ಮನುಷ್ಯನ ಜೀವಕ್ಕೆ ಎರವಾಗಬಹುದಾದ 23 ಭೀಷಣ ಶ್ವಾನ ತಳಿಗಳ ಸಾಕುವಿಕೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಈಚೆಗೆ ಹೊರಡಿಸಿದ್ದ ಸುತ್ತೋಲೆಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ತಜ್ಞರು ಸಂಬಂಧಿತ ಯಾರನ್ನು ಸಂಪರ್ಕಿಸಿಲ್ಲ ಎಂದು ಆಕ್ಷೇಪಿಸಿ ವೃತ್ತಿಪರ ಶ್ವಾನ ಹ್ಯಾಂಡ್ಲರ್ ಮತ್ತು ರಾಟ್‌ವೈಲರ್ ಮಾಲೀಕರಾದ ಕಿಂಗ್ ಸೋಲೋಮೊನ್ ಡೇವಿಡ್ ಮತ್ತು ಮರ್ಡೋನಾ ಜೋನ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೀಠವು ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಸಮಾಲೋಚನೆ ನಡೆಸಿ, ಸೂಕ್ತ ವಿಧಿ-ವಿಧಾನಗಳ ಅನುಸರಿಸುವ ಮೂಲಕ ಹೊಸ ಸುತ್ತೋಲೆ ಹೊರಡಿಸುವ ಸ್ವಾತಂತ್ರ್ಯ ಕೇಂದ್ರ ಸರ್ಕಾರಕ್ಕಿದೆ ಎಂದೂ ಪೀಠ ಹೇಳಿದೆ.
“ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಸಂಬಂಧಿತ ಯಾರನ್ನೂ ಆಲಿಸಿಲ್ಲ ಎಂಬುದು ಒಪ್ಪಿತ ವಿಚಾರವಾಗಿದೆ. ಪ್ರಾಣಿಗಳ ಮೇಲಿನ ಹಿಂಸೆ ನಿಷೇಧ ಕಾಯಿದೆಗೆ ಪೂರಕವಾಗಿ ಸಮಿತಿ ಇಲ್ಲ. ಸೂಕ್ತ ಸಮಿತಿಯ ಶಿಫಾರಸ್ಸನ್ನು ಆಧರಿಸಿದೇ ಒಕ್ಕೂಟ ಸರ್ಕಾರವು 23 ಭೀಷಣ ಶ್ವಾನ ತಳಿಗಳನ್ನು ನಿಷೇಧಿಸಬಾರದಿತ್ತು. ಹಾಲಿ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿ ಒಕ್ಕೂಟ ಸರ್ಕಾರ ನಿಷೇಧ ಆದೇಶ ಮಾಡಬಾರದಿತ್ತು. ಪ್ರಾಣಿ ಜನನ ನಿಯಂತ್ರಣ ನಿಯಮಗಳನ್ನು ಮೀರಿ ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯು ಕಾನೂನಿಗೆ ವಿರುದ್ಧವಾಗಿದ್ದು, ಅದನ್ನು ವಜಾ ಮಾಡಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ಸಂಬಂಧಿತ ಎಲ್ಲರ ಜೊತೆ ಸಮಾಲೋಚನೆ ನಡೆಸಿ, ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ಹೊಸ ಸುತ್ತೋಲೆ ಹೊರಡಿಸಬಹುದಾಗಿದೆ. ಶ್ವಾನ ತಳಿ ಪ್ರಮಾಣೀಕರಿಸುವ ಸಂಸ್ಥೆಗಳು ಮತ್ತು ಪ್ರಾಣಿ ದಯಾ ಸಂಘಟನೆಗಳನ್ನು ಸರ್ಕಾರ ಕಡ್ಡಾಯವಾಗಿ ಆಲಿಸಬೇಕು ಎಂದಿದೆ.
“ಶ್ವಾನದ ಮಾಲೀಕರ ಜವಾಬ್ದಾರಿಯು ನೈತಿಕ ಜವಾಬ್ದಾರಿ ಹೊಂದುವುದಕ್ಕೆ ಮಾತ್ರ ಸೀಮಿತವಾಗಬಾರದು. ಶ್ವಾನದಿಂದ ಹಾನಿಗೊಳಗಾದ ವ್ಯಕ್ತಿಯ ಇಡೀ ಚಿಕಿತ್ಸೆಗೆ ಹೊಣೆಗಾರರನ್ನಾಗಿ ಮಾಡುವುದರ ಜೊತೆಗೆ ಹಾನಿಗೆ ಪ್ರತ್ಯೇಕ ಪರಿಹಾರಕ್ಕೂ ಅವರನ್ನು ಹೊಣೆಗಾರರನ್ನಾಗಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಪಿಟ್‌ಬುಲ್ ಟೆರಿಯರ್, ಟೋಸ ಇನು, ಅಮೆರಿಕನ್ ಸ್ಟಾಫೋರ್ಡ್‌ಶೈರ್ ಟೆರಿಯರ್, ಫಿಲಾ ಬ್ರಸಿಲೈರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್ ಬುಲ್‌ಡಾಗ್, ಬೋರ್‌ಬೋಯಲ್, ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್, ಕಾಕಸಿಯನ್ ಸ್ಟೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೋರ್ನಜಕ್, ಸರ್ಪ್ಲಾನಿನಕ್, ಜಪಾನೀಸ್ ಟೋಸಾ, ಜಪಾನೀಸ್ ಅಕಿತಾ, ಮಸ್ಟಿಫ್ಸ್, ರಾಟ್‌ವೈಲರ್, ಟೆರಿರಯರ್ಸ್, ರೋಡೆಸಿಯನ್ ರಿಡ್ಜ್‌ಬ್ಯಾಕ್, ವೂಲ್ಫ್ ಡಾಗ್ಸ್, ಕೆನರಿಯೋ ಅಕ್ಬಾಷ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಬ್ಯಾನ್ ಡಾಗ್ ತಳಿಯ ಶ್ವಾನಗಳು ಅಪಾಯಕಾರಿ ಎಂದು ತಜ್ಞರ ಸಮಿತಿ ಹೇಳಿತ್ತು. ಇದನ್ನು ಆಧರಿಸಿ ಮಾನವ ಬದುಕಿಗೆ ಅಪಾಯಕಾರಿಯಾಗಿರುವ ಈ ಶ್ವಾನಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆಯ ಮೂಲಕ ಸೂಚಿಸಿತ್ತು. ಇದನ್ನು ಈಗ ವಜಾ ಮಾಡಲಾಗಿದೆ.
ಅರ್ಜಿದಾರರ ಪರವಾಗಿ ಆರ್ ಸ್ವರೂಪ್ ಆನಂದ್, ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಪ್ರತಿನಿಧಿಸಿದ್ದರು.