ಹೆದ್ದಾರಿಯಲ್ಲಿ ದೀಪಗಳ ಅಳವಡಿಕೆ: ವಕೀಲ ರಮೇಶ್‌ ನಾಯಕ್‌ಗೆ ವಿಧಿಸಿದ್ದ ರೂ ₹50 ಸಾವಿರ ದಂಡದ ಆದೇಶ ಹಿಂಪಡೆದ ಹೈಕೋರ್ಟ್‌

ಹೆದ್ದಾರಿಯಲ್ಲಿ ಬೀದಿ ದೀಪ ಆಳವಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜೆಎಎಸ್‌ಎಸ್ ಟೋಲ್ ರೋಡ್ ಕಂಪೆನಿ ನಡುವಿನ ಒಪ್ಪಂದದ ದಾಖಲೆಗಳನ್ನು ರಮೇಶ್‌ ಕುಮಾರ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Karnataka High Court
Karnataka High Court
Published on

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32.5 ಕಿ.ಮೀ ಉದ್ದದ ರಸ್ತೆಯಲ್ಲಿ ಹೆದ್ದಾರಿ ದೀಪಗಳನ್ನು ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ವಿಧಿಸಿದ್ದ ₹50,000 ದಂಡ ವಿಧಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಹಿಂಪಡೆದಿದೆ.

ವಕೀಲ ಎಲ್ ರಮೇಶ್ ನಾಯಕ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ನ್ಯಾಯಪೀಠವು 2021ರ ಸೆಪ್ಟೆಂಬರ್‌ 22ರಂದು ವಜಾಗೊಳಿಸಿತ್ತು.

ಹೆದ್ದಾರಿಯಲ್ಲಿ ಕಡ್ಡಾಯವಾಗಿ ದೀಪಗಳನ್ನು ಅಳವಡಿಸಬೇಕು ಎಂಬುವುದನ್ನು ಪ್ರತಿಪಾದಿಸುವ ನಿಯಮಗಳು ಮತ್ತು ಆ ಕುರಿತ ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಒದಗಿಸಿಲ್ಲ. ಟೋಲ್ ಪಾವತಿ ವಿಚಾರದಲ್ಲಿ ಟೋಲ್ ಸಂಗ್ರಹ ಸಂಸ್ಥೆ ವಿರುದ್ಧ ಅರ್ಜಿದಾರರಿಗೆ ಸಮಸ್ಯೆಯಿದ್ದು, ಎಫ್‌ಐಆರ್ ಸಹ ದಾಖಲಿಸಿದ್ದಾರೆ. ಮತ್ತೊಂದೆಡೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಇದು ಕಾನೂನಿನ ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್ ಅರ್ಜಿದಾರರಿಗೆ ₹25,000 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ವಾದ ಮಂಡಿಸಿದ್ದ ರಮೇಶ್ ನಾಯಕ್‌ ಅವರು “ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದಿರುವ ಜೆಎಎಸ್‌ಎಸ್ ಟೋಲ್ ರೋಡ್ ಕಂಪೆನಿ ನಡುವಿನ ಒಪ್ಪಂದ ನಡೆದಿದೆ. ಕಾಲಾವಕಾಶ ನೀಡಿದರೆ ಆ ಕುರಿತ ದಾಖಲೆ ಸಲ್ಲಿಸಲಾಗುವುದು. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದಲೇ ಅರ್ಜಿ ದಾಖಲಿಸಲಾಗಿದೆ. ಅಗತ್ಯವಾದರೆ ಆ ಕುರಿತು ನನ್ನ ವಿರುದ್ಧ ವಿಚಾರಣೆಗೂ ಆದೇಶಿಸಬಹುದು. ಸ್ವಹಿತಾಸಕ್ತಿಯಿಂದ ಅರ್ಜಿ ದಾಖಲಿಸಿರುವುದು ಸಾಬೀತಾದರೆ ₹50,000 ದಂಡ ಬೇಕಾದರೂ ಪಾವತಿಸುತ್ತೇನೆ” ಎಂದು ಬೇಸರದಿಂದ ನುಡಿದಿದ್ದರು.

Also Read
ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌; ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ

ಅದನ್ನು ಪರಿಗಣಿಸಿ ದಂಡದ ಮೊತ್ತವನ್ನು ₹50,000ಗೆ ಹೆಚ್ಚಿಸಿದ್ದ ಹೈಕೋರ್ಟ್, ಅದನ್ನು 30 ದಿನಗಳಲ್ಲಿ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ನಿರ್ದೇಶಿಸಿತ್ತು. ಸದ್ಯ ಆದೇಶ ಪ್ರತಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅರ್ಜಿದಾರರಿಗೆ ವಿಧಿಸಿದ್ದ ದಂಡವನ್ನು ಕೈಬಿಟ್ಟಿದೆ.

ಪ್ರಕರಣದಲ್ಲಿ ₹50,000 ದಂಡ ವಿಧಿಸಿರುವುದನ್ನು ಹಿಂಪಡೆಯುವಂತೆ ಕೋರಿ ವಕೀಲ ರಮೇಶ್ ನಾಯಕ, ಸೆಪ್ಟೆಂಬರ್‌ 27ರಂದು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಹೆದ್ದಾರಿಯಲ್ಲಿ ಬೀದಿ ದೀಪ ಆಳವಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜೆಎಎಸ್‌ಎಸ್ ಟೋಲ್ ರೋಡ್ ಕಂಪೆನಿ ನಡುವಿನ ಒಪ್ಪಂದದ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Kannada Bar & Bench
kannada.barandbench.com