

ಕರಾವಳಿ ಕರ್ನಾಟಕ ಭಾಗದಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಇಲ್ಲವೇ, ಶಾಶ್ವತ ಪೀಠ ಸ್ಥಾಪನೆ ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವುದಕ್ಕಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಆದೇಶದಂತೆ ಮೂವರು ನ್ಯಾಯಮೂರ್ತಿಗಳ ಸಮಿತಿ ರಚನೆ ರಿಜಿಸ್ಟ್ರಾರ್ ಜನರಲ್ ಮಂಗಳವಾರ ಆದೇಶಿಸಿದ್ದಾರೆ.
ಸಮಿತಿಯಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಅನು ಶಿವರಾಮನ್, ಎಸ್ ಜಿ ಪಂಡಿತ್ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ಸಮಿತಿ ಮಂಗಳೂರು/ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು–ಮಡಿಕೇರಿ, ಹಾಸನ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಕೀಲರ ಸಂಘಗಳು, ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ, ಆ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಕಾರ್ಯಸಾಧ್ಯತೆ ಕುರಿತು ವರದಿ ಸಲ್ಲಿಸಲು ಸೂಚನೆ ನೀಡಗಿದೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ. ಚಂದ್ರಶೇಖರ ರೆಡ್ಡಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಬೆಂಗಳೂರಿನ ಪ್ರಧಾನ ಪೀಠ ಮತ್ತು ಧಾರವಾಡ ಹಾಗೂ ಕಲಬುರ್ಗಿಯ ಪೀಠಗಳಿವೆ. ಕಳೆದ ಮೇ 13ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಪತ್ರ ಬರೆದು, ಎಲ್ಲಾ ಸಹಕಾರ-ನೆರವು ನೀಡುವ ಭರವಸೆ ನೀಡಿದ್ದರು. ಆದರೆ, ಈ ಪ್ರಸ್ತಾವಕ್ಕೆ ಬೆಂಗಳೂರು ವಕೀಲರ ಸಂಘ ತೀವ್ರ ವಿರೋಧ ದಾಖಲಿಸಿತ್ತು.