ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ. ಅಂಬೇಡ್ಕರ್‌ ಅವರ ಭಾವಚಿತ್ರ ಇಡಲು ಹೈಕೋರ್ಟ್‌ ನಿರ್ಣಯ

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
Ambedkar and Karnataka HC
Ambedkar and Karnataka HC
Published on

ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಇರಿಸಲು ಪೂರ್ಣ ನ್ಯಾಯಾಲಯ ಸಭೆಯಲ್ಲಿ ಶುಕ್ರವಾರ ನಿರ್ಧರಿಸಿದ್ದು, ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಜನವರಿ 26 - ಗಣರಾಜ್ಯೋತ್ಸವ, ಆಗಸ್ಟ್‌ 15 - ಸ್ವಾತಂತ್ರ್ಯೋತ್ಸವ ಹಾಗೂ ನವೆಂಬರ್‌ 26 - ಸಂವಿಧಾನ ದಿನ ಸೇರಿದಂತೆ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹೈಕೋರ್ಟ್‌ನ ಬೆಂಗಳೂರಿನಲ್ಲಿರುವ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಈಚೆಗೆ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರ ಇರಿಸುವುದರ ಸುತ್ತ ಉಂಟಾದ ಗೊಂದಲಗಳ ಕುರಿತು ವಕೀಲರು ಹಾಗೂ ಕೆಲ ಸಂಘಟನೆಗಳು ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ವರದಿ ಕೇಳಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಅವರು 'ಬಾರ್‌ ಅಂಡ್‌ ಬೆಂಚ್‌”ಗೆ ಮಾಹಿತಿ ನೀಡಿ, "ಘಟನೆಯ ಸಂಬಂಧ ವಾಸ್ತವಿಕ ಸಂಗತಿಗಳನ್ನು ಅರಿಯಲು ವರದಿಯನ್ನು ಕೇಳಲಾಗಿದೆ. ವರದಿಯನ್ನು ಪರಿಶೀಲಿಸಿ ಹೈಕೋರ್ಟ್‌ ಕ್ರಮಕೈಗೊಳ್ಳಲಿದೆ" ಎಂದಿದ್ದರು.

“ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿ ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣ ನ್ಯಾಯಾಲಯದ ಮುಂದೆ ಪರಿಗಣನೆಗೆ ಬಾಕಿ ಇದೆ. ಇಲ್ಲಿ ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಗಾಂಧೀಜಿ ಅವರ ಭಾವಚಿತ್ರದ ಜೊತೆ ಅಂಬೇಡ್ಕರ್‌ ಅವರ ಭಾವಚಿತ್ರ ಇಡುವುದು ಕಡ್ಡಾಯವಾಗಲಿದೆ” ಎಂದು ಅವರು ತಿಳಿಸಿದ್ದರು.

Also Read
ಅಂಬೇಡ್ಕರ್‌ ಭಾವಚಿತ್ರ ಗೊಂದಲ: ವಕೀಲರು, ಸಂಘಟನೆಗಳಿಂದ ಮನವಿ ಸಲ್ಲಿಕೆ; ವರದಿ ಕೇಳಿದ ಹೈಕೋರ್ಟ್

“ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೈಕೋರ್ಟ್‌ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆನಂತರ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆಯನ್ನು ಕಳುಹಿಸಿಕೊಡಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದರು.

ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಇರಿಸದೆ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ಕೆಲ ವ್ಯಕ್ತಿಗಳು, ಸಂಘಟನೆ ಪ್ರತಿನಿಧಿಗಳು ಆರೋಪಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ರಾಯಚೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಧ್ವಜಾರೋಹಣ ಸ್ಥಳದಿಂದ ತೆಗೆಸಿದ್ದಾರೆ. ಆ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.

Attachment
PDF
hck-circular-04022022
Preview
Kannada Bar & Bench
kannada.barandbench.com