

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ʼಜಯ ಭಾರತ ಜನನಿಯ ತನುಜಾತೆ..ʼ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ಕಾಯಂಗೊಳಿಸಿದೆ.
ಕಿಕ್ಕೇರಿ ಕೃಷ್ಣಮೂರ್ತಿ ಪರ ವಕೀಲ ಆರ್ ಸುಬ್ರಮಣ್ಯ ಅವರು “ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿದ್ದಾರೆ. ಇಡೀ ನಾಡಗೀತೆಗಲ್ಲ ಎಂಬುದು ಒಪ್ಪಿತ ವಿಚಾರ. ಈ ಸಂಬಂಧ 2013 & 2014ರಲ್ಲಿ ಸರ್ಕಾರವು ಎರಡು ಸಮಿತಿ ರಚಿಸಿತ್ತು. ಈ ಸಮಿತಿಗಳ ಯಾವುದೇ ಮಾಹಿತಿಯನ್ನು ಪರಿಗಣಿಸಿಲ್ಲ. 18 ಸದಸ್ಯರ ಸಮಿತಿಯ ಅಭಿಪ್ರಾಯ ಆಧರಿಸಿ ಈ ಆಕ್ಷೇಪಾರ್ಹ ಆದೇಶ ಮಾಡಲಾಗಿದೆ. ಸಾರ್ವಜನಿಕರು ಅಥವಾ ಸಂಬಂಧಿತರ ಆಕ್ಷೇಪಣೆಯನ್ನು ಪರಿಗಣಿಸಲಾಗಿಲ್ಲ” ಎಂದರು.
“ನಿರ್ದಿಷ್ಟ ರಾಗದಲ್ಲೇ ಹಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ, ಇಡೀ ನಾಡಗೀತೆಗೆ ಒಂದೇ ರೀತಿಯ ರಾಗ ಸಂಯೋಜನೆ ಇಲ್ಲ. ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಇದನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ. ಕಿಕ್ಕೇರಿ ಕೃಷ್ಣಮೂರ್ತಿ ಅವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ. ರಾಷ್ಟ್ರಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂಬ ನಿಯಮವಿಲ್ಲ. ಹೀಗಾಗಿ, ನಾಡಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂದು ನಿರ್ದೇಶಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಇಡೀ ನಾಡಗೀತೆಗೆ ಸಂಯೋಜಿಸುವ ರಾಗ ಸಂಯೋಜನೆಯನ್ನು ಪಾಲಿಸಬೇಕು ಎಂದು ಹಿಂದಿನ ಎರಡು ಸಮಿತಿಗಳು ಹೇಳಿವೆ” ಎಂದರು.
ಆಗ ಪೀಠವು “ಶಾಸನಬದ್ಧವಾಗಿ ಇಂಥದ್ದೇ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಯಾವುದೇ ಸ್ವೇಚ್ಛೆಯ ಕ್ರಮವಿಲ್ಲ” ಎಂದಿತು.
ಆಗ ಸುಬ್ರಮಣ್ಯ ಅವರು “ಸಂವಿಧಾನದ 19(1)(ಎ) ಸಹ ಇಲ್ಲಿ ಚಾಲ್ತಿಗೆ ಬರುತ್ತದೆ. ಮೇಲ್ಮನವಿದಾರರು ಕಲಾವಿದರಾಗಿದ್ದಾರೆ. ರಾಜ್ಯ ಸರ್ಕಾರವು ಎಲ್ಲರ ಆಕ್ಷೇಪಣೆ ಪರಿಗಣಿಸಿ ನಿರ್ಧಾರ ಮಾಡಬೇಕಿತ್ತು” ಎಂದರು.
ಇದಕ್ಕೆ ಪೀಠವು “ನಿಮಗೆ ಬೇಕಾದಂತೆ ಹಾಡದಂತೆ ನಿಮ್ಮನ್ನು ತಡೆಯುತ್ತಿರುವವರು ಯಾರು? ನಿಮ್ಮ ಇಚ್ಛೆಯಂತೆ ಹಾಡಬಾರದು ಎಂದು ರಾಜ್ಯ ಸರ್ಕಾರ ಹೇಳಿಲ್ಲ. ಸಂವಿಧಾನ ಬದ್ಧವಾಗಿ 19(1)(ಎ)ನೇ ವಿಧಿಯಡಿ ನಿಮಗೆ ಹಕ್ಕಿದೆ. ಇದನ್ನು ಮಾಡದಂತೆ ನಿಮಗೆ ನಿಷೇಧ ವಿಧಿಸಿರುವ ಸರ್ಕಾರದ ಕ್ರಮ ತೋರಿಸಬೇಕು. ನಿರ್ದಿಷ್ಟ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಅದು ನಿಮ್ಮ ಸಂವಿಧಾನ ಬದ್ಧ ಹಕ್ಕಿಗೆ ಚ್ಯುತಿ ಉಂಟು ಮಾಡಿಲ್ಲ. ಆಕ್ಷೇಪಣೆ ಪರಿಗಣಿಸಿದೆಯೇ ಇಲ್ಲವೇ ಎಂಬುದರ ಹೊರತಾಗಿ ಅದು ನಿಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆಯೇ?” ಎಂದರು.
ಈ ಹಂತದಲ್ಲಿ ಸುಬ್ರಮಣ್ಯ ಅವರು “ಇಡೀ ಚರಣಗಳಿಗೆ ಸಂಯೋಜಿಸುವ ರಾಗವನ್ನು ಇಡೀ ರಾಗಕ್ಕೆ ಅನ್ವಯಿಸುವುದು ಅಸಮರ್ಥನೀಯ” ಎಂದರು.
ಇದನ್ನು ಆಲಿಸಿದ ಪೀಠವು “ನಿಮಗೆ ಬೇಕಾದ ರಾಗದಲ್ಲಿ ಹಾಡಿ. ಆದರೆ, ಮೇಲ್ಮನವಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಸೂಕ್ತ ಕಾರಣಗಳನ್ನು ಆದೇಶದಲ್ಲಿ ನೀಡಲಾಗುವುದು” ಎಂದು ಮೇಲ್ಮನವಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ: ಜಯ ಭಾರತ ಜನನಿಯ ತನುಜಾತೆ, ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ಥ್ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ ಅಶ್ವತ್ಥ್ ಅವರು ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು 2024ರ ಏಪ್ರಿಲ್ 24ರಂದು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಿಕ್ಕೇರಿ ಕೃಷ್ಣಮೂರ್ತಿ ಮೇಲ್ಮನವಿ ಸಲ್ಲಿಸಿದ್ದು, ಅದೂ ಈಗ ವಜಾಗೊಂಡಿದೆ.