[ಜಾತಿಯಾಧಾರಿತ ನಿಗಮ, ಮಂಡಳಿ ರಚನೆ] ಜಾತ್ಯತೀತ ಪರಿಕಲ್ಪನೆ ಉಲ್ಲಂಘನೆ ಪರಿಶೀಲಿಸಲು ಮುಂದಾದ ಹೈಕೋರ್ಟ್‌

ಒಬಿಸಿಯಲ್ಲಿ 500ಕ್ಕೂ ಹೆಚ್ಚು ಜಾತಿ, 101 ಎಸ್‌ಸಿ, ಎಸ್‌ಟಿ ಅಡಿ 50 ಜಾತಿಗಳನ್ನು ಗುರುತಿಸಲಾಗಿದೆ. ಹೀಗಿರುವಾಗ, ಮರಾಠಾ, ವೀರಶೈವ ಲಿಂಗಾಯತ, ಆರ್ಯ ವೈಶ್ಯ, ಬ್ರಾಹ್ಮಣ ಸಮುದಾಯ ಕೇಂದ್ರಿತವಾಗಿ ನಿಗಮ ಸೃಷ್ಟಿಸಲಾಗಿದೆ ಎಂದು ಆಕ್ಷೇಪ.
[ಜಾತಿಯಾಧಾರಿತ ನಿಗಮ, ಮಂಡಳಿ ರಚನೆ] ಜಾತ್ಯತೀತ ಪರಿಕಲ್ಪನೆ ಉಲ್ಲಂಘನೆ ಪರಿಶೀಲಿಸಲು ಮುಂದಾದ ಹೈಕೋರ್ಟ್‌
Karnataka HC's Chief Justice Ritu Raj Awasthi and Ex CM B S Yediyurappa

ಜಾತಿಯಾಧಾರಿತ ನಿಗಮ ಮತ್ತು ಮಂಡಳಿಗಳನ್ನು ರಚಿಸಿರುವುದು ಸಂವಿಧಾನದಲ್ಲಿ ಮಿಳಿತವಾಗಿರುವ ಜಾತ್ಯತೀತ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಮನವಿಗಳ ನಿರ್ವಹಣೆಯ ಕುರಿತು ರಾಜ್ಯ ಸರ್ಕಾರ ಎತ್ತಿದ್ದ ಪ್ರಾಥಮಿಕ ತಕರಾರನ್ನು ವಜಾ ಮಾಡಿರುವ ಪೀಠವು ಅಂತಿಮ ವಿಚಾರಣೆಗೆ ಅಸ್ತು ಎಂದಿರುವುದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತಿತರರು ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸುಮಾರು ಎರಡೂವರೆ ತಾಸು ವಾದ-ಪ್ರತಿವಾದ ಆಲಿಸಿದ ಪೀಠವು ಮೂರು ಪ್ರಶ್ನೆಗಳು ನ್ಯಾಯಾಲಯದ ಮುಂದಿವೆ ಎಂದು ಆದೇಶದಲ್ಲಿ ಹೇಳಿದೆ. ಅವುಗಳೆಂದರೆ:

  1. ಆಯ್ದ ಜಾತಿಗಳನ್ನು ಕೇಂದ್ರೀಕರಿಸಿ ನಿಗಮ ಅಥವಾ ಮಂಡಳಿಗಳನ್ನು ಸೃಷ್ಟಿಸಲಾಗಿದ್ದು, ಅವುಗಳಿಗೆ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ವೆಚ್ಚ ಮಾಡುತ್ತಿರುವುದು ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಪರಿಕಲ್ಪನೆಯ ಉಲ್ಲಂಘನೆಯಾಗುತ್ತದೆಯೇ?

  2. ಜಾತಿಯಾಧಾರಿತವಾಗಿ ನಿಗಮ ಅಥವಾ ಮಂಡಳಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿರುವುದರಿಂದ ಅವುಗಳಿಗೆ ಸಂವಿಧಾನದ ಪ್ರವೇಶಿಕೆ 32 ಮತ್ತು ಪಟ್ಟಿ 2ರಲ್ಲಿ ರಾಜ್ಯ ಸರ್ಕಾರಕ್ಕೆ ಕಾನೂನಿನ ಅನುಮತಿ ಇದೆಯೇ?

  3. ಕೆಲವೇ ಕೆಲವು ಜಾತಿಗಳ ಅಭಿವೃದ್ಧಿಗೆ ಸಾರ್ವಜನಿಕ ಹಣವನ್ನು ವಿನಿಯೋಗಿಸುವುದು ಸಂವಿಧಾನದ 27ನೇ ವಿಧಿಯ ಉಲ್ಲಂಘನೆಯಾಗುತ್ತದೆಯೇ? ಎಂಬುದು ಸೇರಿದಂತೆ ಪಕ್ಷಕಾರರು ಎತ್ತಿರುವ ವಿವಿಧ ಪ್ರಶ್ನೆಗಳನ್ನು ಪರಿಗಣಿಸುವ ಅಗತ್ಯವಿದೆ ಎಂದಿದ್ದು, ಅಂತಿಮ ವಿಚಾರಣೆಯನ್ನು ಫೆಬ್ರವರಿ 2ರಂದು ನಡೆಸುವುದಾಗಿ ಹೇಳಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಅರ್ಜಿಗಳ ಕುರಿತು ಪ್ರಾಥಮಿಕ ಆಕ್ಷೇಪಣೆ ಎತ್ತಿದರು. “ಅರ್ಜಿದಾರರು ಹೇಳುತ್ತಿರುವಂತೆ ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ಎಲ್ಲಾ ಮಂಡಳಿಗಳನ್ನು ಮನವಿಯಲ್ಲಿ ಪಕ್ಷಕಾರರನ್ನಾಗಿಸಲಾಗಿಲ್ಲ. ಅಲ್ಲದೇ, ಇಂಥ ನಿಗಮ ಅಥವಾ ಮಂಡಳಿ ಸೃಷ್ಟಿಸುವ ಸಂಬಂಧ ಹೊರಡಿಸಿರುವ ಎಲ್ಲಾ ಸರ್ಕಾರಿ ಆದೇಶಗಳನ್ನು ಪ್ರಶ್ನಿಸಲಾಗಿಲ್ಲ” ಎಂದರು.

“ಸರ್ಕಾರಿ ನಿಗದಿಪಡಿಸುವ ಅನುದಾನವನ್ನು ಬಳಸಿ ಕಾರ್ಯಕ್ರಮ ಜಾರಿ ಮಾಡುವುದು ಮಾತ್ರ ನಿಗಮ ಅಥವಾ ಮಂಡಳಿಗಳ ಕೆಲಸ. ಹೀಗಾಗಿ, ಅವು ಕಾರ್ಯಕ್ರಮ ಜಾರಿ ಸಂಸ್ಥೆಗಳಷ್ಟೆ. ಎಲ್ಲಿಯವರೆಗೆ ಕರ್ನಾಟಕ ಧನ ವಿನಿಯೋಗ ಕಾಯಿದೆ 2021 ಅನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೆ ಪ್ರತ್ಯೇಕವಾಗಿ ಈ ನಿಗಮ ಅಥವಾ ಮಂಡಳಿಗಳ ಸೃಷ್ಟಿಯನ್ನು ಪ್ರಶ್ನಿಸಲಾಗದು” ಎಂದರು.

“ನಿಗಮಗಳ ಸೃಷ್ಟಿಯ ಬಗ್ಗೆ ಅರ್ಜಿದಾರರಿಗೆ ಚೆನ್ನಾಗಿ ತಿಳಿದಿದೆ. ಅಸ್ತಿತ್ವದಲ್ಲಿರುವ ಹಲವು ನಿಗಮಗಳನ್ನು ದಶಕಗಳಿಗೂ ಹಿಂದೆಯೇ ಸೃಷ್ಟಿಸಲಾಗಿದೆ. ಆದರೆ, ಕಳೆದ ವರ್ಷ ಅವುಗಳ ಸೃಷ್ಟಿಯನ್ನು ಪ್ರಶ್ನಿಸಿ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಧನ ವಿನಿಯೋಗ ಕಾಯಿದೆಯ ಆಧಾರದಲ್ಲಿ ಸಂಚಿತ ನಿಧಿಯಿಂದ ಅನುದಾನ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಲಾಗದು. ಇದು ಸಂಪೂರ್ಣವಾಗಿ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವುದಾಗಿದೆ” ಎಂದರು.

ಇಂದಿರಾ ಸಾಹ್ನಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ನಾವದಗಿ ಅವರು ಹಿಂದುಳಿದಿರುವಿಕೆಯನ್ನು ಪತ್ತೆಹಚ್ಚಲು ಜಾತಿಯನ್ನು ಆಧರಿಸಬಹುದು ಎಂದರು. “ಆಕ್ಷೇಪಾರ್ಹವಾದ ಎಲ್ಲಾ ನಿಗಮಗಳು ಮೂಲಭೂತವಾಗಿ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದ ನಿಗಮಗಳಾಗಿವೆ” ಎಂದರು.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ವಿಜಯ್‌ ಶಂಕರ್‌ ಅವರು “ಅಡ್ವೊಕೇಟ್‌ ಜನರಲ್‌ ಅವರ ವಾದಕ್ಕೆ ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ಹಿಂದುಳಿದಿರುವಿಕೆಯನ್ನು ಜಾತಿಯಾಧಾರದಲ್ಲಿ ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಸಂವಿಧಾನದ ಪ್ರವೇಶಿಕೆ 32 ಮತ್ತು ಪಟ್ಟಿ 2ರ ಅಡಿ ರಾಜ್ಯ ಸರ್ಕಾರವು ಜಾತಿಯಾಧಾರಿತವಾಗಿ ನಿಗಮಗಳನ್ನು ಸೃಷ್ಟಿಸಬಹುದಾಗಿದೆ ಎಂದು ಹೇಳಲಾಗಿದೆ. ಭಾರತೀಯ ಕಂಪೆನಿ ಕಾಯಿದೆ 2013ರ ಸೆಕ್ಷನ್‌ 8ರ ಅಡಿ ಈ ಎಲ್ಲಾ ನಿಗಮಗಳನ್ನು ನೋಂದಾಯಿಸಲಾಗಿದೆ” ಎಂದರು.

ಸರ್ಕಾರದ ಆಕ್ಷೇಪವನ್ನು ತೀವ್ರವಾಗಿ ವಿರೋಧಿಸಿದ ಅರ್ಜಿದಾರರ ಪೈಕಿ ಒಂದಾದ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಜಾತಿಯಾಧಾರಿತವಾಗಿ ನಿಗಮಗಳನ್ನು ಸೃಷ್ಟಿಸಿರುವುದು ಸಂಪೂರ್ಣವಾಗಿ ಸ್ವೇಚ್ಛೆ, ತಾರತಮ್ಯದಿಂದ ಕೂಡಿದ ಕ್ರಮವಾಗಿದ್ದು, ರಾಜಕೀಯ ಉದ್ದೇಶದಿಂದ ನಿಗಮ ಅಥವಾ ಮಂಡಳಿಯನ್ನು ರಚಿಸಲಾಗಿದೆ. ರಾಜ್ಯ ಸರ್ಕಾರದ ದಾಖಲೆಯ ಪ್ರಕಾರ 500ಕ್ಕೂ ಹೆಚ್ಚು ಹಿಂದುಳಿದ ವರ್ಗಗಳಿದ್ದು, 101 ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಡಿ 50 ಜಾತಿಗಳನ್ನು ಗುರುತಿಸಲಾಗಿದೆ. ಹೀಗಿರುವಾಗ, ಮರಾಠಾ, ವೀರಶೈವ ಲಿಂಗಾಯತ, ಆರ್ಯ ವೈಶ್ಯ, ಕಾಡುಗೊಲ್ಲ, ಬ್ರಾಹ್ಮಣ ಸಮುದಾಯ ಕೇಂದ್ರಿತವಾಗಿ ನಿಗಮ ಸೃಷ್ಟಿಸಲಾಗಿದೆ. ಇದು ತಾರತಮ್ಯದ ಕ್ರಮವಾಗಿದ್ದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ” ಎಂದರು.

Also Read
ಇಷ್ಟೊಂದು ಜಾತಿಯಾಧಾರಿತ ನಿಗಮ, ಮಂಡಳಿ ರಚನೆಯನ್ನು ನಾನು ನೋಡಿಲ್ಲ: ಸಿಜೆ ರಿತುರಾಜ್‌ ಅವಸ್ಥಿ ಅಚ್ಚರಿ

“ಕರ್ನಾಟಕ ಧನ ವಿನಿಯೋಗ ಕಾಯಿದೆಯು ಈ ನಿಗಮಗಳಿಗೆ ಯಾವುದೇ ಅನುದಾನ ಹಂಚಿಕೆ ಮಾಡದಿರುವುದರಿಂದ ಕಾಯಿದೆಯನ್ನು ಪ್ರಶ್ನಿಸಲಾಗಿಲ್ಲ. ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ಈಗ ಮನವಿಯಲ್ಲಿ ಉಲ್ಲೇಖಿಸದೇ ಇರುವ ನಿಗಮಗಳನ್ನು ಅರ್ಜಿಯಲ್ಲಿ ಸೇರಿಸಲು ಸಿದ್ಧವಾಗಿದ್ದೇವೆ” ಎಂದರು.

ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್‌ ವರ್ಸಸ್‌ ಕೇರಳ ರಾಜ್ಯ (ಶಬರಿಮಲೆ ತೀರ್ಪು) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ಪ್ರೊ. ರವಿವರ್ಮ ಕುಮಾರ್‌ ಅವರು “ಜಾತಿ ಅಥವಾ ಸಮುದಾಯ ಮತ್ತು ಸಾಮಾಜಿಕ ಸ್ಥಾನಮಾನಗಳು ನಿರ್ದಿಷ್ಟ ಧಾರ್ಮಿಕ ಪಂಗಡಕ್ಕೆ ಸೀಮಿತವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ” ಎಂದರು.

“ಬೆಳಗಾವಿ ಉತ್ತರ ಲೋಕಸಭೆ, ಶಿರಾ, ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭೆ ಉಪ ಚುನಾವಣೆಗಳನ್ನು ಕೇಂದ್ರೀಕರಿಸಿ ನಿರ್ಣಾಯಕವಾದ ಸಮುದಾಯಗಳ ಮತ ಸೆಳೆಯಲು ಸೃಷ್ಟಿಸಿರುವ ನಿಗಮಗಳು ಈಗಾಗಲೇ ಉದ್ದೇಶಿತ ಫಲಿತಾಂಶವನ್ನು ನೀಡಿವೆ. ಈಗ ಅವುಗಳನ್ನು ವಜಾ ಮಾಡುವುದರಿಂದ ಅವುಗಳಿಗೆ ಮೀಸಲಿಟ್ಟಿರುವ ಅಪಾರ ಪ್ರಮಾಣದ ಹಣ ರಾಜ್ಯದ ಬೊಕ್ಕಸಕ್ಕೆ ಹರಿದು ಬರಲಿದೆ. ಇದರಿಂದ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ” ಎಂದರು.

Related Stories

No stories found.
Kannada Bar & Bench
kannada.barandbench.com