ಶೇ.40 ಕಮಿಷನ್ ಆರೋಪ: ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಹೂಡಿದ್ದ ಮಾನಹಾನಿ ದಾವೆ ವಜಾಗೊಳಿಸಿದ ಹೈಕೋರ್ಟ್‌

“ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದುವರಿಕೆಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಹೀಗಾಗಿ, 4ನೇ ಆರೋಪಿ ರಾಹುಲ್‌ ಗಾಂಧಿ ವಿರುದ್ಧದ ಪ್ರಕ್ರಿಯೆ ಬದಿಗೆ ಸರಿಸಲಾಗಿದೆ” ಎಂದು ಆದೇಶಿಸಿದ ನ್ಯಾಯಾಲಯ.
Rahul Gandhi
Rahul Gandhi Facebook
Published on

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ದಿನ ಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿದ್ದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಆರೋಪದ ಕುರಿತು ಬಿಜೆಪಿಯು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹೂಡಿದ್ದ ಮಾನಹಾನಿ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶ ರದ್ದತಿ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದುವರಿಕೆಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಹೀಗಾಗಿ, 4ನೇ ಆರೋಪಿ ರಾಹುಲ್‌ ಗಾಂಧಿ ವಿರುದ್ಧದ ಪ್ರಕ್ರಿಯೆ ಬದಿಗೆ ಸರಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.

ಹಾಲಿ ಪ್ರಕರಣದಲ್ಲಿ ಆರೋಪಣೆಯು ವ್ಯಗ್ಯೋಂಕ್ತಿಯಾಗಿದ್ದು, ಅದನ್ನು ಪಕ್ಷಕ್ಕೆ ವಿಸ್ತರಿಸಲಾಗಿದೆ. ಟ್ವೀಟ್‌ನಲ್ಲಿ ಬಳಕೆ ಮಾಡಿರುವ ಜಾಹೀರಾತಿನಲ್ಲಿ ಯಾವುದೇ ಪಕ್ಷವನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಜಾಹೀರಾತಿನಲ್ಲಿ ಉಲ್ಲೇಖಿಸಿರುವ ಪದಾಧಿಕಾರಿಗಳ ವಿರುದ್ಧ ಆರೋಪವಿದೆ. ಜಾಹೀರಾತಿನಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವವರ ಕುರಿತು ಉಲ್ಲೇಖಿಸಲಾಗಿದ್ದು, ಸರ್ಕಾರಿ ಯೋಜನೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಫಲಾನುಭವಿಗಳು ಎಂದು ಉಲ್ಲೇಖಿಸಲಾಗಿದೆ. ಜಾಹೀರಾತಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ನ್ಯಾಯಾಲಯದ ಮುಂದೆ ಬಂದಿಲ್ಲ. ಹೀಗಾಗಿ, ಜಾಹೀರಾತಿನಲ್ಲಿನ ವಾಸ್ತವಿಕ ರಾಜಕೀಯ ಪಕ್ಷವು ಬಾದಿತ ವ್ಯಕ್ತಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯು ನ್ಯಾಯಾಲಯದ ವ್ಯಾಪ್ತಿಯ ಪ್ರದೇಶದ ಹೊರಗಿರುವುದರಿಂದ ಸಿಆರ್‌ಪಿಸಿ ಸೆಕ್ಷನ್‌ 202 ಅಡಿ ತನಿಖೆ ನಡೆಸಬೇಕಿದೆ. ಇದರಲ್ಲೂ ಪ್ರಕ್ರಿಯೆ ಲೋಪವಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 202ರ ಪ್ರಕ್ರಿಯೆ ಪಾಲಿಸದಿರುವುದು ರಾಹುಲ್‌ ಗಾಂಧಿಗೆ ಪೂರ್ವಾಗ್ರಹ ಉಂಟು ಮಾಡಲಿದೆ. ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್‌ 202 ತನಿಖೆ ನಡೆಸಲು ಕೋರದೇ ದೂರುದಾರರು ಸಾಮಾನ್ಯ ನಡೆಯನ್ನು ಅನುಸರಿಸಿದ್ದಾರೆ. ಸಮನ್ಸ್‌ ಜಾರಿ ಮಾಡುವುದಕ್ಕೂ ಮುನ್ನ ಈ ಪ್ರಕ್ರಿಯೆ ಪಾಲಿಸಲು ದೂರುದಾರರು ಕೋರಬೇಕಿತ್ತು ಎಂದು ಪೀಠ ಹೇಳಿದೆ.

ಆರೋಪಿಯನ್ನು ಪ್ರಾಸಿಕ್ಯೂಷನ್‌ ದೂರಿನ ಭಾಗವಾಗಿಸುವುದಕ್ಕೂ ಮುನ್ನ ಸಮನ್ಸ್‌ ಜಾರಿ ಮಾಡುವುದಕ್ಕೂ ಮುಂಚೆಯೇ ವಿಚಾರಣಾಧೀನ ನ್ಯಾಯಾಲಯವು ವಿವೇಚನೆ ಬಳಸಬೇಕಿತ್ತು. ಪ್ರಾಸೆಸ್‌ ಜಾರಿಗೂ ಮುನ್ನ ಮೇಲ್ನೋಟಕ್ಕೆ ಪ್ರಕರಣ ಇದೆಯೇ ಎಂಬುದನ್ನು ವಿಚಾರಣಾಧೀನ ನ್ಯಾಯಾಲಯ ನಿರ್ಧರಿಸಬೇಕಿತ್ತು. ಹಾಲಿ ಪ್ರಕರಣದಲ್ಲಿ ಜಾಹೀರಾತು ಮಾತ್ರ ಇಟ್ಟುಕೊಂಡು ತೀರ್ಮಾನಿಸಲಾಗಿದೆ. ಆದರೆ, ಅದರಲ್ಲಿ ಆರೋಪಿಯ ವಿರುದ್ಧ ಪ್ರಕರಣ ಮುಂದುವರಿಸುವ ಯಾವುದೇ ಅಂಶಗಳಿಲ್ಲ. ಟ್ವೀಟ್‌ ಅನ್ನು ದಾಖಲೆಯಲ್ಲಿ ಸೇರಿಸದೇ ಆನಂತರದ ವಿಚಾರಣೆಯಲ್ಲಿ ಅದನ್ನು ದೂರಿನ ಭಾಗವಾಗಿಸಲಾಗುವುದು ಎಂದು ಬಿಜೆಪಿ ಪರ ವಕೀಲರು ಹೇಳಿರುವುದು ಕಾನೂನಿನ ದೋಷವನ್ನು ಸರಿಪಡಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಹುಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು “ರಾಹುಲ್‌ ರಿಟ್ವೀಟ್‌ ಮಾಡಿರುವುದಕ್ಕೆ ಯಾವುದೇ ದಾಖಲೆಯನ್ನು ಬಿಜೆಪಿ ಸಲ್ಲಿಸಿಲ್ಲ. ಅದನ್ನು ಎಷ್ಟು ಜನ ನೋಡಿದ್ದಾರೆ ಮತ್ತು ಅದರಿಂದ ಮಾನಹಾನಿಯಾಗಿದೆಯೇ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲಿ 40 ಮಂದಿ ಇದ್ದರು ಎಂದು ಹೇಳುವ ಬಿಜೆಪಿಯು ಅವರನ್ನೆಲ್ಲಾ ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ? ರಾಹುಲ್‌ ಉಪಾಧ್ಯಕ್ಷರಾಗಿದ್ದಾರೆ ಎಂಬುದರ ಮೇಲೆ ಇಡೀ ದೂರು ನಿಂತಿದೆ. ಆದರೆ, ಆ ಸಂದರ್ಭದಲ್ಲಿ ರಾಹುಲ್‌ ಉಪಾಧ್ಯಕ್ಷರಾಗಿರಲೇ ಇಲ್ಲ. ರೀಟ್ವೀಟ್‌ ಮಾಡುವುದು ಮಾನಹಾನಿಯಾಗುತ್ತದೆಯೇ ಎಂಬ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹಾಲಿ ಪ್ರಕರಣದಲ್ಲಿ ರಾಹುಲ್‌ ಅವರು ರೀಟ್ವೀಟ್‌ ಮಾಡಿಲ್ಲ” ಎಂದಿದ್ದರು.

“ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಆಗಿ ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಪರಾಧವಾಗಲಿದೆ” ಎಂದಿದ್ದರು.

ಬಿಜೆಪಿ ಪ್ರತಿನಿಧಿಸಿದ್ದ ವಕೀಲ ಎಂ ವಿನೋದ್‌ ಕುಮಾರ್‌ ಅವರು “ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್‌ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹವಾದ ಜಾಹೀರಾತಿಗೂ ರಾಹುಲ್‌ ಗಾಂಧಿಗೂ ಸಂಬಂಧವಿದೆಯೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಬಿಜೆಪಿಯ ವಿರುದ್ಧ ಆಧಾರರಹಿತ, ಅತಾರ್ಕಿಕ ಮತ್ತು ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡಿರುವುದಲ್ಲದೇ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಜಾಹೀರಾತಿನಲ್ಲಿ “ಭ್ರಷ್ಟಾಚಾರ ದರ ಪಟ್ಟಿ” ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ. ಆರೋಪಿಗಳು ತಮಗೆ ಸರಿ ಎನಿಸಿದ್ದನ್ನು ರಂಜಕವಾಗಿ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಂದು ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್‌ ಪಕ್ಷದ ನಾಯಕರ ವಿರುದ್ಧ ಹೂಡಿದ್ದ ಮಾನಹಾನಿ ದಾವೆಯಲ್ಲಿ ಆಕ್ಷೇಪಿಸಿತ್ತು.

ಕೆಎಸ್‌ಡಿಎಲ್‌ನಲ್ಲಿ ಹುದ್ದೆಗೆ 5-15 ಕೋಟಿ ರೂಪಾಯಿ, ಎಂಜಿನಿಯರ್‌ ಹುದ್ದೆಗೆ ರೂ. 1-5 ಕೋಟಿ, ಉಪ ನೋಂದಣಾಧಿಕಾರಿ ಹುದ್ದೆಗೆ ರೂ. 50 ಲಕ್ಷದಿಂದ- 5 ಕೋಟಿ, ಬೆಸ್ಕಾಂನಲ್ಲಿನ ಹುದ್ದೆಗೆ ರೂ. 1 ಕೋಟಿ, ಪಿಎಸ್‌ ಹುದ್ದೆಗೆ ರೂ. 80 ಲಕ್ಷ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರೂ. 50-70 ಲಕ್ಷ, ಪ್ರಾಧ್ಯಾಪಕರ ಹುದ್ದೆಗೆ ರೂ. 30-50  ಲಕ್ಷ, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೂ. 30 ಲಕ್ಷ, ಅಂತೆಯೇ ಕಿರಿಯ ಎಂಜಿನಿಯರ್‌, ಬಮೂಲ್‌, ಲೋಕೋಪಯೋಗಿ ಕಿರಿಯ ಎಂಜಿನಿಯರ್‌, ಪೇದೆಗಳ ಹುದ್ದೆಗೆ ಲಂಚ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಮಾನಹಾನಿ ಪ್ರಕರಣದ ಸಂಬಂಧ ದಾಖಲಿಸಿರುವ ಅರ್ಜಿಯಲ್ಲಿ ಹೇಳಿತ್ತು.

ಬಿಡಿಎ ಆಯುಕ್ತರು, ಕೆಪಿಎಸ್‌ಸಿ ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ, ಕುಲಪತಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಹುದ್ದೆಗಳಿಗೂ ಲಂಚದ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಬಹಿರಂಗವಾಗಿ ಹೇಳಿರುವುದರಿಂದ ಇದು ಕ್ರಿಮಿನಲ್‌ ಮಾನಹಾನಿಯಾಗಿದೆ ಎಂದು ವಿವರಿಸಿತ್ತು.

ಕೋವಿಡ್‌ ಸಂಬಂಧಿತ ಸಾಮಗ್ರಿಗಳ ಪೂರೈಕೆ ಮತ್ತು ಖರೀದಿಯಲ್ಲಿ ಶೇ. 70ರಷ್ಟು ಕಮಿಷನ್‌ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ, ರಸ್ತೆ ನಿರ್ಮಾಣದಲ್ಲಿ 70:30ರಷ್ಟು ಲಂಚ ಪಡೆಯಲಾಗಿದೆ ಎಂದು ದೂರಿದ್ದಾರೆ. ಅಲ್ಲದೇ, ಶೇ 40ರ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಬಿಜೆಪಿಯ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ಆಕ್ಷೇಪಿಸಿತ್ತು.

Also Read
[ಶೇ. 40 ಕಮಿಷನ್ ಸರ್ಕಾರ] ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯಿಂದ ಮಾನಹಾನಿ ದಾವೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಜನಪ್ರಿಯ ʼಡಬಲ್‌ ಎಂಜಿನ್‌ ಸರ್ಕಾರʼಕ್ಕೆ ಪರ್ಯಾಯವಾಗಿ ʼಟ್ರಬಲ್‌ ಎಂಜಿನ್‌ ಸರ್ಕಾರʼ ಎಂಬ ಪದ ಬಳಕೆ ಮಾಡಲಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕುಸಿಯುವಂತೆ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಫೋಟೊಗಳನ್ನು ಬಳಕೆ ಮಾಡಲಾಗಿದ್ದು, ಈ ಇಬ್ಬರೂ ನಕಲಿ ಮತ್ತು ಸಳ್ಳು ಹೇಳಿಕೆಗಳಿಗೆ ನೇರವಾಗಿ ಕಾರಣವಾಗಿದ್ದಾರೆ. ಈ ಜಾಹೀರಾತು ಪ್ರಕಟವಾದ ತಕ್ಷಣ ರಾಹುಲ್‌ ಗಾಂಧಿ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದರು. ನಕಲಿ ಮತ್ತು ಪೂರ್ವಾಗ್ರಹ ಪೀಡಿತ ಜಾಹೀರಾತು ನೀಡಲು ರಾಹುಲ್‌ ಗಾಂಧಿ ಸೂಚನೆ ನೀಡಿದ್ದರು ಎಂದು ವಾದಿಸಲಾಗಿತ್ತು.

Attachment
PDF
Rahul Gandhi vs BJP
Preview
Kannada Bar & Bench
kannada.barandbench.com