

ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ದುರುದ್ದೇಶದಿಂದ ಪತಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಪತ್ನಿಯ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 22ರ ಅಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಪತಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸ್ವಾತಂತ್ರ್ಯ ನೀಡಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಪತಿ, ಅವರ ತಂದೆ, ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಪ್ರಕರಣದಲ್ಲಿ ಪತ್ನಿ ತನ್ನ ಮೂರೂವರೆ ವರ್ಷದ ಮಗಳ ಮೇಲೆ ಪತಿ ಮತ್ತು ಅವರ ಕುಟುಂಬದ ಸದಸ್ಯರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಆರೋಪಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಇದನ್ನು ‘ಹೆತ್ತ ತಾಯಿಯೊಬ್ಬರು ಹೆಣೆದ ಕಟ್ಟುಕಥೆ’ ಎಂದು ಬಣ್ಣಿಸಿದೆ.
“ಕಸ್ಟಡಿ ಮತ್ತು ಭೇಟಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ದಾವೆದಾರರು ಕ್ರಿಮಿನಲ್ ಕಾನೂನನ್ನು ಪರೋಕ್ಷ ಸಾಧನವನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗದು. ಹೀಗಾಗಿ, ಈ ಪ್ರಕರಣದಲ್ಲಿ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ನ್ಯಾಯಿಕ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗುತ್ತದೆ” ಎಂದು ಪೀಠ ಹೇಳಿದೆ.
ಮಗುವಿನ ಹೇಳಿಕೆಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಯಾವುದೇ ಸ್ವತಂತ್ರ ವಿವರಣೆಯಿಲ್ಲ. ಮಗುವನ್ನು ಪರೀಕ್ಷಿಸಿದ ವೈದ್ಯರೂ ಅಂತಹ ಹೇಳಿಕೆಯನ್ನು ದಾಖಲಿಸಿಲ್ಲ. ಆರೋಪವು ಕೇವಲ ತಾಯಿಯಿಂದ ಹೊರಹೊಮ್ಮಿದೆ ಎಂದು ನ್ಯಾಯಾಲಯ ಗಮನಿಸಿದೆ.
“ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ಸಲುವಾಗಿ ಒಬ್ಬ ತಾಯಿ, ಕ್ಲಿನಿಕಲ್ ಸಂಶೋಧನೆಗಳನ್ನು ಅರ್ಥೈಸುತ್ತಾ ಕುಟುಂಬದ ಸದಸ್ಯರೆಲ್ಲರ ವಿರುದ್ಧ ಇಂತಹ ಗುರುತರ ಆಪಾದನೆ ಮಾಡಿರುವುದು ಅತ್ಯಂತ ನೋವಿನ ಸಂಗತಿ” ಎಂದು ಪೀಠ ಹೇಳಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಗುವಿನ ತಪಾಸಣೆ ನಡೆಸಿದ್ದ ಡಾ. ಪಿ ಬಿಂದು ಮತ್ತು ಡಾ. ಅನುರಾಧಾ ಸದಾಶಿವಮೂರ್ತಿ ಅವರ ಪ್ರಮಾಣಪತ್ರಗಳನ್ನು ಪರಿಗಣಿಸಿರುವ ಪೀಠವು ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಲೈಂಗಿಕ ದೌರ್ಜನ್ಯ ಮಗುವಿನ ಮೇಲೆ ನಡೆದಿಲ್ಲ ಎಂಬುದನ್ನು ದಾಖಲಿಸಿದೆ.
ದಂಪತಿಯ ಕೌಟುಂಬಿಕ ವ್ಯಾಜ್ಯದಲ್ಲಿ ಪುಟ್ಟ ಮಗುವನ್ನು ಕ್ರಿಮಿನಲ್ ಮೊಕದ್ದಮೆಯ ಸುಳಿಗೆ ಸಿಲುಕಿಸಿರುವುದಕ್ಕೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
“ದಂಪತಿ ತಮ್ಮ ಕೌಟುಂಬಿಕ ವ್ಯಾಜ್ಯಕ್ಕೆ ಪುಟ್ಟ ಮಗುವನ್ನು ಕ್ರಿಮಿನಲ್ ಮೊಕದ್ದಮೆಯ ಸುಳಿಗೆ ಒಡ್ಡಿದ್ದಾರೆ. ಪೋಷಕರ ನಡುವಿನ ಭಿನ್ನಾಭಿಪ್ರಾಯ ವೈವಾಹಿಕ ಸಂಬಂಧಗಳ ಗಡಿ ದಾಟಿ ಹೋಗಿದೆ. ವಾತ್ಸಲ್ಯದ ಕಣ್ಮಣಿಯಾಗಬೇಕಿದ್ದ ಮಗುವೀಗ ಅವರ ವಿರೋಧಿ ಹೋರಾಟದ ಕೇಂದ್ರಬಿಂದುವಾಗಿದೆ. ಮಗುವಿನ ಕೋಮಲತೆ, ಭಾವನಾತ್ಮಕ ಭದ್ರತೆ ಮತ್ತು ಯೋಗಕ್ಷೇಮದ ಮೇಲೆ ಕವಿದಿರುವ ಕರಿನೆರಳು ಅದರ ಮನದಲ್ಲಿ ಭೀತಿಯ ಬೀಜಗಳನ್ನು ಬಿತ್ತಿದೆ” ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.
ವೈವಾಹಿಕ ವಿವಾದದಲ್ಲಿ ಒಬ್ಬ ಸದಸ್ಯ ಸಿಲುಕಿಕೊಂಡಿದ್ದಾರೆ ಎಂಬ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಯನ್ನು ಇಡೀ ಕುಟುಂಬದ ಸಾಮೂಹಿಕ ಶಿಕ್ಷೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕುಟುಂಬದ ಸದಸ್ಯರ ವಿರುದ್ಧದ ಆರೋಪಗಳಿಗೆ ಮೂಲಭೂತ ಅಂಶಗಳೇ ಇಲ್ಲದಿರುವಾಗ, ವಿಚಾರಣೆಯನ್ನು ಮುಂದುವರಿಸಲು ಅನುಮತಿಸುವುದು ಅಪರಾಧವನ್ನೇ ಬಹಿರಂಗಪಡಿಸದ ದೂರುಗಳಿಗೆ ಕ್ರಿಮಿನಲ್ ಕಾನೂನಿನ ಬಲವಂತದ ಅಧಿಕಾರ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
“ಸುಖಾಸುಮ್ಮನೆ ಎಸಗುವ ಆರೋಪಗಳು ಮತ್ತು ಬೆಂಬಲವಿಲ್ಲದ ತೀರ್ಮಾನಗಳ ಗುಚ್ಛದಲ್ಲಿ ಅನಿರ್ದಿಷ್ಟ ಅನುಮಾನಗಳ ಸಂಗ್ರಹವಾಗಿರಲು ಸಾಧ್ಯವಿಲ್ಲ. ಯಾವುದೇ ದೂರು ಘಟನೆಯೊಂದರ ವಿಶ್ವಕೋಶವಾಗಿರಬೇಕೆಂದು ನ್ಯಾಯಾಲಯ ನಿರೀಕ್ಷಿಸುವುದಿಲ್ಲ. ಆದರೆ, ಆರೋಪವು ಅಪರಾಧದ ಅಗತ್ಯ ಅಂಶಗಳನ್ನು ಬಹಿರಂಗಪಡಿಸುವಂತಿರಬೇಕು. ನಿರ್ದಿಷ್ಟ ವಾಸ್ತವಿಕ ವಿವರಗಳಿಗೆ ಬೆಂಬಲ ನೀಡುವಂತಿರಬೇಕು ಮತ್ತು ಸಾಂದರ್ಭಿಕ ಪುಷ್ಟಿ ನೀಡುವಂತಿದ್ದರೆ ಮಾತ್ರ ಪರಿಗಣನೆಗೆ ಅರ್ಹ” ಎಂದು ಪೀಠ ಹೇಳಿದೆ.
“ಕೋರ್ಟ್ಗಳಲ್ಲಿ ಇಂದು ವೈವಾಹಿಕ ವ್ಯಾಜ್ಯಗಳು ಗಿಜಿಗುಟ್ಟುತ್ತಿವೆ. ಇವುಗಳಲ್ಲಿ ಮಗುವಿನ ಕಸ್ಟಡಿ ಮತ್ತು ಭೇಟಿ ವಿಚಾರಗಳು ಗಂಭೀರ ದುಷ್ಕೃತ್ಯದ ಆರೋಪಗಳೊಂದಿಗೆ ತಳುಕು ಹಾಕಿಕೊಂಡಿರುವುದು ಕಳವಳಕಾರಿ ಅಂಶ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಪತ್ನಿಯು ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಸುಳ್ಳು ದೂರು ದಾಖಲಿಸಿ ಅವರನ್ನು ಅವಮಾನಿಸುವ ದುರುದ್ದೇಶದಿಂದ ಪೋಕ್ಸೊ ಕಾಯಿದೆಯಡಿ ಆರೋಪ ಹೊರಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೀಗಾಗಿ, ಪೋಕ್ಸೊ ಕಾಯಿದೆಯ ಸೆಕ್ಷನ್ 22ರ ಅನುಸಾರ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಅವಕಾಶವನ್ನು ಪತಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಮುಕ್ತವಾಗಿ ಇರಿಸಿದೆ.
35 ವರ್ಷದ ಉದ್ಯಮಿ ಹಾಗೂ 33 ವರ್ಷದ ಗೃಹಿಣಿ 2018ರ ಜುಲೈ 1ರಂದು ವಿವಾಹವಾಗಿದ್ದರು. ದಂಪತಿಗೆ 2022ರ ನವೆಂಬರ್ 14ರಂದು ಹೆಣ್ಣು ಮಗು ಜನಿಸಿತ್ತು.
ಕೌಟುಂಬಿಕ ಮನಸ್ತಾಪ ತೀವ್ರಗೊಂಡ ಹಿನ್ನೆಲೆಯಲ್ಲಿ ದಂಪತಿ 2024ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಮಧ್ಯೆ, ಪತ್ನಿಯು ಮಗು ತನ್ನ ತಂದೆಯನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಸಮಯ ಕಳೆಯಲು ನಿರಂತರವಾಗಿ ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ.
ಇದರಿಂದ ತಂದೆ ಮಗುವಿನ ಪಾಲನೆ ಮತ್ತು ಭೇಟಿಯ ಹಕ್ಕುಗಳನ್ನು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿ, ನಿಗದಿತ ದಿನಗಳಂದು ನಿರ್ದಿಷ್ಟ ಸಮಯದಲ್ಲಿ ಮಗಳೊಂದಿಗೆ ಇರಲು ತಂದೆಗೆ ಅನುಮತಿ ನೀಡಿತ್ತು.
ಒಂದು ದಿನ ಮಗು ಮಲ ವಿಸರ್ಜನೆ ಮಾಡಲು ತೊಂದರೆಯಾಗುತ್ತಿದೆ ಎಂದು ತಾಯಿಗೆ ಅಸ್ಪಷ್ಟವಾಗಿ ತಿಳಿಸಿತ್ತು. ತಾಯಿ ಮಗುವನ್ನು ಪರೀಕ್ಷಿಸಿದಾಗ ಗುಪ್ತಾಂಗದ ಸುತ್ತ ತುರಿಕೆಯಿಂದ ಚರ್ಮ ಕೆಂಪಾಗಿ ದದ್ದುಗಳು ಕಾಣಿಸಿಕೊಂಡಿದ್ದವು. ಕೂಡಲೇ ಮಗುವನ್ನು ಮಲ್ಲೇಶ್ವರದ ಕ್ಲೌಡ್ ನೈನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ನಂತರ, ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಪತ್ನಿ ತನ್ನ ಪತಿ, ಅತ್ತೆ, ಮಾವ ಮತ್ತು ಗಂಡನ ಸಹೋದರಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೊ ಕಾಯಿದೆಯ ಸೆಕ್ಷನ್ 8 ಮತ್ತು 10ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಮತ್ತು ಅವರ ಕುಟುಂಬದ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಆರ್ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.