ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಸೆರೆವಾಸ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಲು ನಿರಾಕರಿಸಿದ ಹೈಕೋರ್ಟ್
ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಿರುವ ಆಜೀವ ಸೆರೆವಾಸ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
“ದಾಖಲೆಗಳನ್ನು ಪರಿಗಣಿಸಿ, ಅಪರಾಧದ ಗಂಭೀರತೆ, ಪ್ರಜ್ವಲ್ ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಉಂಟು ಮಾಡುವ ಪರಿಣಾಮವನ್ನು ಪರಿಗಣಿಸಿ, ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆ ಬದಿಗೆ ಸರಿಸಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ” ಎಂದು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಟಿ ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠವು ಮುಕ್ತ ನ್ಯಾಯಾಲಯದಲ್ಲಿ ಉಕ್ತ ಲೇಖನ ನೀಡುವಾಗ ಅಭಿಪ್ರಾಯಪಟ್ಟಿದೆ.
“ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ತೀರ್ಪಿನಲ್ಲಿನ ಅಲ್ಲೊಂದು ಇಲ್ಲೊಂದು ಇರುವ ಲೋಪಗಳನ್ನು ನೋಡಲಾಗದು. ಪ್ರಜ್ವಲ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಪ್ರಜ್ವಲ್ ವಿರುದ್ಧ ರಾಜಕೀಯ ಪ್ರತೀಕಾರ, ಸಂತ್ರಸ್ತೆ ದೂರು ದಾಖಲಿಸಲು ವಿಳಂಬ ಮಾಡಿರುವುದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ವ್ಯತ್ಯಾಸ, ಅಶ್ಲೀಲ ವಿಡಿಯೊಗಳ ಜಫ್ತಿಯಾಗಿಲ್ಲ, ಗನ್ನಿಗಢ ತೋಟವು ಪ್ರಜ್ವಲ್‌ಗೆ ಸೇರಿಲ್ಲವಾದ್ದರಿಂದ ಅವರು ಅಲ್ಲಿಗೆ ಹೋಗಿಯೇ ಇಲ್ಲ. ಬಸವನಗುಡಿಯ ಮನೆಗೂ ಪ್ರಜ್ವಲ್ ಹೋಗಿಲ್ಲ. ಸಂತ್ರಸ್ತೆಯು ಗನ್ನಿಗಢ ತೋಟದಲ್ಲಿ ಕೆಲಸವನ್ನೇ ಮಾಡಿಲ್ಲ, ಆ ತೋಟವು ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಎಂಬವರಿಗೆ ಸೇರಿದೆ. ವಂಶವಾಹಿ ಪರೀಕ್ಷೆಯನ್ನು ಕಾನೂನಿಗೆ ಅನ್ವಯವಾಗಿ ನಡೆಸಿಲ್ಲ ಇತ್ಯಾದಿ ವಿಚಾರಗಳ ಕುರಿತಯ ವಾದಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
“ಪ್ರಜ್ವಲ್‌ಗೆ ವಿಧಿಸಿರುವ ಶಿಕ್ಷೆಯನ್ನು ಬದಿಗೆ ಸರಿಸಲು ಸಾಕ್ಷಿಗಳು ಅತ್ಯಂತ ದುರ್ಬಲವಾಗಿವೆ ಎಂದು ಲೂಥ್ರಾ ಸಾಬೀತುಪಡಿಸಿಲ್ಲ. ಇದೇ ಕಾರಣಕ್ಕಾಗಿ ಲೂಥ್ರಾ ಅವರ ವಾದವನ್ನು ಒಪ್ಪಲಾಗುತ್ತಿಲ್ಲ. ಇಲ್ಲಿ ವ್ಯಕ್ತಪಡಿಸಿರುವ ವಿಚಾರಗಳು ಸಿಆರ್‌ಪಿಸಿ ಸೆಕ್ಷನ್ 389 ಅಡಿ ಸಲ್ಲಿಸಿರುವ ಅರ್ಜಿಯನ್ನು ನಿರ್ಧರಿಸಲು ಮಾತ್ರ ಬಳಕೆ ಮಾಡಲಾಗಿದೆ. ಇದು ಮೇಲ್ಮನವಿಗೆ ಸಂಬಂಧಿಸಿದ ಅಂತಿಮ ಅಭಿಪ್ರಾಯ ಎಂದು ಭಾವಿಸಬೇಕಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಈ ಪ್ರಕರಣದಲ್ಲಿ ಪ್ರಜ್ವಲ್ ಶಿಕ್ಷೆ ಅಮಾನತುಪಡಿಸಿದರೆ ಉಳಿದ ಪ್ರಕರಣಗಳಲ್ಲಿ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದ್ದು, ವಾದ ಮಂಡಿಸಲು ಸಿದ್ಧವಾಗಿದ್ದೇವೆ. ಅಶ್ವನಿ ಕುಮಾರ್ ಉಪಾಧ್ಯಾಯ ಪ್ರಕರಣದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿರುವ ಆಜೀವ ಅಥವಾ ಜೀವಾವಧಿ ಶಿಕ್ಷೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದೆ. ಮೇಲ್ಮನವಿದಾರರು ಮೆರಿಟ್ ಮೇಲೆ ವಾದಿಸಬಹುದು” ಎಂದಿರುವುದಕ್ಕೆ ನ್ಯಾಯಾಲಯ ಸಮ್ಮತಿಸಿದೆ.
ಪ್ರಜ್ವಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು “ಹಲವು ಹಳೆಯ ಮೇಲ್ಮನವಿಗಳು ಬಾಕಿ ಇದ್ದು, ಈ ಪ್ರಕರಣವನ್ನು ಆಲಿಸಲು ಸಮಯಬೇಕಾಗಬಹುದು. ಅಂತಿಮವಾಗಿ ಪ್ರಜ್ವಲ್ ಖುಲಾಸೆಗೊಳಿಸಿದರೆ ಅವರ ಸ್ವಾತಂತ್ರ್ಯವನ್ನು ಮರಳಿಸಲಾಗದು. ಹೀಗಾಗಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಬೇಕು” ಎಂಬ ವಾದವನ್ನು ತಿರಸ್ಕರಿಸಿದ್ದು, ಅಂತಿಮ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಆಗಸ್ಟ್ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಆಜೀವ ಸೆರೆವಾಸ ಶಿಕ್ಷೆಯ ಜೊತೆಗೆ ₹11.60 ಲಕ್ಷ ದಂಡವನ್ನು ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ನೀಡಲು ಆದೇಶಿಸಿದೆ.
ಐಪಿಸಿ ಸೆಕ್ಷನ್‌ಗಳಾದ 376(2)(ಎನ್) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಮತ್ತು ₹5 ಲಕ್ಷ ದಂಡ; 376(2)(ಕೆ) (ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹5 ಲಕ್ಷ ದಂಡ; 354(ಬಿ) (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಅಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ ₹50,000 ದಂಡ; 354-ಎ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 354(ಸಿ) (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 201 (ಅಪರಾಧ ಕೃತ್ಯದ ಸಾಕ್ಷಿ ನಾಶ) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ (ಖಾಸಗಿತನದ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; 506 (ಕ್ರಿಮಿನಲ್ ಬೆದರಿಕೆ) 2 ವರ್ಷ ಶಿಕ್ಷೆ, ₹10,000 ದಂಡ ವಿಧಿಸಿತ್ತು. ಈ ತೀರ್ಪನ್ನು ಬದಿಗೆ ಸರಿಸುವಂತೆ ಪ್ರಜ್ವಲ್ ಕೋರಿದ್ದರು.

