ಶೃಂಗೇರಿ ಅಂಚೆ ಮತಗಳ ಮರು ಎಣಿಕೆ ಅಕ್ರಮ ಆರೋಪ: ಬಿಜೆಪಿಯ ಜೀವರಾಜ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಹೈಕೋರ್ಟ್

ಮಾಜಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ಟಿ ಆರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿಂದ ಆದೇಶ.
T D Rajegowda (left) and D N Jeevaraj (right) with Karnataka HC
T D Rajegowda (left) and D N Jeevaraj (right) with Karnataka HC
Published on: 

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ ಅಕ್ರಮ, ಕ್ರಿಮಿನಲ್ ಅಪರಾಧ ಹಾಗೂ ವಂಚನೆ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಹಾಗೂ ಪರಾಜಿತ ಅಭ್ಯರ್ಥಿ ಡಿ ಎನ್ ಜೀವರಾಜ್ ಮತ್ತು ಚುನಾವಣಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಶನಿವಾರ ರದ್ದುಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಜೀವರಾಜ್, ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ಟಿ ಆರ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ವಜಾಗೊಳಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡ ಅವರು ಬಿಜೆಪಿಯ ಡಿ ಎನ್ ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳ ಪರಿಶೀಲನೆ ನಡೆಸಿ ಅಂಚೆ ಮತಗಳ ಮರು ಎಣಿಕೆ ಮಾಡುವಂತೆ 2026ರ ಏಪ್ರಿಲ್ 6ರಂದು ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಮೇ ತಿಂಗಳಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆದಿತ್ತು.

ಮರು ಎಣಿಕೆ ವೇಳೆ ಈ ಹಿಂದೆ ಟಿ ಡಿ ರಾಜೇಗೌಡ ಅವರಿಗೆ ಪರಿಗಣಿಸಲಾಗಿದ್ದ ಅಂಚೆ ಮತಗಳ ಪೈಕಿ 255 ಮತಗಳು ಕಡಿಮೆಯಾಗಿದ್ದವು. ಇದರ ಪರಿಣಾಮವಾಗಿ ಡಿ ಎನ್ ಜೀವರಾಜ್ ಅವರು 52 ಮತಗಳ ಅಂತರದಿಂದ ವಿಜೇತರೆಂದು ಘೋಷಿಸಲ್ಪಟ್ಟಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ, ಅಂಚೆ ಮತಪತ್ರಗಳನ್ನು ತಿದ್ದಲಾಗಿದೆ ಹಾಗೂ ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ವಂಚನೆ ನಡೆದಿದೆ ಎಂದು ಆರೋಪಿಸಿ ರಾಜೇಗೌಡ ಅವರ ಚುನಾವಣಾ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಜೀವರಾಜ್ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

Also Read
[ಮತ ತಿರುಚಿದ ಆರೋಪ] ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಪ್ರಕರಣಕ್ಕೂ ತಡೆ; ಆಕ್ಷೇಪಣೆ ಸಲ್ಲಿಸಲು ನಿರ್ದೇಶನ

ಇದೇ ವೇಳೆ, ಜೀವರಾಜ್ ಅವರ ಆಯ್ಕೆಯನ್ನು ಪ್ರಶ್ನಿಸಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜೀವರಾಜ್ ಅವರ ಆಯ್ಕೆಗೆ ತಡೆ ನೀಡುವುದರ ಜೊತೆಗೆ ರಾಜೇಗೌಡ ಅವರು ಶಾಸಕರಾಗಿ ಮುಂದುವರಿಯಲು ಅನುಮತಿ ನೀಡಿತ್ತು.

ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, “ಪ್ರಜಾಪ್ರಭುತ್ವವನ್ನು ಈ ರೀತಿಯಲ್ಲಿ ಹೈಜಾಕ್ ಮಾಡಲು ಅವಕಾಶ ನೀಡಲಾಗದು” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು.

ಜೀವರಾಜ್ ಪರ ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ವಾದ ಮಂಡಿಸಿದ್ದರು. ಅವರಿಗೆ ವಕೀಲೆ ಪಿ ಎಲ್ ವಂದನಾ ಸಹಕರಿಸಿದ್ದರು. ಅಧಿಕಾರಿಗಳ ಪರ ವಕೀಲರಾದ ವಿ ಸಂಪ್ರೀತ್ ಮತ್ತು ಎಚ್ ಹೇಮಂತ್ ರಾಜ್ ವಾದ ಮಂಡಿಸಿದ್ದರು.