ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ವಿಚಕ್ಷಣಾ ದಳಕ್ಕೆ ತರಬೇತಿ ನೀಡುವಂತೆ ಹೈಕೋರ್ಟ್ ನಿರ್ದೇಶನ

ಅಸಂಜ್ಞೇಯ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸರು ಎಫ್ಐಆರ್ ದಾಖಲಿಸುವಂತಿಲ್ಲ ಎಂದ ಪೀಠ. ಹಾಸನ ಜೆಎಂಎಫ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮಾಜಿ ಸಚಿವ ಎ ಮಂಜು ವಿರುದ್ಧದ ದೂರನ್ನು ರದ್ದುಗೊಳಿಸಿದ ನ್ಯಾಯಾಲಯ.
Karnataka HC and election
Karnataka HC and election

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವ ಪ್ರಕರಣಗಳನ್ನು ದಾಖಲಿಸಿಕೊಳ್ಳುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚುನಾವಣಾ ವಿಚಕ್ಷಣಾ ದಳಕ್ಕೆ ತರಬೇತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

“ಚುನಾವಣೆ ನಡೆಯುವ ಸಮಯದಲ್ಲಿ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ವಿಚಕ್ಷಣಾ ದಳ ದೂರು ನೀಡುವ ಬಹುತೇಕ ಪ್ರಕರಣಗಳು ಔಪಚಾರಿಕವಾಗಿರುತ್ತವೆ. ಅಂತಿಮವಾಗಿ ಚುನಾವಣೆ ಮುಗಿದ ನಂತರ ಬಿ ರಿಪೋರ್ಟ್‌ ಸಲ್ಲಿಕೆಯಾಗುತ್ತದೆ. ಸೋತ ಅಭ್ಯರ್ಥಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಈ ಕಾರಣಕ್ಕೆ ವಿಚಕ್ಷಣಾ ದಳದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಅಗತ್ಯವಿದೆ” ಎಂದು ನ್ಯಾ. ಕೆ ನಟರಾಜನ್‌ ಅವರಿದ್ದ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಎ ಮಂಜು ಅವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

“ಐಪಿಸಿ ಸೆಕ್ಷನ್‌ 155ರ ಪ್ರಕಾರ ಅಸಂಜ್ಞೇಯ ಪ್ರಕರಣಗಳಲ್ಲಿ ನ್ಯಾಯಾಧೀಶರ ಅನುಮತಿ ಇಲ್ಲದೆ ಎಫ್‌ಐಆರ್‌ ದಾಖಲಿಸುವಂತಿಲ್ಲ ಎಂದು ಪೊಲೀಸರಿಗೆ ತಿಳಿದಿದ್ದರೂ ಈ ರೀತಿಯ ಘಟನೆಗಳು ದೊಡ್ಡಪ್ರಮಾಣದಲ್ಲಿ ನಡೆಯುತ್ತಿವೆ. ವಿಚಕ್ಷಣಾ ದಳದ ಸಿಬ್ಬಂದಿ ಹಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡರೂ ಕೂಡ ಆರೋಪಿಗಳು ಕಾನೂನಿನ ಕುಣಿಕೆಯಿಂದ ಪಾರಾಗಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗೆ ಹಾಗೂ ಭಾರತೀಯ ಚುನಾವಣಾ ಆಯೋಗ ಮತ್ತು ಕರ್ನಾಟಕದ ಚುನಾವಣಾ ಆಯೋಗಗಳಿಗೆ ನಿರ್ದೇಶನ ನೀಡುವುದು ಅಗತ್ಯವಾಗಿದೆ” ಎಂದು ಪೀಠ ಹೇಳಿದೆ.

“ಐಪಿಸಿ ಸೆಕ್ಷನ್‌ 188ರ ಪ್ರಕಾರ ಸಂಜ್ಞೇಯ ಅಪರಾಧವಾದರೂ ದೂರುದಾರರು (ವಿಚಕ್ಷಣಾಧಿಕಾರಿಗಳು) ಸಿಆರ್‌ಪಿಸಿ ಸೆಕ್ಷನ್‌ 154 (1) ಅಡಿ ಪೊಲೀಸರಿಗೆ ದೂರು ನೀಡುವಂತಿಲ್ಲ. ಬದಲಿಗೆ ಪಂಚನಾಮೆ ಸಿದ್ಧಪಡಿಸಿ ಆ ನಂತರ ದೂರುದಾರರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಬಹುದು" ಎಂದು ಅದು ಸೂಚಿಸಿದೆ.

ಮಂಜು ವಿರುದ್ಧದ ಪ್ರಕರಣ ರದ್ದು

ಇದೇ ವೇಳೆ ಮಂಜು ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅಸಂಜ್ಞೇಯ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸರು ಎಫ್‌ಐಆರ್‌ ದಾಖಲಿಸುವಂತಿಲ್ಲ ಎಂದಿದೆ.  ಆ ಮೂಲಕ ಹಾಸನ ಜೆಎಂಎಫ್‌ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಅವರ ವಿರುದ್ಧದ ದೂರನ್ನು ಅದು ರದ್ದುಗೊಳಿಸಿದೆ.

ನಿಷೇಧಾಜ್ಞೆಯ ಹೊರತಾಗಿಯೂ ಮಂಜು ಹೋಟೆಲ್‌ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. 2019ರ ಏಪ್ರಿಲ್‌ ನಲ್ಲಿ ಈ ಸಂಬಂಧ ವಿಚಕ್ಷಣಾ ದಳ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ಮಂಜು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪೊಲೀಸರ ಕ್ರಮ ಪ್ರಶ್ನಿಸಿ ಮಂಜು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com