ಚಕ್ಕಡಿ, ಗೂಳಿ ಸ್ಪರ್ಧೆಗೆ ಅನುಮತಿ: ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದ ಹೈಕೋರ್ಟ್‌

ಮಂಡ್ಯದಲ್ಲಿ ಚಕ್ಕಡಿ ಸ್ಪರ್ಧೆ ನಡೆಸಲು ಅನುಮತಿಸಬಾರದು. ರಾಜ್ಯದಲ್ಲಿ ನಡೆಯುವ ಚಕ್ಕಡಿ/ಗೂಳಿ ಸ್ಪರ್ಧೆಗಳ ಮೇಲೆ ನಿಗಾ ಇಡುವಂತೆ ಪ್ರಾಣಿ ಕಲ್ಯಾಣ ಮಂಡಳಿಗೆ ಆದೇಶ ಮಾಡಬೇಕು ಎಂದು ಮನವಿದಾರರು ಕೋರಿದ್ದರು.
Karnataka HC and Bullock cart race
Karnataka HC and Bullock cart race

ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿ, ಗೂಳಿ, ಚಕ್ಕಡಿ ಸ್ಪರ್ಧೆ ನಡೆಸಲು ಅನುಮತಿಸಲು ರಾಜ್ಯ ಸರ್ಕಾರಕ್ಕೆ ಬುಧವಾರ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಹೈಕೋರ್ಟ್‌ ಈ ಸಂಬಂಧ ಸಲ್ಲಿಕೆಯಾಗಿದ್ದ ಮನವಿಯನ್ನು ವಿಲೇವಾರಿ ಮಾಡಿದೆ.

ಮಂಡ್ಯ ಜಿಲ್ಲೆಯಲ್ಲಿ ಚಕ್ಕಡಿ ಸ್ಪರ್ಧೆ ನಡೆಸಲು ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೈಸೂರು ಪ್ರಾಣಿ ದಯಾ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು. 2021ರ ಮಾರ್ಚ್‌ನಲ್ಲಿ ಚಕ್ಕಡಿ ಸ್ಪರ್ಧೆ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ನಡೆಯುವ ಚಕ್ಕಡಿ, ಗೂಳಿ ಸ್ಪರ್ಧೆಗಳ ಮೇಲೆ ನಿಗಾ ಇಡುವಂತೆ ಪ್ರಾಣಿ ಕಲ್ಯಾಣ ಮಂಡಳಿಗೆ ಆದೇಶ ಮಾಡಬೇಕು ಎಂದೂ ಮನವಿ ಮಾಡಲಾಗಿತ್ತು.

“ಚಕ್ಕಡಿ, ಗೂಳಿ, ಕಂಬಳ ಸ್ಪರ್ಧೆ ನಡೆಸಲು ಅನುಮತಿಸಲು ಅಗತ್ಯವಾದ ಶಾಸನಬದ್ಧ ನಿಬಂಧನೆಗಳು ಜಾರಿಯಲ್ಲಿರುವುದರಿಂದ ಹೆಚ್ಚಿನ ಆದೇಶದ ಅಗತ್ಯವಿಲ್ಲ. ಮೇಲೆ ಹೇಳಲಾದ ಷರತ್ತುಗಳಿಗೆ ಒಳಪಟ್ಟು ರಾಜ್ಯ ಸರ್ಕಾರವು ಶಾಸನಬದ್ಧ ನಿಬಂಧನೆಗಳ ಅನ್ವಯ ಅನುಮತಿ ನೀಡಬೇಕು” ಎಂದು ಪೀಠ ಹೇಳಿತು.

ರಾಜ್ಯದಲ್ಲಿ ಪರಂಪರಾಗತವಾಗಿ ಕೆಲ ಆಚರಣೆಗಳು ಅಸ್ವಿತ್ವದಲ್ಲಿದ್ದು, ಪ್ರಾಣಿಗಳಿಗೆ ಹಿಂಸೆ ಆಗದಂತೆ ತಡೆಯಲು ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಹೇಳಿತು. ಚಕ್ಕಡಿ ಸ್ಪರ್ಧೆ ನಡೆಸಲು ಕಳೆದ ಮಾರ್ಚ್‌ನಲ್ಲಿ ಅನುಮತಿಸಲಾಗಿತ್ತಾದರೂ ಕೋವಿಡ್‌ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಅನುಮತಿ ಹಿಂಪಡೆಯಲಾಗಿತ್ತು.

Also Read
ಕಾವೇರಿ ಕಾಲಿಂಗ್‌: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌; ಗಿಡ ನೆಡಲು ₹10,626 ಕೋಟಿ ಬೇಕಿಲ್ಲ ಎಂದ ಇಶಾ ಫೌಂಡೇಷನ್

2017ರಲ್ಲಿ ಕಾಯಿದೆಗೆ ತಿದ್ದುಪಡಿ ಮಾಡಲಾಗಿದ್ದು, ಅದು 2018ರ ಫೆಬ್ರವರಿ 20ರಲ್ಲಿ ಜಾರಿಗೆ ಬಂದಿದೆ. ತಿದ್ದುಪಡಿ ಕಾಯಿದೆಯ ಸೆಕ್ಷನ್‌ 6ರ ಪ್ರಕಾರ ಪ್ರಧಾನ ಕಾಯಿದೆಯ ಸೆಕ್ಷನ್‌ 27ರಲ್ಲಿ ಕಲಂ (ಬಿ) ಬಳಿಕ ಕೆಳಗಿನ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ʼಸಿʼ ಅಡಿ ಪರಂಪರಾಗತ ಸಂಪ್ರದಾಯ ಮತ್ತು ಸಂಸ್ಕೃತಿ ರಕ್ಷಿಸುವ ದೃಷ್ಟಿಯಿಂದ ಮತ್ತು ಎಮ್ಮೆಗಳ ನಾಟಿ ತಳಿ ರಕ್ಷಣೆ ಮತ್ತು ಅಸ್ತಿತ್ವದ ದೃಷ್ಟಿಯಿಂದ ಕಂಬಳ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ʼಡಿʼ ಅಡಿ ದೇಶಿ ತಳಿಯ ಗೋವುಗಳ ಸಂರಕ್ಷಣೆ ಮತ್ತು ರೂಢಿಗತ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ ಗೂಳಿ, ಎತ್ತು, ಚಕ್ಕಡಿ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿದೆ” ಎಂದು ಹೇಳಲಾಗಿದೆ.

“ಕಾಯಿದೆಯಲ್ಲಿ ಚಕ್ಕಡಿ ಸ್ಪರ್ಧೆ ನಡೆಸಲು ಅನುಮತಿ ಕಲ್ಪಿಸಲಾಗಿದೆ. ಅಲ್ಲದೇ, ಶಾಸನಬದ್ಧ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾಗಿಲ್ಲ. ಮಹಾರಾಷ್ಟ್ರದಲ್ಲಿ ಚಕ್ಕಡಿ ಸ್ಪರ್ಧೆಗೆ ಅನುಮತಿ ನೀಡುವಾಗ ಶಿವಾಜಿರಾವ್‌ ಅಧಾಲ್‌ರಾವ್‌ ಪಾಟೀಲ್‌ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಕೆಲವು ಷರತ್ತುಗಳನ್ನು ಸುಪ್ರೀಂ ಕೋರ್ಟ್‌ ವಿಧಿಸಿದ್ದು, ಅದೇ ಷರತ್ತುಗಳನ್ನು ಇಲ್ಲಿಯೂ ಅನ್ವಯಿಸಬೇಕು” ಎಂದು ಪೀಠ ಹೇಳಿದೆ.

Kannada Bar & Bench
kannada.barandbench.com