ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ವಿಶೇಷವಾಗಿ ನಡೆಸಿಕೊಂಡದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜಕೀಯ ನಾಯಕರಿಗೇ ಒಂದು ನಿಯಮ ಪ್ರಜೆಗಳಿಗೇ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ ಎಂದಿದೆ.
ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದರೂ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಮೇ 18ರಂದು ಮೈಸೂರು ಜಿಲ್ಲೆಯ ನಂಜನಗೂಡು ದೇಗುಲಕ್ಕೆ ಭೇಟಿ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ವಕೀಲ ಜಿ ಆರ್ ಮೋಹನ್ ನ್ಯಾಯಾಲಯಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದ್ದರು. ಇತರೆ ನಾಗರಿಕರು ಲಾಕ್‌ಡೌನ್ ನಿರ್ಬಂಧಗಳನ್ನು ಪಾಲಿಸುತ್ತಿದ್ದಾಗ ವಿಜಯೇಂದ್ರ ಅವರ ಪ್ರಯಾಣ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದ್ದು ಇತರೆ ನಾಗರಿಕರು ಲಾಕ್‌ಡೌನ್ ನಿರ್ಬಂಧಗಳನ್ನು ಪಾಲಿಸಬೇಕಿತ್ತು ಎಂದು ವಿವರಿಸಿದ್ದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, “ನಿಯಮ (ಕೋವಿಡ್ ಲಾಕ್‌ಡೌನ್ ವೇಳೆ ದೇಗಲು ಪ್ರವೇಶಿಸದ) ಎಲ್ಲಾ ನಾಗರಿಕರಿಗೂ ಅನ್ವಯವಾಗಬೇಕು. ಅದನ್ನು ನೀವು ಯಾರೋ ಒಬ್ಬರಿಗೆ ಅನ್ವಯಿಸಲಾಗದು. ರಾಜಕೀಯ ನಾಯಕರಿಗೇ ಒಂದು ಪ್ರಜೆಗಳಿಗೇ ಇನ್ನೊಂದು ನಿಯಮ ಇರುವುದಿಲ್ಲ” ಎಂದಿತು.
ಆಗ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ವಿಜಯೇಂದ್ರ ಅಧಿಕೃತ ಕೋವಿಡ್ ಕರ್ತವ್ಯದ ಮೇರೆಗೆ ದೇಗುಲಕ್ಕೆ ಭೇಟಿ ನೀಡಿದ್ದರು. ” ಎಂದು ಮಾಹಿತಿ ನೀಡಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ “ಕೋವಿಡ್ ಕೆಲಸಕ್ಕಾಗಿ ನೀವು ದೇಗುಲಕ್ಕೆ ಹೋಗಬೇಕಿರಲಿಲ್ಲ. ಜನರಿಗೆ ಈಗ ದೇಗುಲ ಪ್ರವೇಶಿಸಲು ಅನುಮತಿ ಇದೆಯೇ?” ಎಂದು ಮರುಪ್ರಶ್ನಿಸಿತು.
ಎಜಿ ನಾವದಗಿ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿದರು. ಈ ಹಂತದಲ್ಲಿ ನ್ಯಾಯಾಲಯ “ಇದು ತಪ್ಪು ಸಂದೇಶ ನೀಡುತ್ತದೆ ಎಂದು ನಾವು ಹೇಳುತ್ತಿದ್ದೇವೆ” ಎಂದಿತು. ಅರ್ಜಿದಾರರಾದ ವಕೀಲ ಜಿ ಆರ್ ಮೋಹನ್ 2018ರಲ್ಲಿ ತೆಗೆದ ಛಾಯಾಚಿತ್ರವನ್ನು ಲಗತ್ತಿಸಿದ್ದಾರೆ ಎಂದು ಇದೇ ವೇಳೆ ನಾವದಗಿ ತಿಳಿಸಿದರು.
ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ (ಡಿಸಿ) ಅವರ ವರದಿಯನ್ನು ಅಧಿಕೃತವಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ಪ್ರಕರಣ ಜೂನ್ 18ಕ್ಕೆ ವಿಚಾರಣೆಗೆ ಬರಲಿದೆ.
ಮುಖ್ಯಮಂತ್ರಿಗಳ ಮೆಟ್ರೋ ಪ್ರಾಯೋಗಿಕ ಚಾಲನೆ ಕಾರ್ಯಕ್ರಮ ಕುರಿತು…
ನ್ಯಾಯಾಲಯದ ನಿರ್ದೇಶನದಂತೆ ರೂಪಗೊಂಡಿರುವ ಕುಂದುಕೊರತೆ ನಿವಾರಣಾ ವ್ಯವಸ್ಥೆಗೆ ಸಾಮಾಜಿಕ ಅಂತರ ಉಲ್ಲಂಘಿಸಿದ ವ್ಯಕ್ತಿಗಳ ಕುರಿತೂ ಹೆಚ್ಚು ದೂರು ಬರುತ್ತಿವೆ ಎಂದು ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಮೆಟ್ರೊಗೆ ಪ್ರಾಯೋಗಿಕ ಚಾಲನೆ ನೀಡುವ ವೇಳೆ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಕೂಡ ವಕೀಲ ಮೋಹನ್ ಅವರು ಸಲ್ಲಿಸಿರುವ ದೂರಿನ ಅಂಶಗಳಲ್ಲಿ ಒಂದು. ಈ ಬಗ್ಗೆ ಪೀಠವು ಪ್ರತಿಕ್ರಿಯಿಸಿ, “ಕೋವಿಡ್ ವೇಳೆ ಅಧಿಕೃತ ಕಾರ್ಯಗಳನ್ನು ಮುಂದುವರೆಸಬೇಕಾಗುತ್ತದೆ” ಎಂದಿತು. ಅಲ್ಲದೆ ಈ ಕುರಿತು ಯಾವುದೇ ಆದೇಶ ನೀಡದೇ ಇರಲು ನಿರ್ಧರಿಸಿತು.