ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಒಳಗೊಳ್ಳುವಂತೆ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಇ ಹಂಚಾಟೆ ಸಂಜೀವ್‌ಕುಮಾರ್ ಅವರಿದ್ದ ವಿಭಾಗೀಯ ಪೀಠವು ಕೆಲವು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
“ಸಾಂಕ್ರಾಮಿಕತೆ ಇದೆಯೋ ಅಥವಾ ಇಲ್ಲವೋ, ಮಕ್ಕಳ ಶಿಕ್ಷಣ ಮುಂದುವರೆಯಬೇಕು. ಪರಿಸ್ಥಿತಿಗೆ ತಕ್ಕಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು” ಎಂದು ಪೀಠ ಹೇಳಿದೆ.
“ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಒಳಗೊಳ್ಳುವಂತೆ ಮಾಡಲು ಪಠ್ಯ ಪುಸ್ತಕ, ನೋಟ್ ಪುಸ್ತಕಗಳು ಮತ್ತು ತಾಂತ್ರಿಕ ಸಾಧನಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಾರ್ಯ ಯೋಜನೆ ಸಿದ್ಧಪಡಿಸಬೇಕು. ಆರ್‌ಟಿಇ ಕಾಯಿದೆ ಮತ್ತು ಸಂವಿಧಾನದ 21ಎ ವಿಧಿಯಡಿ ಕಡ್ಡಾಯ ಶಿಕ್ಷಣದಡಿ ಬರುವ ವಿದ್ಯಾರ್ಥಿಗಳಿಗೆ ಇದು ಅತ್ಯಗತ್ಯ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪಠ್ಯ ಪುಸ್ತಕ ಮತ್ತು ನೋಟ್ ಬುಕ್‌ಗಳನ್ನು ನೀಡದೇ ವರ್ಚುವಲ್ ವ್ಯವಸ್ಥೆಯ ಮೂಲಕ ತರಗತಿ ಆರಂಭಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಉಚಿತವಾಗಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರೆ ಡಿಜಿಟಲ್ ಸಂಪನ್ಮೂಲ ಪೂರೈಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
“ಶಾಲೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನದ ಸೌಲಭ್ಯ ದೊರೆಯುವಂತೆ ಮಾಡಲು ನಿಮ್ಮ ಕಾರ್ಯ ಯೋಜನೆ ಏನು” ಎಂದು ಸರ್ಕಾರಕ್ಕೆ ಪೀಠವು ಪ್ರಶ್ನೆ ಹಾಕಿತು.
ಮಕ್ಕಳಿಗೆ ಇನ್ನೂ ಲಸಿಕೆ ಯೋಜನೆ ಆರಂಭಿಸಿಲ್ಲವಾದ್ದರಿಂದ ಶಾಲೆ ತೆರೆದರೆ ಮಕ್ಕಳು ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ. “ಸಾಂಕ್ರಾಮಿಕತೆಗೂ ಮುನ್ನ ಪಠ್ಯ ಪುಸ್ತಕ ವಿತರಿಸುವುದಕ್ಕೆ ಎರಡು ತಿಂಗಳು ತಡವಾಗುತ್ತಿತ್ತು. ಒಂದೊಮ್ಮೆ ಗ್ರಾಮೀಣ ಪ್ರದೇಶ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿದರೆ ಶ್ರದ್ಧೆಯಿಂದ ಓದಿಕೊಳ್ಳುವ ಮಕ್ಕಳು ಸ್ವಂತವಾಗಿಯೇ ಓದಿಕೊಳ್ಳುತ್ತಾರೆ. ಅಂಥ ವಿದ್ಯಾರ್ಥಿಗಳು ಯಾವಾಗಲೂ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ” ಎಂದು ಪೀಠ ಹೇಳಿತು.
ವರ್ಚುವಲ್ ತರಗತಿ ಅಥವಾ ಆನ್‌ಲೈನ್ ಶಿಕ್ಷಣ ನೀಡದಿದ್ದರೆ ಬಾಲ್ಯ ವಿವಾಹ ಅಥವಾ ಬಾಲ ಕಾರ್ಮಿಕ ಪದ್ಧತಿ ಹೆಚ್ಚುವ ಸಂಭವವಿದೆ ಎಂದು ಪೀಠ ಹೇಳಿದೆ. ಗ್ರಾಮೀಣ ಪ್ರದೇಶದ ಹಲವು ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಕಾದಂಬರಿ ಅಥವಾ ಕತೆ ಪುಸ್ತಕಗಳನ್ನು ಖರೀದಿಸಿಕೊಡುವ ಸಾಮರ್ಥ್ಯವಿಲ್ಲ ಎಂದು ಪೀಠ ಹೇಳಿದೆ.
“ಗ್ರಾಮೀಣ ಭಾಗದಲ್ಲಿ ತಮ್ಮ ಮಕ್ಕಳಿಗೆ ಕತೆ ಅಥವಾ ಚಿತ್ರಕಥಾ ಪುಸ್ತಕಗಳನ್ನು ಖರೀದಿಸುವ ಸಾಮರ್ಥ್ಯ ಎಷ್ಟು ಮಂದಿಗೆ ಇದೆ? ಬಹುತೇಕ ಮಕ್ಕಳನ್ನು ಜಮೀನಿಗೆ ಕಳುಹಿಸಲಾಗುತ್ತದೆ. ಹೆಣ್ಣು ಮಕ್ಕಳಾದರೆ ಅವರಿಗೆ ವಿವಾಹ ಮಾಡಲಾಗುತ್ತದೆ” ಎಂದು ಪೀಠ ಹೇಳಿದೆ.
“ಮಕ್ಕಳ ಅಮೂಲ್ಯ ಸಮಯವನ್ನು ಹಾಳು ಮಾಡಲಾಗದು. ಅವರನ್ನು ಶೈಕ್ಷಣಿಕ ವ್ಯವಸ್ಥೆಯ ಒಳಗೆ ತರುವ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ ಬಾಲ ಕಾರ್ಮಿಕತೆ, ಮಕ್ಕಳ ಕಳ್ಳಸಾಗಣೆ ಅಥವಾ ಬಾಲ್ಯ ವಿವಾಹದ ಸಾಧ್ಯತೆ ಹೆಚ್ಚಾಗಲಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೂನ್ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.