ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ 21 ಬೀದಿನಾಯಿಗಳ ನಾಪತ್ತೆ: ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್‌ ಅನುಮತಿ

“ಡಿಆರ್‌ಡಿಒ ಎಸ್ಟೇಟ್‌ ವ್ಯವಸ್ಥಾಪಕ ರಾಕೇಶ್‌ ಕುಮಾರ್‌ ಸಾಹು ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ. ಡಿಆರ್‌ಡಿಒ ಸ್ವಚ್ಛತಾ ಮೇಲ್ವಿಚಾರಕ ಟಿ ಜಿ ಸುಧಾಕರ್‌ ‍& ಇತರರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ” ಎಂದ ಪ್ರಾಸಿಕ್ಯೂಟರ್.‌
Stray dogs
Stray dogs
Published on

ಬೆಂಗಳೂರಿನ ಕಗ್ಗದಾಸಪುರದಲ್ಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಎರಡನೇ ಹಂತದ ಕ್ಯಾಂಪಸ್‌ನಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದ 21 ಬೀದಿ ನಾಯಿಗಳ ನಾಪತ್ತೆ ಪ್ರಕರಣದ ಸಂಬಂಧಿತ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಿ ವಿ ರಾಮನ್‌ ನಗರದಲ್ಲಿರುವ ಡಿಆರ್‌ಡಿಒ ಟೌನ್‌ಷಿಪ್‌ ಮೊದಲನೇ ಹಂತದ ಎಸ್ಟೇಟ್‌ ಮ್ಯಾನೇಜರ್‌ ರಾಕೇಶ್‌ ಕುಮಾರ್ ಸಾಹು ಹಾಗೂ ಡಿಆರ್‌ಡಿಒ ಸ್ವಚ್ಛತಾ ಮೇಲ್ವಿಚಾರಕ ಟಿ ಜಿ ಸುಧಾಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ಡಿಆರ್‌ಡಿಒ ಎಸ್ಟೇಟ್‌ ವ್ಯವಸ್ಥಾಪಕ ರಾಕೇಶ್‌ ಕುಮಾರ್‌ ಸಾಹು ಅವರ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ. ಡಿಆರ್‌ಡಿಒ ಸ್ವಚ್ಛತಾ ಮೇಲ್ವಿಚಾರಕ ಟಿ ಜಿ ಸುಧಾಕರ್‌ ಮತ್ತು ಇತರರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ” ಎಂದರು.

ಅರ್ಜಿದಾರರ ಪರ ವಕೀಲ ವಿ ವಿನಯ್‌ ಅವರು ಸಾಹು ಅವರನ್ನು ಎಫ್‌ಐಆರ್‌ನಲ್ಲಿ ಮೊದಲ ಆರೋಪಿಯನ್ನಾಗಿಸಲಾಗಿತ್ತು. ಈಗ ಅವರನ್ನು ಕೈಬಿಟ್ಟು ಸ್ವಚ್ಛತಾ ಮೇಲ್ವಿಚಾರಕ ಮತ್ತು ಇತರರ ವಿರುದ್ಧ ಆರೋಪ ಮಾಡಲಾಗಿದೆ. ಹೀಗಾಗಿ, ಅದನ್ನು ದಾಖಲಿಸಬೇಕು” ಎಂದರು.

ಇದಕ್ಕೆ ಕಿವಿಗೊಡದ ನ್ಯಾಯಾಲಯವು ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಅನುಮತಿಸಿ, ವಿಚಾರಣೆಯನ್ನು ಆಗಸ್ಟ್‌ ೨೦ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. 2026ರ ಮಾರ್ಚ್ 5 ರಂದು 21 ಬೀದಿ ನಾಯಿಗಳ ಮೇಲೆ ದೌರ್ಜನ್ಯ ನಡೆದಿದೆ. ಅವುಗಳ ಕಾಲು ಮತ್ತು ಬಾಯಿಗಳನ್ನು ಕಟ್ಟಿ ಗೋಣಿಚೀಲದಲ್ಲಿ ಹಾಕಿ ಸಾಗಿಸಲಾಗಿದೆ. ಮೂರು ನಾಯಿಗಳನ್ನು ಸ್ಥಳೀಯರು  ರಕ್ಷಣೆ ಮಾಡಿದ್ದಾರೆ ಎಂಬ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

Also Read
ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ 21 ಬೀದಿನಾಯಿಗಳ ನಾಪತ್ತೆ: ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದ ಹೈಕೋರ್ಟ್‌

‘ಬೀದಿನಾಯಿಗಳು ರಾತ್ರೋರಾತ್ರಿ ನಾಪತ್ತೆಯಾಗಿವೆ’ ಎಂದು ಪ್ರಾಣಿಪ್ರಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು (ಬೆಂಗಳೂರು ಪೂರ್ವ) ಮಹದೇವಪುರ ಪೊಲೀಸ್ ಠಾಣೆಯಲ್ಲಿ 2026ರ ಮಾರ್ಚ್‌ 9ರಂದು ದೂರು ನೀಡಿದ್ದರು. 

ಇದರನ್ವಯ ಪೊಲೀಸರು ಅರ್ಜಿದಾರರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಸೆಕ್ಷನ್‌ 11 ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) ಸೆಕ್ಷನ್ 240, 325, 270, 61(1)ರ ಅಡಿ ಎಫ್‌ಐಆರ್‌ ದಾಖಲಿಸಿದ್ದರು.

Kannada Bar & Bench
kannada.barandbench.com