ಅರ್ಹ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಯೋಜನೆಯ ಅಡಿ ಪ್ರಸಕ್ತ ವರ್ಷದ ಜೂನ್ 1ರಿಂದ ಅಕ್ಟೋಬರ್ 31ರ ವರೆಗೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿತ್ತು.
“ಮೇಲ್ನೋಟಕ್ಕೆ ಗಮನಿಸಿದರೆ, ಮಧ್ಯಾಹ್ನದ ಬಿಸಿಯೂಟದಿಂದ ವಂಚಿತರಾದವರಿಗೆ ಸರಿದೂಗಿಸುವಂತೆ ಆದೇಶದಲ್ಲಿ ಉಲ್ಲೇಖಿಸಿರುವುದು ಕಾಣುತ್ತಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಲಾಗಿದೆ.
2020-21ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿಯ ಕುರಿತು ಡಿಸೆಂಬರ್ 5ರಂದು ಹೊರಡಿಸಿರುವ ಆದೇಶದ ಮೆಮೊವನ್ನು ರಾಜ್ಯ ಸರ್ಕಾರವು ದಾಖಲೆಯ ರೂಪದಲ್ಲಿ ಇಂದು ನ್ಯಾಯಪೀಠಕ್ಕೆ ಸಲ್ಲಿಸಿತು. ಅರ್ಹ ವಿದ್ಯಾರ್ಥಿಗಳಿಗೆ ಒಂದು ಕಿಲೊ ಉಪ್ಪು, ಒಂದು ಲೀಟರ್ ಎಣ್ಣೆ ಮತ್ತು ತೊಗರಿ ಬೇಳೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ವಿಚಾರಣೆಯ ವೇಳೆ ನ್ಯಾಯಪೀಠವು ಸದರಿ ಯೋಜನೆಯ ಕುರಿತು ಆಕ್ಷೇಪಣೆ ಎತ್ತಿದ್ದು, ಎಷ್ಟು ತೊಗರಿ ಬೇಳೆ ವಿತರಿಸಲಾಗುತ್ತದೆ ಎಂಬುದನ್ನು ಹೇಳಿಲ್ಲ ಎಂದು ಹೇಳಿದೆ.
“ಒಂದು ಕೆಜಿ ಉಪ್ಪು ನೀಡುವುದರ ಹಿಂದಿರುವ ಘನ ಉದ್ದೇಶವೇನು? ಇದು ತರ್ಕಹೀನ ಎನಿಸುವುದಿಲ್ಲವೇ? ಸಣ್ಣ ಮಗುವಿಗೆ ಒಂದು ಕೆಜಿ ಉಪ್ಪು ಮತ್ತು ಒಂದು ಲೀಟರ್ ಅಡುಗೆ ಎಣ್ಣೆ ನೀಡಲಾಗುತ್ತದೆಯೇ?... ಉಲ್ಲೇಖ ಅಸ್ಪಷ್ಟವಾಗಿರುವಂತಿಲ್ಲ, ಎಷ್ಟು ಪ್ರಮಾಣದ ಆಹಾರ (ತೊಗರಿ ಬೇಳೆ) ವಿತರಿಸಲಾಗುತ್ತದೆ ಎಂಬುದನ್ನು ನೀವು ನಿರ್ಧರಿಸಬೇಕು” ಎಂದು ಹೇಳಿತು.
ಇದನ್ನು ಹೊರತುಪಡಿಸಿ, ಕಳೆದ ಕೆಲವು ತಿಂಗಳಲ್ಲಿ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿರುವ ಕೆಲವು ಉತ್ಪನ್ನಗಳ ಬೆಲೆಯು ಸಾಕಷ್ಟು ಏರಿಳಿತದಿಂದ ಕೂಡಿದ ಎಂಬ ಸರ್ಕಾರದ ವಾದದಿಂದ ನ್ಯಾಯಾಲಯ ಸಂತುಷ್ಟವಾಗಲಿಲ್ಲ. ಈ ವೇಳೆ ನ್ಯಾಯಾಲಯವು ಹೀಗೆ ಹೇಳಿತು:
ಸಾಂಕ್ರಾಮಿಕತೆಯ ನಡುವೆಯೂ ಮಕ್ಕಳಿಗೆ ಹಲವು ತಿಂಗಳ ಕಾಲ ಮಧ್ಯಾಹ್ನದ ಬಿಸಿಯೂಟ ವಿತರಿಸದೇ ಇರುವುದರಿಂದ ಅದರ ಬದಲಿಗೆ ಬೇರೇನಾದರೂ ನೀಡಿ ಸರಿದೂಗಿಸಬೇಕಿದೆ ಎಂದು ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿʼರೊಜಾರಿಯೊ ವಾದಿಸಿದರು. ಇದು ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾಗಲಿದೆ ಎಂದರು.