ತಂದೆ ಕೊಲೆ ಮಾಡಿದ್ದ ಮಾನಸಿಕ ಅಸ್ವಸ್ಥ ಆರೋಪಿ ಪುತ್ರನಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಮನೋರೋಗಿ ಪುತ್ರನಿಗೆ ಚಿಕಿತ್ಸೆ ಕೊಡಿಸಲು ಆತನನ್ನು ತಂದೆ ಬೆಂಗಳೂರಿಗೆ ಕರೆ ತಂದಿದ್ದರು. ಕುದಿಯುವ ನೀರನ್ನು ಎರಚಿ, ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರಿಂದ ತಂದೆ ಸಾವನ್ನಪ್ಪಿದ್ದರು ಎಂಬ ಮಾಹಿತಿಯನ್ನು ಆರೋಪಿಯ ಚಿಕ್ಕಪ್ಪನಿಗೆ ತಿಳಿಸಲಾಗಿತ್ತು.
Karnataka High Court
Karnataka High Court
Published on

ತಂದೆಯ ಕೊಲೆ ಮಾಡಿದ್ದ ಪ್ರಕರಣವೊಂದರಲ್ಲಿ ಗಾಂಜಾ ಸೇವನೆಯ ಅಡ್ಡಪರಿಣಾಮಗಳು ಹಾಗೂ ಸ್ಕಿಜೋಫ್ರೇನಿಯಾ ಮನೋವ್ಯಾಧಿಯಿಂದ ಬಳಲುತ್ತಿದ್ದ ಆರೋಪಿ ಪುತ್ರನಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ (ಮಾನಕ್‌ ಮೊದಲಿಯಾರ್‌ ವರ್ಸಸ್‌ ಕರ್ನಾಟಕ ರಾಜ್ಯ).

ಅರ್ಜಿದಾರ ಆರೋಪಿ ಮುಂಬೈ ಮೂಲದ ಮಾನಕ್‌ ಮುದಲಿಯಾರ್‌ಗೆ ಸರಿಯಾದ ಚಿಕಿತ್ಸೆ ಕೊಡಿಸಲಿಲ್ಲವೆಂದರೆ ಅವರ ವಿರುದ್ಧದ ಆರೋಪಗಳ ವಿಚಾರಣೆ ನಡೆಸುವುದು ಕಷ್ಟ ಎಂದು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.

“ಆರೋಪಿಯು ಕಳೆದ ಒಂದು ವರ್ಷ ಎರಡು ತಿಂಗಳಿಂದ ಜೈಲಿನಲ್ಲಿದ್ದಾರೆ. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಚಿಕಿತ್ಸೆಯ ದೃಷ್ಟಿಯಿಂದ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲು ನಿರ್ಧರಿಸಲಾಗಿದೆ” ಎಂದು ಪೀಠವು ಹೇಳಿದೆ.

ಮನೋರೋಗದಿಂದ ಬಳಲುತ್ತಿದ್ದ ಆರೋಪಿ ಅರ್ಜಿದಾರನಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಅವರ ತಂದೆ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದರು. ಕುದಿಯುವ ನೀರನ್ನು ತಂದೆಗೆ ಎರಚಿ, ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರಿಂದ ತಂದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಆರೋಪಿಯ ಚಿಕ್ಕಪ್ಪನಿಗೆ ತಿಳಿಸಲಾಗಿತ್ತು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದರು.

Also Read
ಮನೋರೋಗಿಗಳಿಗೆ ವಿದ್ಯುತ್‌ ಕಂಪನ ಚಿಕಿತ್ಸೆ ನೀಡಲು ಅನುಮತಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್‌

2021ರ ಏಪ್ರಿಲ್‌ 16ರಿಂದ ಮೇ 6ರವರೆಗೆ ಆರೋಪಿಯು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆನಲ್ಲಿ ಪಡೆದಿದ್ದಾನೆ. ಆರೋಪಿಯು ಗಾಂಜಾ ಚಟಕ್ಕೆ ಬಿದ್ದು ಮನೋವ್ಯಾದಿಯಿಂದ ಬಳಲುತ್ತಿದ್ದಾನೆ. ಇದಕ್ಕೆ ಆರೋಪಿಯನ್ನು ಅವರ ತಂದೆ ಚಿಕಿತ್ಸೆಗೆ ಬೆಂಗಳೂರಿಗೆ ಕರೆತಂದಿದ್ದರು ಎಂಬುದನ್ನು ಪೀಠವು ಪರಿಗಣಿಸಿದ್ದು, ₹5 ಲಕ್ಷ ವೈಯಕ್ತಿಕ ಬಾಂಡ್‌ ಮತ್ತು ಎರಡು ಭದ್ರತೆ ನೀಡುವಂತೆ ಸೂಚಿಸಿ, ಸಾಕ್ಷ್ಯ ನಾಶಪಡಿಸಬಾರದು ಮತ್ತು ಇದೇ ರೀತಿಯ ಅಪರಾಧದಲ್ಲಿ ಭಾಗಿಯಾಗದಂತೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

Attachment
PDF
Manaank Mudaliar v State of Karnataka
Preview
Kannada Bar & Bench
kannada.barandbench.com