ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ತಮಿಳುನಾಡಿನ ಸಂಬಂಧ ಕಲ್ಪಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಪ್ರಕರಣ ಸಂಬಂಧ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ಆ ಸಂಬಂಧ 5ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದಿರುವ ಪ್ರಕರಣ ರದ್ದು ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಇದೇ ಘಟನೆಯ ಬಗ್ಗೆ ಮದುರೈ ನಗರ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ 2024ರ ಸೆಪ್ಟೆಂಬರ್ 5ರಂದು ರದ್ದುಗೊಳಿಸಿದೆ. ಅದೇ ಆಧಾರದ ಮೇಲೆ ಈ ಪ್ರಕರಣವನ್ನೂ ಸಹ ರದ್ದುಗೊಳಿಸಲಾಗುವುದು ಎಂದ ಪೀಠವು ಶೋಭಾ ವಿರುದ್ಧ ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್ 123(3),123(3)ಎ ಮತ್ತು 125ರಡಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿ ಆದೇಶಿಸಿತು.
ಶೋಭಾ ಕರಂದ್ಲಾಜೆ ಪರ ಹಾಜರಾಗಿ ವಾದ ಮಂಡಿಸಿದ ವಕೀಲ ವೆಂಕಟೇಶ್ ದಳವಾಯಿ ಅವರು ಮೇಲ್ನೋಟಕ್ಕೆ ಅರ್ಜಿದಾರರ ಮೇಲಿನ ಆರೋಪಗಳು ಚುನಾವಣೆಗೆ ಸಂಬಂಧಿಸಿದವಲ್ಲ. ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123(3),123(3)ಎ ಓರ್ವ ಅಭ್ಯರ್ಥಿಯ ವಿರುದ್ಧ ಅಥವಾ ಪರ ಮತ ಹಾಕಲು ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಪ್ರಕರಣವನ್ನು ಪ್ರಜಾಪ್ರತಿನಿಧಿ ಕಾಯಿದೆ ಬದಲು ಭಾರತೀಯ ದಂಡ ಸಂಹಿತೆ ಸೆಕ್ಷನ್ 153ರಡಿ ದಾಖಲಿಸಬೇಕಾಗಿತ್ತು ಎಂದರು.
ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಗೂ ಮುನ್ನ ನಗರ್ತಪೇಟೆಯಲ್ಲಿ ನಡೆಸಿದ್ದ ಪ್ರತಿಭಟನಾ ವೇಳೆ ತಮಿಳುನಾಡಿನಿಂದ ನಗರಕ್ಕೆ ಬಂದು ಬಾಂಬ್ ಬ್ಲಾಸ್ಟ್ ಮಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಅದನ್ನು ತೀವ್ರವಾಗಿ ಖಂಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದ್ದರು.
ಈ ಮಧ್ಯೆ, ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಅದನ್ನು ರದ್ದುಪಡಿಸುವಂತೆ ಶೋಭಾ ಕರಂದ್ಲಾಜೆ ಹೈಕೋರ್ಟ್ ಮೊರೆ ಹೋಗಿದ್ದರು.