[ಖಾಸಗಿ ದೂರು] ಬಿಎನ್‌ಎಸ್‌ಎಸ್‌ ಪ್ರಕ್ರಿಯೆ ಸಂಹಿತೆ ರೂಪಿಸಿ ಹೆಗ್ಗಳಿಕೆ ಸಾಧಿಸಿದ ಹೈಕೋರ್ಟ್‌

ಸಂಜ್ಞೇ ಪೂರ್ವದಲ್ಲಿಯೇ ನೇರವಾಗಿ ನೋಟಿಸ್‌ ನೀಡುವ ಮೂಲಕ ವಿಚಾರಣಾಧೀನ ನ್ಯಾಯಾಲಯ ಲೋಪ ಎಸಗಿದೆ ಎಂದು ಆಕ್ಷೇಪಿಸಿದ್ದ ಯತ್ನಾಳ್‌ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ.
Minister Shivanand Patil and Basanagouda Patil Yatnal and Karnataka HC
Minister Shivanand Patil and Basanagouda Patil Yatnal and Karnataka HC
Published on

ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿಗೆ ಬಂದ ಬಳಿಕ ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ ಸೆಕ್ಷನ್‌ 223 (1)ರ ಅಡಿ ಖಾಸಗಿ ದೂರಿನಲ್ಲಿ ದೂರುದಾರರ ಪರೀಕ್ಷೆಗೆ (ಎಕ್ಸಾಮಿನೇಷನ್) ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌/ಸಂಬಂಧಿತ ನ್ಯಾಯಾಲಯಗಳು ಪಾಲಿಸಬೇಕಾದ ಪ್ರಕ್ರಿಯೆ ಕುರಿತು ಕರ್ನಾಟಕ ಹೈಕೋರ್ಟ್‌ ಸಂಹಿತೆ ರೂಪಿಸುವ ಮೂಲಕ ಹೊಸ ಮುನ್ನುಡಿ ಬರೆದಿದೆ.

ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌ ಅವರು ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಸ್ವಯಂ ಹೇಳಿಕೆ ದಾಖಲಿಸುವುದಕ್ಕೂ ಮುನ್ನ ಸಂಜ್ಞೇ ಪೂರ್ವದಲ್ಲಿಯೇ ನೇರವಾಗಿ ನೋಟಿಸ್‌ ನೀಡುವ ಮೂಲಕ ವಿಚಾರಣಾಧೀನ ನ್ಯಾಯಾಲಯ ಲೋಪ ಎಸಗಿದೆ ಎಂದು ಆಕ್ಷೇಪಿಸಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಇಂದು ಪ್ರಕಟಿಸಿತು. 

ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ಹಿಂದೆ ಮತ್ತು ಹಾಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 223ರ ಅಡಿ ಖಾಸಗಿ ದೂರು ದಾಖಲಿಸಲಾಗುತ್ತಿದೆ. ಖಾಸಗಿ ದೂರು ದಾಖಲಿಸಿದ ಬಳಿಕ ಮ್ಯಾಜಿಸ್ಟ್ರೇಟ್, ಆರೋಪಿಗೆ ದೂರಿನ ಪ್ರತಿ, ಎಫ್‌ಐಆರ್‌, ಫಿರ್ಯಾದುದಾರ ಮತ್ತು ಸಾಕ್ಷಿಯ ಸ್ವಯಂ ಹೇಳಿಕೆ ಹಾಗೂ ಪೂರಕ ದಾಖಲೆಗಳನ್ನು ಒದಗಿಸಿ, ನಿಮ್ಮ ವಿರುದ್ಧ ಯಾಕೆ ಈ ದೂರನ್ನು ದಾಖಲಿಸಿಕೊಳ್ಳಬಾರದು ಎಂಬುದನ್ನು ವಿವರಿಸಿ ಎಂದು ಆರೋಪಿಯನ್ನು ಕೇಳುವುದು ಕಡ್ಡಾಯ ಎಂದು‌ ನ್ಯಾಯಾಲಯ ಹೇಳಿದೆ.

ಈ ಹಂತದಲ್ಲಿ ಸಂಜ್ಞೇ ಪರಿಗಣಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ನಿಯಮದ ಪ್ರಕಾರ ಮ್ಯಾಜಿಸ್ಟ್ರೇಟ್‌ ಆರೋಪಿಗೆ ನೋಟಿಸ್‌ ಜಾರಿ ಮಾಡಿ, ಅವರ ವಾದ ಆಲಿಸಬೇಕು. ಅವರನ್ನು ಆಲಿಸಿದ ಬಳಿಕ ಸಂಜ್ಞೇ ಪರಿಗಣಿಸಿ, ಪ್ರಕ್ರಿಯೆ ಆರಂಭಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಹಾಕಲು ಯಂತ್ರ ಅಳವಡಿಸುವುದಕ್ಕೆ ಫ್ಯಾಕ್ಟರಿಗಳಿಂದ ಸಚಿವ ಶಿವಾನಂದ್‌ ಪಾಟೀಲ್‌ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸುವ ಮೂಲಕ ಯತ್ನಾಳ್‌ ಮಾನಹಾನಿ  ಮಾಡಿದ್ದಾರೆ ಎಂದು ಆರೋಪಿಸಿ ಶಿವಾನಂದ ಪಾಟೀಲ್‌ ಅವರು ಜಮಖಂಡಿ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

Also Read
ಸಚಿವ ಶಿವಾನಂದ ಪಾಟೀಲ್‌ರಿಂದ ಮಾನನಷ್ಟ ದಾವೆ: ಶಾಸಕ ಯತ್ನಾಳ್‌ ವಿರುದ್ದದ ಶೋಕಾಸ್‌ ನೋಟಿಸ್‌ಗೆ ಹೈಕೋರ್ಟ್‌ ತಡೆ

ಯತ್ನಾಳ್‌ ಅರ್ಜಿ ಪುರಸ್ಕರಿಸಿರುವ ಪೀಠವು ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 2024ರ ಜುಲೈ 16ರಂದು ಹೊರಡಿಸಿರುವ ಆದೇಶವನ್ನು ವಜಾಗೊಳಿಸಿದೆ. ಪ್ರಕರಣವನ್ನು ಪುನಾ ಹೊಸ ಪ್ರಕ್ರಿಯೆಗಳ ಮೂಲಕ ನಡೆಸಬೇಕು. ದೂರು ದಾಖಲಿಸಿಕೊಳ್ಳುವ ಮೊದಲ ಹಂತವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಮುಂದುವರಿಯಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಪೂರೈಸಬೇಕು ಎಂದು ನಿರ್ದೇಶಿಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ವೆಂಕಟೇಶ್ ಪಿ.ದಳವಾಯಿ ಹಾಗೂ ಶಿವಾನಂದ ಎಸ್‌.ಪಾಟೀಲ್‌ ಪರ ನಿವೇದಿತಾ ಸಿ.ಶಿವಶಂಕರ್‌ ವಾದ ಮಂಡಿಸಿದ್ದರು.

Kannada Bar & Bench
kannada.barandbench.com