ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಖಲಿಸಿದ್ದ ಮೂರು ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ (ಆದಾಯ ತೆರಿಗೆ ಇಲಾಖೆ ವರ್ಸಸ್ ಡಿ ಕೆ ಶಿವಕುಮಾರ್).
ಶಿವಕುಮಾರ್ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್ ಆರಂಭಿಸಲಾಗಿದ್ದು, ಕ್ರಿಮಿನಲ್ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಮತ್ತು ಆದಾಯ ತೆರಿಗೆ ಕಾಯಿದೆಯ (ಐಟಿ ಕಾಯಿದೆ) ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಹೇಳಿದ್ದಾರೆ.
2017ರ ಆಗಸ್ಟ್‌ನಲ್ಲಿ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಐಟಿ ಇಲಾಖೆಯು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.
“ಆಕ್ಷೇಪಿತ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣಗಳು ನನಗೆ ಕಾಣುತ್ತಿಲ್ಲ. ಪ್ರತಿವಾದಿಯ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್ ಆರಂಭಿಸಲಾಗಿದ್ದು, ಕ್ರಿಮಿನಲ್ ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಮರುಪರಿಶೀಲನಾ ಮನವಿಗಳು ವಜಾಕ್ಕೆ ಅರ್ಹವಾಗಿರುವುದರಿಂದ ಅವುಗಳನ್ನು ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಐಟಿ ಇಲಾಖೆಯು ಪ್ರತಿವಾದಿ ಡಿ ಕೆ ಶಿವಕುಮಾರ್ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 200, ಐಟಿ ಕಾಯಿದೆ 1961ರ ಸೆಕ್ಷನ್ 276ಸಿ(1) ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 201 (ಸಾಕ್ಷ್ಯ ಬಚ್ಚಿಡುವುದು) ಮತ್ತು 204ರ (ಸಾಕ್ಷ್ಯವನ್ನಾಗಿ ಸಲ್ಲಿಸಲು ಸಂಗ್ರಹಿಸಬಹುದಾದ ದಾಖಲೆ ನಾಶಪಡಿಸುವುದು) ದೂರು ದಾಖಲಿಸಿತ್ತು. 2019ರ ಫೆಬ್ರವರಿ 28ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೂರು ಪ್ರಕರಣಗಳಲ್ಲಿ ಶಿವಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು.
ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ದಾಳಿ ನಡೆಸಿದ್ದಾಗ ಶಿವಕುಮಾರ್ ಅವರು ಪತ್ರವನ್ನು ಹರಿದು ಹಾಕಿದ್ದರು ಎಂಬುದು ಐಟಿ ಇಲಾಖೆಯ ಪ್ರಮುಖ ವಾದವಾಗಿದೆ. ಹರಿದು ಹಾಕಲಾದ ಪತ್ರವನ್ನು ಶಿವಕುಮಾರ್ ಅವರ ಇತರೆ ಅಘೋಷಿತ ಆದಾಯದ ಮೂಲಕ್ಕೆ ತಳಕು ಹಾಕಲಾಗಿತ್ತು. ಜನಪ್ರತಿನಿಧಿಗಳ ನ್ಯಾಯಾಲಯದ ಮಧ್ಯಪ್ರವೇಶವು ಅನಾವಶ್ಯಕವಾಗಿದ್ದು, ಪ್ರಕರಣಗಳ ವಿಚಾರಣೆಯ ದೃಷ್ಟಿಯಿಂದ ಅವುಗಳ ಪುನಾರಂಭ ಅಗತ್ಯ ಎಂದು ಐಟಿ ಇಲಾಖೆ ವಾದಿಸಿತ್ತು.
2015-16, 2016-17 ಮತ್ತು 2017-18ರ ದಾಖಲೆ ಸಲ್ಲಿಸುವುದಕ್ಕೂ ಮುನ್ನವೇ ಐಟಿ ಇಲಾಖೆಯು ಪ್ರಾಸಿಕ್ಯೂಷನ್ ಆರಂಭಿಸಬಾರದಿತ್ತು. ಆದಾಯ ತೆರಿಗೆಯ (ತನಿಖೆ) ಉಪ ನಿರ್ದೇಶಕರಿಗೆ ಶಿವಕುಮಾರ್ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವ ಅಧಿಕಾರವಿಲ್ಲ. ಕಾನೂನಿನ ಅನುಮತಿಯಿಲ್ಲದೇ ಸಿಆರ್‌ಪಿಸಿ 200ರ ಅಡಿ ದೂರು ದಾಖಲಿಸಲಾಗಿದೆ ಎಂದು ಶಿವಕಕುಮಾರ್ ಪರ ವಕೀಲರು ವಾದಿಸಿದ್ದರು.
ನ್ಯಾಯಾಲಯ ಹೇಳಿದ್ದೇನು? : ಐಟಿ ಇಲಾಖೆಯ ಉಪ ನಿರ್ದೇಶಕರು ಶಿವಕುಮಾರ್ ವಿರುದ್ಧ ದೂರು ದಾಖಲಿಸಿರುವ ಕುರಿತು ಎತ್ತಿರುವ ಆಕ್ಷೇಪವು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ ಎಂದಿರುವ ನ್ಯಾಯಾಲಯವು “ಬೆಂಗಳೂರಿನಲ್ಲಿರುವ 3ನೇ ಘಟಕದ ಆದಾಯ ತೆರಿಗೆ (ತನಿಖೆ) ಉಪ ನಿರ್ದೇಶಕರಾದ ಟಿ ಸುನಿಲ್ ಗೌತಮ್ ಅವರಿಗೆ ದೂರು ದಾಖಲಿಸಲು ಐಟಿ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಅನುಮತಿ ನೀಡಲಾಗಿದೆ. ಪ್ರತಿವಾದಿಯ ಪರ ಹಿರಿಯ ವಕೀಲರು ಹೇಳಿದಂತೆ ಇದು ತಪ್ಪು ಅಥವಾ ಕಾನೂನುಬಾಹಿರವಲ್ಲ” ಎಂದು ನ್ಯಾಯಾಲಯ ಹೇಳಿದೆ.
ಸಿಆರ್‌ಪಿಸಿ, ಐಪಿಸಿ ಮತ್ತು ಐಟಿ ಕಾಯಿದೆಯ ಸಂಬಂಧಿತ ನಿಬಂಧನೆಗಳನ್ನು ಪರಿಗಣಿಸಿರುವ ಪೀಠವು ಆರೋಪಿಯು ವಿಚಾರಣೆಗೆ ಒಳಪಡದ ಹೊರತು ಅಪರಾಧಗಳನ್ನು ಪರಿಗಣಿಸುವ ವಿಶೇಷ ನ್ಯಾಯಾಲಯದ ಮೂಲ ವ್ಯಾಪ್ತಿಗೆ ಅದು ಒಳಪಡುವುದಿಲ್ಲ. “ಆರೋಪಿಯು ವಿಚಾರಣೆಗೆ ಒಳಪಡದ ಹೊರತು ಐಟಿ ಕಾಯಿದೆಯ 22ನೇ ಅಧ್ಯಾಯದ ಅಡಿಯಲ್ಲಿ ಅಪರಾಧಗಳನ್ನು ಪರಿಗಣಿಸುವ ಮೂಲ ವ್ಯಾಪ್ತಿಯು ವಿಶೇಷ ನ್ಯಾಯಾಲಯಕ್ಕೆ ಇಲ್ಲ ಎಂಬುದನ್ನು ನಿಬಂಧನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಆರೋಪಿಯ ವಿರುದ್ಧದ ಅಪರಾಧಗಳನ್ನು ಕಾಯಿದೆಯ 22ನೇ ಅಧ್ಯಾಯದ ಅನ್ವಯ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್ ಮುಂದೆ ಆರಂಭಿಸಬಹುದೇ ವಿನಾ ನೇರವಾಗಿ ವಿಶೇಷ ನ್ಯಾಯಾಲಯದ ಮುಂದೆ ಅಲ್ಲ ಎಂಬ ತೀರ್ಮಾನಕ್ಕೆ ಬರಬಹುದಾಗಿದೆ” ಎಂದು ಪೀಠ ಹೇಳಿದೆ.
ಮನವಿದಾರರ ಆರೋಪಗಳನ್ನು ಒಪ್ಪಿಕೊಂಡರೂ ಮೇಲ್ನೋಟಕ್ಕೆ ಅವು ಐಟಿ ಕಾಯಿದೆಯ ಸೆಕ್ಷನ್ 276ಸಿ(1)ರ ಅಡಿ ಅಪರಾಧಗಳು ಎನಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಆದೇಶ ಮರುಪರಿಶೀಲನಾ ಮನವಿಯನ್ನು ವಜಾಗೊಳಿಸಿದೆ.