ಕರ್ನಾಟಕ ಹೈಕೋರ್ಟ್‌ಗೆ ಡಿ.24ರಿಂದ ಜ.1ರ ವರೆಗೆ ಚಳಿಗಾಲದ ರಜೆ; ಡಿ. 29ರಂದು ರಜಾಕಾಲೀನ ಪೀಠಗಳ ಕಾರ್ಯನಿರ್ವಹಣೆ

ರಜಾಕಾಲೀನ ಪೀಠಗಳು ಬೆಂಗಳೂರು ಪೀಠದಲ್ಲಿ ಪ್ರಕರಣಗಳನ್ನು ಹೈಬ್ರಿಡ್‌ ಮಾದರಿಯಲ್ಲಿ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಲಿವೆ.
Karnataka High Court

Karnataka High Court

Published on

ಚಳಿಗಾಲದ ರಜೆಯ ಹಿನ್ನೆಲೆಯಲ್ಲಿ ಡಿಸೆಂಬರ್‌ 24ರಿಂದ ಮುಂದಿನ ವರ್ಷದ ಜನವರಿ 1ರ ವರೆಗೆ ಕರ್ನಾಟಕ ಹೈಕೋರ್ಟ್‌ ಮುಚ್ಚಿರಲಿದೆ. ಈ ಅವಧಿಯಲ್ಲಿ ಯಾವುದೇ ದೈನಂದಿನ ಕಲಾಪ ಚಟುವಟಿಕೆಗಳು ಇರುವುದಿಲ್ಲ ಎಂದು ನ್ಯಾಯಿಕ ರಿಜಿಸ್ಟ್ರಾರ್‌ ಕೆ ಎಸ್‌ ಭರತ್‌ ಕುಮಾರ್‌ ಅವರು ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ತುರ್ತು ಪ್ರಕರಣಗಳನ್ನು ಆಲಿಸುವ ಸಲುವಾಗಿ ರಜಾಕಾಲೀನ ಪೀಠಗಳು ಡಿ.29ರಂದು ಕಾರ್ಯನಿರ್ವಹಿಸಲಿವೆ. ಬೆಂಗಳೂರು ಪೀಠದಲ್ಲಿ ಪ್ರಕರಣಗಳನ್ನು ಹೈಬ್ರಿಡ್‌ ಮಾದರಿಯಲ್ಲಿ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತ್ರ ವಿಚಾರಣೆ ನಡೆಸಲಾಗುತ್ತದೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಡಿಸೆಂಬರ್‌ 29ರಂದು ಬೆಳಗ್ಗೆ 10.30ರಿಂದ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್‌ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ನೇತೃತ್ವದ ವಿಭಾಗೀಯ ರಜಾಕಾಲೀನ ಪೀಠವು ಧಾರವಾಡ ಮತ್ತು ಕಲಬುರ್ಗಿ ಪೀಠ ಸೇರಿದಂತೆ ಎಲ್ಲಾ ವಿಭಾಗೀಯ ಪೀಠಗಳ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌, ಇ ಎಸ್‌ ಇಂದ್ರೇಶ್‌, ವಿ ಶ್ರೀಶಾನಂದ ಮತ್ತು ಎಂ ಜಿ ಎಸ್‌ ಕಮಲ್‌ ನೇತೃತ್ವದ ಏಕಸದಸ್ಯ ಪೀಠವು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿದೆ.

ಮನವಿ ಅಥವಾ ಮೇಲ್ಮನವಿಯ ತುರ್ತಿನ ಕುರಿತು ಎಲ್ಲಾ ವಕೀಲರು ಮೊದಲ ಪ್ಯಾರಾದಲ್ಲಿ ಉಲ್ಲೇಖಿಸಬೇಕು. ತುರ್ತಿಗೆ ಕಾರಣವನ್ನು ನೀಡದಿದ್ದರೆ ಅಂಥ ಪ್ರಕರಣಗಳನ್ನು ರಜಾಕಾಲೀನ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Also Read
ಕರ್ನಾಟಕ ಹೈಕೋರ್ಟ್‌ಗೆ ಅ.11ರಿಂದ 16ರವರೆಗೆ ದಸರಾ ರಜೆ; ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿರುವ ರಜಾ ಕಾಲೀನ ಪೀಠಗಳು

ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳು ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಹೊರತುಪಡಿಸಿ ಸಿವಿಲ್‌ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿ, ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸುವುದಿಲ್ಲ ಎಂದು ಹೇಳಲಾಗಿದೆ. ಕ್ರಿಮಿನಲ್‌ ಮೇಲ್ಮನವಿ, ಕ್ರಿಮಿನಲ್‌ ಆದೇಶ ಮರುಪರಿಶೀಲನಾ ಮನವಿ, ಕ್ರಿಮಿನಲ್‌ ಮನವಿಗಳನ್ನು ತುರ್ತು ಆದೇಶದ ಹೊರತಾಗಿ ಸ್ವೀಕರಿಸಲಾಗುವುದಿಲ್ಲ.

ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ತರ್ತು ವಿಚಾರಣೆಗೆ ಡಿಸೆಂಬರ್‌ 24 ಮತ್ತು 27ರಂದು ಅರ್ಜಿ ಸಲ್ಲಿಸಬಹುದಾಗಿದ್ದು, ಬೆಂಗಳೂರಿನ ಪ್ರಧಾನ ಪೀಠಕ್ಕೆ ಸಂಬಂಧಿಸಿದ ತುರ್ತು ಮನವಿಗಳನ್ನು ಡಿಸೆಂಬರ್‌ 27 ಮತ್ತು 28ರಂದು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Attachment
PDF
notf-winter-vacation-17122021.pdf
Preview
Kannada Bar & Bench
kannada.barandbench.com