಯ ಒತ್ತಡಕ್ಕೆ ಮಣಿದು ಎಫ್‌ಐಆರ್ ದಾಖಲಿಸಲಾಗಿದೆ. ಒಂದೊಮ್ಮೆ ರಾಜೇಗೌಡರ ವಿರುದ್ಧ ಇಂಥದ್ದೇ ಪ್ರಕರಣ ದಾಖಲಿಸಿದ್ದರೂ ಅದಕ್ಕೆ ತಡೆ ನೀಡುತ್ತಿದ್ದೆ. ಹಿಂದಿನ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯನ್ನು ಆರೋಪಿಗಳನ್ನಾಗಿಸುವುದು ಸರಿಯೇ? ಪರಿಸ್ಥಿತಿ ಹೀಗಾದರೆ ಯಾವ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡಲ್ಲ” ಎಂದಿತು.
ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಿದ ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲೇಖಿಸಿದ ಪೀಠವು ಇಲ್ಲಿಯೂ ಅಂಥದ್ದೇ ಪರಿಸ್ಥಿತಿ ಬರಲಿದೆ. ನ್ಯಾಯಾಂಗ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನು ನೇಮಿಸುವ ಸ್ಥಿತಿ ಬರಲಿದೆ. ಆ ಹಂತಕ್ಕೆ ಇದು ಹೋಗಲಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದಿತು.
ಅಂತಿಮವಾಗಿ ಪೀಠವು ಬಿ ಎ ಬೆಳ್ಳಿಯಪ್ಪ ಅವರು ಮೇ 7ರಂದು ಅಗತ್ಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಅವರಿಗೆ ಅನುಮತಿಸಲಾಗಿದೆ. ಅಂತೆಯೇ ಜೀವರಾಜ್ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲಾಗಿದ್ದು, ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆದೇಶಿಸಿತು.
ಅಲ್ಲದೇ, ತಮ್ಮ ವಿರುದ್ಧದ ಎಫ್‌ಐಆರ್‌ಗೆ ತಡೆ ಕೋರಿ ಅಂದಿನ ಜಿಲ್ಲಾಧಿಕಾರಿ ರಮೇಶ್ ಸಲ್ಲಿಸಿರುವ ಅರ್ಜಿಯಲ್ಲಿಯೂ ಇದೇ ಆದೇಶ ಮಾಡಲಾವುದು ಎಂದು ಪೀಠ ಮೌಖಿಕವಾಗಿ ಹೇಳಿ, ವಿಚಾರಣೆಯನ್ನು 7ಕ್ಕೆ ಮುಂದೂಡಿತು.
ಜೀವರಾಜ್, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ಪ್ರಶ್ನಿಸಿ ಜೀವರಾಜ್ ಮತ್ತು ರಮೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.