ಅಮ್ನೆಸ್ಟಿ ಬ್ಯಾಂಕ್ ಖಾತೆಗಳನ್ನು ಇ ಡಿ ತಡೆಹಿಡಿದಿರುವ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ತಡೆ ಹಿಡಿದಿರುವ ತನ್ನ 5 ಬ್ಯಾಂಕ್ ಖಾತೆಗಳಿಂದ ವೇತನ, ತೆರಿಗೆ ಪಾವತಿ ಸೇರಿದಂತೆ ಪ್ರತಿ ತಿಂಗಳು 40 ಲಕ್ಷ ರೂಪಾಯಿವರೆಗೆ ಅಗತ್ಯದ ಹಣಕಾಸು ಚಟುವಟಿಕೆಗಳನ್ನು ಅಮ್ನೆಸ್ಟಿ ನಡೆಸಲು ಜಾರಿ ನಿರ್ದೇಶನಾಲಯ ಅನುಮತಿ ನೀಡಬಹುದೇ ಎಂದು ಪೀಠ ಪ್ರಶ್ನಿಸಿದೆ.
ಅಮ್ನೆಸ್ಟಿ ಬ್ಯಾಂಕ್ ಖಾತೆಗಳನ್ನು ಇ ಡಿ ತಡೆಹಿಡಿದಿರುವ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌
Amnesty International, Karnataka High Court

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತನ್ನ ಬ್ಯಾಂಕ್‌ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಡೆಹಿಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ. ತಡೆ ಹಿಡಿದಿರುವ ತನ್ನ ಐದು ಬ್ಯಾಂಕ್ ಖಾತೆಗಳಿಂದ ವೇತನ, ತೆರಿಗೆ ಪಾವತಿ ಸೇರಿದಂತೆ ಪ್ರತಿ ತಿಂಗಳು 40 ಲಕ್ಷ ರೂಪಾಯಿವರೆಗೆ ಅಗತ್ಯದ ಹಣಕಾಸು ಚಟುವಟಿಕೆಗಳನ್ನು ಅಮ್ನೆಸ್ಟಿ ನಡೆಸಲು ಜಾರಿ ನಿರ್ದೇಶನಾಲಯ ಅನುಮತಿ ನೀಡಬಹುದೇ ಎಂದು ಪೀಠ ಪ್ರಶ್ನಿಸಿದೆ.

ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಅಮ್ನೆಸ್ಟಿ ಟ್ರಸ್ಟ್‌ ನಡುವೆ ಸಮತೋಲನ ಸಾಧಿಸಲು ನ್ಯಾಯಾಲಯ ಯತ್ನಿಸಿತು. “ನಿಮ್ಮ ಅಧಿಕಾರಿಯನ್ನು (ಇ.ಡಿ) ಕರೆಯಿರಿ, (ಎಎಸ್‌ಜಿ) ಸಲಹೆ ಪಡೆಯಿರಿ. ನೀವು ಸಮತೋಲನ ಸಾಧಿಸಲು ಒಲವು ತೋರಿದರೆ, ಅದರಂತೆ ಗುರುವಾರ ಬೆಳಗ್ಗೆ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು” ಎಂದು ಪೀಠ ಹೇಳಿತು.

ಅರ್ಜಿದಾರ ಟ್ರಸ್ಟ್‌ಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ, ಪ್ರೊಫೆಸರ್‌ ರವಿವರ್ಮ ಕುಮಾರ್‌ ವಾದಿಸಿದ್ದರು. ಮಾನವ ಹಕ್ಕುಗಳ ಕುರಿತಾಗಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕೆಲಸ ಮಾಡುತ್ತಿದ್ದು, ಅದರ ಖಾತೆಗಳನ್ನು ತಡೆ ಹಿಡಿಯುವ ಸಂಬಂಧ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ. ಇದಕ್ಕೂ ಮಿಗಿಲಾಗಿ ಕಾನೂನಿನ ಅನ್ವಯ 30 ದಿನಗಳ ಒಳಗೆ ಸೂಕ್ತ ಪ್ರಾಧಿಕಾರದ ಮುಂದೆ ತೆಗೆದುಕೊಂಡು ಹೋಗಲಾಗಿಲ್ಲ. ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸುವುದು ಹವಾಲ ಹಣ ನಿಯಂತ್ರಣ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 17(1)(A)ರ ಅಡಿ ಮತ್ತು ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ (ಎಫ್‌ಸಿಆರ್‌ಎ) -2010ರ ಅಡಿ ಕಾನೂನು ಬಾಹಿರವಾಗಿದೆ ಎಂದು ರವಿವರ್ಮ ಕುಮಾರ್‌ ವಾದಿಸಿದರು.

ದೇಣಿಗೆ ವಿಚಾರದಲ್ಲಿ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶಕ್ಕಾಗಿ ಅದನ್ನು ಬಳಸಲಾಗುತ್ತಿದ್ದು, ಅಮ್ನೆಸ್ಟಿಯು ಸರ್ಕಾರೇತರ ಸಂಸ್ಥೆಯಾಗಿದೆ. ನವೆಂಬರ್‌ 26ರಂದು ಹೊರಡಿಸಲಾದ ಜಪ್ತಿ ಆದೇಶದಲ್ಲೂ ಯಾವುದೇ ಒಂದು ಖಾತೆಗೆ ಸಲ್ಲಿಕೆಯಾದ ನಿರ್ದಿಷ್ಟ ದೇಣಿಗೆಯು ಎಫ್‌ಸಿಆರ್‌ಎ ಅಥವಾ ಪಿಎಂಎಲ್‌ಎ ಅಡಿ ಕಾನೂನುಬಾಹಿರ ಎಂದು ಉಲ್ಲೇಖಿಸಲಾಗಿಲ್ಲ ಎಂದು ಪ್ರಬಲವಾಗಿ ಪ್ರತಿಪಾದಿಸಿದರು.

ಮನವಿದಾರರು ಹೈಕೋರ್ಟ್‌ ಮೆಟ್ಟಿಲೇರುವುದಕ್ಕೂ ಮುನ್ನ ಸಂಬಂಧಪಟ್ಟ ನ್ಯಾಯ ನಿರ್ಣಯ ಪ್ರಾಧಿಕಾರ, ಬಳಿಕ ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಪರಿಹಾರಕ್ಕೆ ಅರ್ಹವಲ್ಲ ಎಂದು ಇ.ಡಿ ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಎಂ ಬಿ ನರಗುಂದ ವಾದಿಸಿದರು.

ಸೆಪ್ಟೆಂಬರ್‌ನಲ್ಲಿ ತನ್ನ ಬ್ಯಾಂಕ್‌ ಖಾತೆಗಳಿಗೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಘೋಷಣೆ ಮಾಡಿತು. ಶೋಧ ಆದೇಶದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್‌ 25ರಂದು ಇ.ಡಿಯು ತನ್ನ ಕಚೇರಿಯಲ್ಲಿ ಶೋಧನೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಹೈಕೋರ್ಟ್‌ನಲ್ಲಿ ಅಮ್ನೆಸ್ಟಿ ಮನವಿ ಸಲ್ಲಿಸಿತ್ತು.

ಬೆಂಗಳೂರಿನಲ್ಲಿ ನೋಂದಾಯಿಸಲ್ಪಟ್ಟಿರುವ ಸಾರ್ವಜನಿಕ ದತ್ತಿ ಟ್ರಸ್ಟ್‌ ಆಗಿರುವುದರಿಂದ ಅದು ಯಾವುದೇ ವಿದೇಶಿ ಮೂಲದಿಂದ ದೇಣಿಗೆ ಪಡೆಯುತ್ತಿಲ್ಲ. ಅದು ಪಿಎಂಎಲ್‌ಎ ನಿಬಂಧನೆಗಳಿಗೆ ಒಳಪಟ್ಟಿಲ್ಲ ಎಂದು ಅಮ್ನೆಸ್ಟಿ ವಾದಿಸಿದೆ. ಇದಾದ ಕೆಲವೇ ದಿನಗಳಲ್ಲಿ ಅಮ್ನೆಸ್ಟಿಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳಿಂದ ಯಾವುದೇ ತೆರನಾದ ಚಟುವಟಿಕೆ ಕೈಗೊಳ್ಳದಂತೆ ಅಕ್ಟೋಬರ್‌ 10ರಂದು ಹಲವು ಬ್ಯಾಂಕ್‌ಗಳಿಗೆ ಇ.ಡಿ ಪತ್ರ ಬರೆದಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ಇದನ್ನು ಆಧರಿಸಿ ಅಮ್ನೆಸ್ಟಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅದು ನವೆಂಬರ್‌ನಲ್ಲಿ ಹೊರಡಿಸಿದ್ದ ಮಧ್ಯಂತರ ಆದೇಶದಲ್ಲಿ ವೇತನ ಪಾವತಿ, ಶಾಸನಬದ್ಧ ಮತ್ತು ಇತರೆ ಖರ್ಚುವೆಚ್ಚಗಳಿಗೆ ಹಣ ಬಳಕೆ ಮಾಡಲು ಅನುಮತಿಸಿತ್ತು.

2018ರ ಡಿಸೆಂಬರ್‌ನಲ್ಲಿ ಇ.ಡಿಯು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕುರಿತು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಲ್ಲದೇ ಅರ್ಜಿದಾರ ಸಂಸ್ಥೆಯು ಎಫ್‌ಸಿಆರ್‌ಎ ಉಲ್ಲಂಘಿಸಿದೆ ಎಂದು ಮಧ್ಯಂತರ ವರದಿಯನ್ನೂ ಸಲ್ಲಿಸಿತ್ತು. ಇದನ್ನು ಆಧರಿಸಿ ಕಾನೂನಿನ ಅನ್ವಯ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೇಂದ್ರ ಗೃಹ ಕಾರ್ಯದರ್ಶಿ ಸೂಚನೆ ನೀಡಿದ್ದರು. ಇದನ್ನು ಆಧರಿಸಿ 2019ರಲ್ಲಿ ಎಫ್‌ಸಿಆರ್‌ಎ ಸೆಕ್ಷನ್‌ 11, 35 ಮತ್ತು 39ರ ಅಡಿ ಅಮ್ನೆಸ್ಟಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

Also Read
2013ರ ಮಲ ಹೊರುವ ವೃತ್ತಿ ನಿಷೇಧ ಕಾಯಿದೆ ಜಾರಿ: ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಕರ್ನಾಟಕ ಹೈಕೋರ್ಟ್

2020ರ ಆಗಸ್ಟ್‌ನಲ್ಲಿ ಭಾರತದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್‌ ಕುಮಾರ್‌ ಅವರಿಗೆ ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್‌ ಜಾರಿಗೊಳಿಸಿತ್ತು. ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಹಲವು ಮಂದಿಗೆ ನೋಟಿಸ್‌ ಜಾರಿಗೊಳಿಸಿದ್ದು, ಎಲ್ಲರೂ ತನಿಖೆಗೆ ಸಹಕರಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಬಳಿಕ ಸೌತ್‌ ಇಂಡಿಯನ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಯೆಸ್‌ ಬ್ಯಾಂಕ್‌ಗಳಿಗೆ (ಅಮ್ನೆಸ್ಟಿ ಖಾತೆಗಳನ್ನು ಹೊಂದಿರುವ ಬ್ಯಾಂಕ್‌ಗಳು) ಪತ್ರ ಬರೆದು ಖಾತೆಗಳಿಂದ ಹಣವನ್ನು ಹಿಂಪಡೆಯಲು ನಿರ್ಬಂಧಿಸುವಂತೆ (ಡೆಬಿಟ್‌ ಫ್ರೀಜ್‌) ಇ.ಡಿ ನಿರ್ದೇಶಿಸಿತ್ತು. ಇ.ಡಿಯ "ಅಕ್ರಮ ಮತ್ತು ಕಾನೂನು ಬಾಹಿರ ಕ್ರಮ"ಗಳನ್ನು ಆಧರಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅಮ್ನೆಸ್ಟಿಯು ಬ್ಯಾಂಕ್‌ಗಳಿಗೆ ಆರ್ಥಿಕ ಚಟುವಟಿಕೆ ನಡೆಸದಂತೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯದ ಎಲ್ಲಾ ಪತ್ರ ಸಂವಹನವನ್ನು ರದ್ದುಗೊಳಿಸುವಂತೆ ಮನವಿ ಮಾಡಿತ್ತು.

No stories found.
Kannada Bar & Bench
kannada.barandbench.com