ಸರ್ಕಾರಿ ಅಭಿಯೋಜಕರ ನೇಮಕಾತಿ: ಹೈಕೋರ್ಟ್‌ ಆದೇಶ ಪಾಲನೆ ಮಾಡಲಾಗಿದೆ ಎಂದು ತಿಳಿಸಿದ ರಾಜ್ಯ ಸರ್ಕಾರ

ರಾಜ್ಯದಲ್ಲಿನ 24 ಸರ್ಕಾರಿ ಅಭಿಯೋಜಕರ ಖಾಲಿ ಹುದ್ದೆಗಳ ಪೈಕಿ 19 ಅನ್ನು ತುಂಬಲಾಗಿದೆ. 58 ಹಿರಿಯ ಸರ್ಕಾರಿ ಅಭಿಯೋಜಕರ ಹುದ್ದೆಗಳ ಪೈಕಿ 24 ಅನ್ನು ತುಂಬಲಾಗಿದೆ ಎಂದು ತಿಳಿಸಿದ ಸರ್ಕಾರ.
Karnataka HC
Karnataka HC

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಬಹುತೇಕ ಮಟ್ಟದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಅಭಿಯೋಜಕರು, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ 2019ರಲ್ಲಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ವಕೀಲರು ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

“ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರು ಗಣನೀಯ ಮಟ್ಟದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ. 24 ಸರ್ಕಾರಿ ಅಭಿಯೋಜಕರ ಖಾಲಿ ಹುದ್ದೆಗಳ ಪೈಕಿ 19 ಅನ್ನು ತುಂಬಲಾಗಿದೆ. 58 ಹಿರಿಯ ಸರ್ಕಾರಿ ಅಭಿಯೋಜಕರ ಹುದ್ದೆಗಳ ಪೈಕಿ 24 ಅನ್ನು ತುಂಬಲಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಪರೀಕ್ಷೆ ನಡೆಸಲಿದ್ದು, ಈ ಪ್ರಕ್ರಿಯೆಯು ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಲಿದೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

“ಸರ್ಕಾರಿ ಅಭಿಯೋಜಕರು ಮತ್ತು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಸಿಗದ ಹಿನ್ನೆಲೆಯಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಅರ್ಹರನ್ನು ನೇಮಿಸುವ ಪ್ರಕ್ರಿಯೆಯನ್ನು ಮತ್ತೊಮ್ಮೆ ಆರಂಭಿಸಿ ಅವುಗಳನ್ನು ನೇಮಕ ಮಾಡಲಾಗುವುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಾಲ್ಕು ವಾರಗಳಲ್ಲಿ ಅನುಪಾಲನಾ ವರದಿ ಸಲ್ಲಿಸುವಂತೆ ಪೀಠವು ಸರ್ಕಾರಕ್ಕೆ ಆದೇಶ ಮಾಡಿದೆ.

ಕಳೆದ ಜುಲೈನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಅಭಿಯೋಜಕರ ಪಟ್ಟಿಯನ್ನು ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 189 ಸರ್ಕಾರಿ ಅಭಿಯೋಜಕರ ಹುದ್ದೆಗಳ ಪೈಕಿ 168 ಹುದ್ದೆಗಳನ್ನು ತುಂಬಲಾಗಿದ್ದು, 21 ಹುದ್ದೆಗಳು ಖಾಲಿ ಇವೆ. 28 ಸರ್ಕಾರಿ ಅಭಿಯೋಜಕರ ನಿಯೋಜನೆಯ ಹುದ್ದೆಗಳ ಪೈಕಿ 25 ಅನ್ನು ಭರ್ತಿ ಮಾಡಲಾಗಿದೆ ಎಂದು ತಿಳಿಸಲಾಗಿತ್ತು.

ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ 123 ಹುದ್ದೆಗಳ ಪೈಕಿ 65 ಅನ್ನು ಭರ್ತಿ ಮಾಡಲಾಗಿದೆ. 28 ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳ ಪೈಕಿ ಐದನ್ನು ಭರ್ತಿ ಮಾಡಲಾಗಿದೆ. 401 ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಕೇವಲ 151 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದ್ದು, 242 ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿದೆ. 205 ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿತ್ತು.

Also Read
ವರ್ಚುವಲ್, ಹೈಬ್ರಿಡ್ ವಿಧಾನದಲ್ಲಿ ಕಲಾಪ: ಸಿಜೆಐ, ಸುಪ್ರೀಂಕೋರ್ಟ್ ಇ- ಸಮಿತಿ ಅಧ್ಯಕ್ಷರಿಗೆ ಯುವ ವಕೀಲರ ಪತ್ರ

ಕಳೆದ ವಿಚಾರಣೆಯ ಸಂದರ್ಭದಲ್ಲಿ ಪೀಠವು “ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ಆರೋಪಿಗೂ ವೇಗವಾಗಿ ವಿಚಾರಣೆ ಪೂರ್ಣಗೊಳಿಸಿಕೊಳ್ಳುವ ಹಕ್ಕಿದೆ. ಅಭಿಯೋಜಕರ ಕೊರತೆಯ ಹಿನ್ನೆಲೆಯಲ್ಲಿ ವಿಚಾರಣೆ ತಡವಾದರೆ ಅದು ಸಂವಿಧಾನದ 21ನೇ ವಿಧಿಯಡಿ ಆರೋಪಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಹೇಳಿತ್ತು.

“ರಾಜ್ಯ ಸರ್ಕಾರವು ಅಭಿಯೋಜಕರನ್ನು ನೇಮಕ ಮಾಡುವಲ್ಲಿ ವಿಫಲವಾಗಿರುವುದರಿಂದ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯದಾನಕ್ಕೆ ಸಮಸ್ಯೆಯಾಗಿದೆ. ರಾಜ್ಯದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ 8,10,730 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಐದು ವರ್ಷಕ್ಕಿಂತ ಹಳೆಯದಾದ 61,867 ಪ್ರಕರಣಗಳಿದ್ದು, ಹತ್ತು ವರ್ಷಕ್ಕಿಂತ ಹಳೆಯದಾದ ಪ್ರಕರಣಗಳ ಸಂಖ್ಯೆ 10,650” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com