ಮೋದಿ ಸರ್ಕಾರ, ಯಡಿಯೂರಪ್ಪ ಸರ್ಕಾರ ಎಂದು ಬಳಸದಂತೆ ಪಿಐಬಿ, ಮಾಧ್ಯಮಗಳಿಗೆ ನಿರ್ದೇಶಿಸುವಂತೆ ಕೋರಿದ್ದ ಮನವಿ ವಜಾ

ಯಾವುದೇ ಸರ್ಕಾರವನ್ನು ವಿವರಿಸಲು ಮಾಧ್ಯಮಗಳು ಮಾಡಿಕೊಳ್ಳುವ ಆಯ್ಕೆಗೆ ಸಂಬಂಧಿಸಿದಂತೆ ಅವುಗಳ ವಿರುದ್ಧ ನಾವು ಯಾವುದೇ ತೆರನಾದ ರಿಟ್‌ ಆದೇಶ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
ಮೋದಿ ಸರ್ಕಾರ, ಯಡಿಯೂರಪ್ಪ ಸರ್ಕಾರ ಎಂದು ಬಳಸದಂತೆ ಪಿಐಬಿ, ಮಾಧ್ಯಮಗಳಿಗೆ ನಿರ್ದೇಶಿಸುವಂತೆ ಕೋರಿದ್ದ ಮನವಿ ವಜಾ
Narendra Modi, BS Yediyurappa and Karnataka High Court

ಭಾರತ ಸರ್ಕಾರವನ್ನು ಮೋದಿ ಸರ್ಕಾರ, ಕರ್ನಾಟಕ ಸರ್ಕಾರವನ್ನು ಯಡಿಯೂರಪ್ಪ ಸರ್ಕಾರ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಪ್ರೆಸ್‌ ಇನ್ಫರ್ಮೇಷನ್‌ ಬ್ಯುರೊ (ಪಿಐಬಿ) ಮತ್ತು ಮಾಧ್ಯಮಗಳ ಕುರಿತು ಆತಂಕ ವ್ಯಕ್ತಪಡಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ.

ಸರ್ಕಾರವನ್ನು ವಿವರಿಸಲು ಮಾಧ್ಯಮಗಳು ಮಾಡಿಕೊಳ್ಳುವ ಆಯ್ಕೆಗೆ ಸಂಬಂಧಿಸಿದಂತೆ ಅವುಗಳ ವಿರುದ್ಧ ನಾವು ಯಾವುದೇ ತೆರನಾದ ರಿಟ್‌ ಆದೇಶ ನೀಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ಮಾಧ್ಯಮಗಳು ಸರ್ಕಾರವನ್ನು ವಿವರಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ರಿಟ್‌ ಹೊರಡಿಸಲಾಗದು. ಅದಾಗ್ಯೂ, ಭಾರತ ಸರ್ಕಾರವನ್ನು ಮೋದಿ ಸರ್ಕಾರ ಎಂದು ಉಲ್ಲೇಖಿಸುವ ಪಿಐಬಿ ಕುರಿತು ಮನವಿ ಸಲ್ಲಿಸಲು ಅರ್ಜಿದಾರರು ಮುಕ್ತವಾಗಿದ್ದಾರೆ. ಆಗೊಮ್ಮೆ ಅರ್ಜಿದಾರರು ಮನವಿ ಮಾಡಿದಲ್ಲಿ ಕಾನೂನಿನ್ವಯ ಸಂಬಂಧಪಟ್ಟ ಪ್ರಾಧಿಕಾರಗಳು ನಿರ್ಧರಿಸಲಿವೆ” ಎಂದು ನ್ಯಾಯಾಲಯ ಹೇಳಿದೆ.

ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರವನ್ನು ಅದರ ಮುಖ್ಯಸ್ಥರ ಹೆಸರಿನಿಂದ ಸಂಬೋಧಿಸಲಾಗದು ಎಂದು ಅರ್ಜಿದಾರರು ವಾದಿಸಿದ್ದಾರೆ. “ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎನ್ನಬಹುದೇ, ಭಾರತದ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆಯೇ” ಎಂದು ಅರ್ಜಿದಾರರು ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಪ್ರಧಾನಿ/ಮುಖ್ಯಮಂತ್ರಿ ಸ್ಥಾನ ಅಲಂಕರಿಸುವವರು ಜನರ ಪ್ರತಿನಿಧಿಗಳಾಗಿದ್ದು, ಅವರು ಸರ್ಕಾರವನ್ನು ಖರೀದಿಸಿರುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ. “ಸಂವಿಧಾನದ ಪೀಠಿಕೆಯಲ್ಲಿ ವಿವರಿಸಲಾಗಿರುವಂತೆ ರಾಜ್ಯ ಸರ್ಕಾರವು ಪ್ರತಿಯೊಬ್ಬ ಪ್ರಜೆಯ ಸರ್ಕಾರವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯು ಎಲ್ಲಾ ಜನರ ಪ್ರತಿನಿಧಿಯಾಗಿದ್ದಾರೆ. ಹಾಗೆಂದು ಸರ್ಕಾರ ಆ ವ್ಯಕ್ತಿಯ ಸ್ವಂತದ್ದಲ್ಲ. ಹಾಗೆಯೇ ಕೇಂದ್ರದಲ್ಲಿರುವ ಸರ್ಕಾರವು ದೇಶದ ಎಲ್ಲಾ ಜನರ ಸರ್ಕಾರವಾಗಿದೆ. ಪ್ರಧಾನ ಮಂತ್ರಿ ಸ್ಥಾನವು ಎಲ್ಲಾ ಜನರನ್ನು ಪ್ರತಿನಿಧಿಸುವ ಸ್ಥಾನವಾಗಿದ್ದು, ಆ ಹುದ್ದೆಯಲ್ಲಿರುವವರ ಸ್ವಂತದ್ದಲ್ಲ,” ಎಂದು ವಿವರಿಸಲಾಗಿದೆ.

ಯಾವುದೇ ಸರ್ಕಾರದ ಮುಂದೆ ವ್ಯಕ್ತಿಯ ಹೆಸರನ್ನು ಸೇರಿಸಿ ಕರೆಯುವುದು ಅಪರಾಧ ಎಂದು ಹೇಳುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವಂತೆ ಪ್ರತಿವಾದಿಗಳಿಗೆ ಸೂಚಿಸುವಂತೆ ಕೋರಿದ್ದ ಅರ್ಜಿದಾರರ ಕೋರಿಕೆಯನ್ನು ಪೀಠ ಮನ್ನಿಸಿದೆ.

Also Read
ಎನ್‌ಡಿಎಂಎಫ್‌ ಇಲ್ಲದಿರುವಾಗ ಪಿಎಂ ಕೇರ್ಸ್‌ ನಿಧಿ ಏಕೆ? ಮೋದಿ, ಶಾ ವಿರುದ್ಧ ಸುಪ್ರೀಂನಲ್ಲಿ ನ್ಯಾಯಾಂಗ ನಿಂದನಾ ಅರ್ಜಿ

ಇನ್ನು ಮುಂದೆ ಮಾಧ್ಯಮ, ಸಚಿವರು ಮತ್ತು ಇತರೆ ಅಧಿಕಾರಿ ವರ್ಗವು ಸರ್ಕಾರದ ಮುಂದೆ ಯಾವುದೇ ವ್ಯಕ್ತಿಯ ಹೆಸರು ಸೇರಿಸಿ ಕರೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದ ಮನವಿಯನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. ಇದರ ಜೊತೆಗೆ ಸಂಬಂಧ ಪಟ್ಟ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯ ಹೆಸರನ್ನು ಸೇರಿಸಿದ್ದ ದಾಖಲೆಗಳನ್ನು ಸರಿಪಡಿಸುವಂತೆ ಕೋರಿದ್ದ ಮನವಿಯನ್ನೂ ನ್ಯಾಯಾಲಯ ಪರಿಗಣಿಸಿತು.

ಆದರೆ, ಸುಗ್ರೀವಾಜ್ಞೆ ಹೊರಡಿಸಲು ಸೂಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪೀಠವು, “ನಿರ್ದಿಷ್ಟ ರೀತಿಯಲ್ಲಿ ಕಾನೂನು ರೂಪಿಸುವಂತೆ ಶಾಸಕಾಂಗಕ್ಕೆ ನಿರ್ದೇಶನ ನೀಡಿ ರಿಟ್‌ ಹೊರಡಿಸಲಾಗದು” ಎಂದು ಹೇಳಿದ್ದು ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com