ಪೊಲೀಸರು‌ ಏನು ಮಾಡಿದ್ದಾರೆ ಎಂಬುದು ತಿಳಿಯಬೇಕು: ಪೌರ ಕಾರ್ಮಿಕರ ಸಾವಿನ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ

“ಮಲದ ಗುಂಡಿಗೆ ಇಳಿಯುವಂತೆ ಯಾರನ್ನೂ ಒತ್ತಾಯ ಮಾಡಬಾರದು ಎಂಬ ಷರತ್ತನ್ನು ಉದ್ಯೋಗ ಒಪ್ಪಂದದಲ್ಲಿ ವಿಧಿಸಲಾಗಿದೆಯೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
CJI  A S Oka & Justice S S Magadum
CJI A S Oka & Justice S S Magadum

ಕಲಬುರ್ಗಿಯಲ್ಲಿ ಜನವರಿ 28ರಂದು ಮಲದ ಗುಂಡಿ ಸ್ವಚ್ಛಗೊಳಿಸಲು ಒಳ ಹೋಗಿದ್ದ ಇಬ್ಬರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನಡೆಸಲಾದ ತನಿಖೆಯ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

“ಸದರಿ ಪ್ರಕರಣದ ವಿಚಾರಣೆ ನಡೆಸುವುದಕ್ಕೂ ಮುನ್ನ ಕಲಬುರ್ಗಿಯ 14ನೇ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಾವು ನಿರ್ದೇಶಿಸುತ್ತೇವೆ… ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು,” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ಎಸ್‌ ಮಗದುಮ್‌ ಅವರಿದ್ದ‌ ವಿಭಾಗೀಯ ಪೀಠ ಆದೇಶಿಸಿದೆ.

“ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏನು ಮಾಡಿದ್ದಾರೆ ಎಂಬುದನ್ನು ನಾವು ನೋಡಬೇಕಿದೆ” ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿತು.

ಸಾವನ್ನಪ್ಪಿದ ಇಬ್ಬರು ಪೌರ ಕಾರ್ಮಿಕರನ್ನು ಗುತ್ತಿಗೆದಾರ ಒಳಚರಂಡಿಗೆ ಇಳಿಸಿದ್ದಾನೆ ಎಂದು ವಕೀಲ ಕ್ಲಿಫ್ಟನ್‌ ಡಿʼರೊಜಾರಿಯೋ ವಾದಿಸಿದರು. ಇದುವರೆವಿಗೂ ಗುತ್ತಿದಾರನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ವಕೀಲರಾದ ಜಯ್ನಾ ಕೊಠಾರಿ ನ್ಯಾಯಾಲಯದ ಗಮನಸೆಳೆದರು.

“ಇದು ಅಪಘಾತವಲ್ಲ. ಇದು ನಡೆಯಬಹುದು ಎಂಬುದು ನಿಮಗೆ ತಿಳಿದಿದೆ… ಮನುಷ್ಯ ಸಾಯುವ ಸಾಧ್ಯತೆ ಬಗ್ಗೆ ತಿಳಿದಿದೆ. ಇದು ನಿರ್ಲಕ್ಷ್ಯದಿಂದ ಆದ ಸಾವಲ್ಲ. ಮಲದ ಗುಂಡಿಯಲ್ಲಿ ಕೆಟ್ಟ ಗಾಳಿ ಇರುತ್ತದೆ ಎಂಬುದು ಅವರಿಗೆ (ಗುತ್ತಿಗೆದಾರ) ಗೊತ್ತಿದೆ” ಎಂದು ಡಿʼರೊಜಾರಿಯೋ ವಾದ ವಿಸ್ತರಿಸಿದರು.

“ಸದರಿ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರಿಯನ್ನು ನೇಮಿಸಲಾಗಿದೆಯೇ?”, “ಮಲದ ಗುಂಡಿಗೆ ಇಳಿಯುವಂತೆ ಯಾರನ್ನೂ ಒತ್ತಾಯ ಮಾಡಬಾರದು ಎಂಬ ಷರತ್ತನ್ನು ಉದ್ಯೋಗ ಒಪ್ಪಂದದಲ್ಲಿ ವಿಧಿಸಲಾಗಿದೆಯೇ? ಹಾಗಿಲ್ಲವಾದರೆ, ಅದು ಮಲಹೊರುವ ಪದ್ಧತಿಯಾಗುತ್ತದೆ. ಕಾನೂನಿನ ಪ್ರಕಾರ ಅದನ್ನು ನಿಷೇಧಿಸಲಾಗಿದೆ. ಆ ಷರತ್ತು ಇರಬೇಕು” ಎಂದು ಪೀಠ ಹೇಳಿತು.

Also Read
2013ರ ಮಲ ಹೊರುವ ವೃತ್ತಿ ನಿಷೇಧ ಕಾಯಿದೆ ಜಾರಿ: ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಕರ್ನಾಟಕ ಹೈಕೋರ್ಟ್

ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗುವುದು ಎಂದು ರಾಜ್ಯ ಸರ್ಕಾರವು ಪೀಠಕ್ಕೆ ತಿಳಿಸಿತು. ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಮಲದ ಗುಂಡಿಗೆ ಇಳಿಯುವುದನ್ನೂ ಒಪ್ಪಿಕೊಳ್ಳಲಾಗದು ಎಂದು ವಕೀಲ ಶ್ರೀಧರ ಪ್ರಭು ಹೇಳಿದರು.

ಸರಣಿ ಸಲಹೆ ಸೂಚನೆಯ ಹೊರತಾಗಿಯೂ ಮಲಹೊರುವ ಪದ್ಧತಿಯ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆ (ಮಲಹೊರುವ ಪದ್ದತಿ ಕಾಯಿದೆ) ಮತ್ತು ಸಂಬಂಧಿತ ನಿಯಮ ನಿಬಂಧನೆಗಳನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂದು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

Related Stories

No stories found.
Kannada Bar & Bench
kannada.barandbench.com