ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕುಲಪತಿ ಮಧುಕರ್ ಜಿ ಅಂಗೂರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು

ತಮ್ಮ ಹೆಸರಿನಲ್ಲಿದ್ದ ಅಕ್ರಮ ಬ್ಯಾಂಕ್ ಖಾತೆಗಳಿಗೆ ಶುಲ್ಕ ಜಮೆ ಮಾಡುವಂತೆ ಹೇಳಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಿದ್ದಾರೆ ಎಂಬುದು ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರ ಮಾಜಿ ಕುಲಪತಿಯಾಗಿರುವ ಅಂಗೂರ್ ಅವರ ಮೇಲಿನ ಆರೋಪ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕುಲಪತಿ ಮಧುಕರ್ ಜಿ ಅಂಗೂರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು

₹107 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಜಿ ಅಂಗೂರ್‌ಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ. [ಡಾ. ಮಧುಕರ್ ಜಿ ಅಂಗೂರ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ತಮ್ಮ ಹೆಸರಿನಲ್ಲಿದ್ದ ಅಕ್ರಮ ಬ್ಯಾಂಕ್‌ ಖಾತೆಗಳಿಗೆ ಶುಲ್ಕ ಜಮೆ ಮಾಡುವಂತೆ ಹೇಳಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಅಂಗೂರ್‌ ಅವರಿಗೆ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿತು.

“ದಾಖಲೆಯಲ್ಲಿರುವ ಸಾಕ್ಷ್ಯಗಳ ಪರಿಶೀಲನೆ ಆಧರಿಸಿ, ಜಾರಿ ನಿರ್ದೇಶನಾಲಯ ಈಗಾಗಲೇ ಅಗತ್ಯ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ, ಜೊತೆಗೆ ಅರ್ಜಿದಾರರ ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದರಿಂದ ಆರೋಪಿ ಬಿಡುಗಡೆಯಾದರೆ ಅಕ್ರಮ ಹಣ ವರ್ಗಾವಣೆ ಮುಂದುವರಿಕೆಗೆ ಕಾರಣವಾಗಬಹುದು ಎಂಬ ಪ್ರಾಸಿಕ್ಯೂಷನ್‌ ವಾದದಲ್ಲಿ ಹುರುಳಿಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬಹುದು” ಎಂದು ನ್ಯಾಯಾಲಯ ಹೇಳಿತು.

Also Read
[ಅಕ್ರಮ ಹಣ ವರ್ಗಾವಣೆ ಪ್ರಕರಣ] ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಜಾಮೀನು ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ತಾತ್ಕಾಲಿಕ ಮುಟ್ಟುಗೋಲು ಆದೇಶ ಅಥವಾ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ತೀರ್ಪು ನೀಡುವ ನ್ಯಾಯಾಲಯದ ಮುಂದೆ ವಿಚಾರಣೆ ಪ್ರಾರಂಭಿಸಿದರೆ ಅದು ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಪೂರ್ಣಗೊಂಡಿದೆ ಎಂದು ಅರ್ಥವಲ್ಲ ಎಂಬ ಕಾನೂನಿನ ಪ್ರಶ್ನೆಯನ್ನು ಕೂಡ ಹೈಕೋರ್ಟ್ ನಿರ್ಧರಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಅಕ್ರಮವಾಗಿ ತೆರೆಯಲಾಗಿದ್ದ ಬ್ಯಾಂಕ್‌ ಖಾತೆಗಳಿಗೆ ಬೋಧನಾ ಶುಲ್ಕ ಸಲ್ಲಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇಮೇಲ್ ಕಳುಹಿಸುವ ಮೂಲಕ ಅಂಗೂರ್ ಅವರು ಅಂದಾಜು ₹107 ಕೋಟಿಗಳನ್ನು ಸಂಗ್ರಹಿಸಿದ್ದಾರೆ. ಕುಲಪತಿ ಹುದ್ದೆಯಿಂದ ವಜಾಗೊಂಡ ನಂತರವೂ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗಿತ್ತು ಎಂದು ಇ ಡಿ ಆರೋಪಿಸಿತ್ತು.

ವಿಚಾರಣೆ ವೇಳೆ ನ್ಯಾಯಾಲಯ “ಆರೋಪಿ ಪೂರ್ವಭಾವಿ ಅಪರಾಧಕ್ಕೆ ಸಂಬಂಧಿಸಿದಂತೆ ಒಮ್ಮೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅಥವಾ ಸತ್ರ ನ್ಯಾಯಾಲಯ ಜಾಮೀನು ನೀಡಿದರೆ ಅವನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿಯ ಅಪರಾಧಗಳಲ್ಲಿ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ" ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ಅದು ಪುರಸ್ಕರಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಎಸ್ ಜವಳಿ, ವಕೀಲರಾದ ಆಶಿಮಾ ಮಂಡ್ಲಾ, ಮಂದಾಕಿನಿ ಸಿಂಗ್, ಶಿವಾಜಿ ಎಂ ವಾದಿಸಿದ್ದರು. ಇ ಡಿ ಪರವಾಗಿ ವಕೀಲ ಪ್ರಸನ್ನಕುಮಾರ್ ಹಾಗೂ ದೂರುದಾರರ ಪರವಾಗಿ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ದರು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Dr__Madhukar_G_Angur_v__Enforcement_of_Directorate.pdf
Preview

Related Stories

No stories found.
Kannada Bar & Bench
kannada.barandbench.com