[ಬ್ರೇಕಿಂಗ್] ಸ್ಯಾಂಡಲ್‌ವುಡ್ ಡ್ರಗ್ ಹಗರಣ: ರಾಗಿಣಿ, ಸಂಜನಾ ಹಾಗೂ ಇತರೆ ಮೂವರ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತಾವು ಆಯೋಜಿಸುತ್ತಿದ್ದ ಮೋಜಿನ ಕೂಟ ಹಾಗೂ ಸಮಾರಂಭಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸಿದ ಮತ್ತು ಪೂರೈಸಿದ ಆರೋಪದಲ್ಲಿ ಉಭಯ ನಟಿಯರು ಪೊಲೀಸರ ವಶದಲ್ಲಿದ್ದಾರೆ.
[ಬ್ರೇಕಿಂಗ್] ಸ್ಯಾಂಡಲ್‌ವುಡ್ ಡ್ರಗ್ ಹಗರಣ: ರಾಗಿಣಿ, ಸಂಜನಾ ಹಾಗೂ ಇತರೆ ಮೂವರ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸ್ಯಾಂಡಲ್‌ವುಡ್‌ ಮಾದಕವಸ್ತು ಹಗರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಇತರೆ ಮೂವರ ಜಾಮೀನು ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

“ವಿಶೇಷವಾಗಿ ನಮ್ಮ ಕಕ್ಷಿದಾರರು ಸೇರಿದಂತೆ ಆರೋಪಿಗಳು ಸೇವಿಸಿದ ಮಾದಕ ವಸ್ತುವಿನ ಪ್ರಮಾಣವನ್ನು ಇನ್ನೂ ಪ್ರಾಸಿಕ್ಯೂಷನ್‌ ಗುರುತಿಸಿಲ್ಲ/ಪತ್ತೆ ಮಾಡಿಲ್ಲ. ಮಾದಕ ವಸ್ತುವಿನ ಪ್ರಮಾಣ ಪತ್ತೆ ಮಾಡದೇ ಜಾಮೀನು ನಿರಾಕರಿಸಲಾಗದು” ಎಂದು ಗಲ್ರಾನಿ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ವಾದಿಸಿದರು.

“ಆರೋಪಿಗಳು ಗ್ರಾಹಕರಾಗಿದ್ದು, ಅವರಿಗೆ ಆರು ತಿಂಗಳು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. 10-20 ವರ್ಷಗಳ ಶಿಕ್ಷೆಯ ಪ್ರಶ್ನೆಯೇ ಉದ್ಭವಿಸದು” ಎಂದು ಪಾಷಾ ವಾದ ವಿಸ್ತರಿಸಿದರು.

Also Read
ಸ್ಯಾಂಡಲ್‌ವುಡ್‌ ಮಾದಕವಸ್ತು ಹಗರಣ: ನಟಿಯರಾದ ಸಂಜನಾ, ರಾಗಿಣಿ ಪರ ವಕೀಲರು ಹೇಳಿದ್ದೇನು?

ಐವತ್ತು ದಿನಗಳಿಂದ ಗಲ್ರಾನಿ ಅವರು ಜೈಲಿನಲ್ಲಿದ್ದು, ಆರೋಪಿಗಳ ರಕ್ತ ಮತ್ತು ತಲೆಗೂದಲಿನ ಮಾದರಿ ಸಂಗ್ರಹಿಸಲಾಗಿದೆ. ಆರೋಪಿಗಳಿಂದ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಿಕೊಂಡು ಅವರ ಮನೆಗಳನ್ನು ಶೋಧಿಸಿದಾಗಲೂ ಆಪಾದಿಸಬಹುದಾದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಪಾಷಾ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಇದೇ ವಾದವನ್ನು ರಾಗಿಣಿ ದ್ವಿವೇದಿ ಪರ ವಕೀಲರು ಮಂಡಿಸಿದರು. ತನಿಖೆ ಬಾಕಿ ಇರುವುದರಿಂದ ಆರೋಪಿಗಳು ಜೈಲಿನಲ್ಲಿ ಇರುವುದು ಉತ್ತಮ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ತಕರಾರು ಎತ್ತಿದರು.

ವಿಶೇಷ ಎನ್‌ಡಿಪಿಸಿ ನ್ಯಾಯಾಲಯವು ಈಚೆಗೆ ರಾಗಿಣಿ ಮತ್ತು ಸಂಜನಾ ಅವರಿಗೆ ಜಾಮೀನು ನಿರಾಕರಿಸಿತ್ತು. ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದ ದೂರನ್ನು ಆಧರಿಸಿ, ಮೋಜು ಕೂಟ ಮತ್ತು ಸಮಾರಂಭಗಳಲ್ಲಿ ನಿಷೇಧಿತ ಮಾದಕ ವಸ್ತು ಸೇವನೆ ಮತ್ತು ಪೂರೈಕೆ ಆರೋಪದಲ್ಲಿ ಉಭಯ ನಟಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಾದಕ ವಸ್ತುಗಳು ಮತ್ತು ಅಫೀಮು ಪದಾರ್ಥಗಳ ಕಾಯಿದೆ – 1985 ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com