ಕೋವಿಡ್ ಇಳಿಕೆ: ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಜಾರಿಯಲ್ಲಿದ್ದ ಎಸ್ಒಪಿಯನ್ನು ಹಿಂಪಡೆದ ಕರ್ನಾಟಕ ಹೈಕೋರ್ಟ್

ಪರಿಷ್ಕೃತ ಎಸ್ಒಪಿ ಪ್ರಕಾರ ವಕೀಲರ ಸಂಘ, ಗ್ರಂಥಾಲಯ, ಕ್ಯಾಂಟೀನ್, ಜೆರಾಕ್ಸ್ ನಿರ್ವಹಣೆಗಾರರು, ಬೆರಳಚ್ಚುಗಾರರು, ನೋಟರಿಯವರು/ ಓಥ್ ಕಮಿಷನರ್‌ಗಳ ಮೇಲೆ ಇಲ್ಲಿಯವರೆಗೆ ಹೇರಿದ್ದ ನಿರ್ಬಂಧಗಳನ್ನು ಕರ್ನಾಟಕ ಹೈಕೋರ್ಟ್‌ ತೆಗೆದುಹಾಕಿದೆ.
ಕೋವಿಡ್ ಇಳಿಕೆ: ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಜಾರಿಯಲ್ಲಿದ್ದ ಎಸ್ಒಪಿಯನ್ನು ಹಿಂಪಡೆದ ಕರ್ನಾಟಕ ಹೈಕೋರ್ಟ್

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಸೆಪ್ಟೆಂಬರ್‌ 1ರಿಂದ ಹಿಂಪಡೆಯಲು ಕರ್ನಾಟಕ ಹೈಕೋರ್ಟ್‌ ನಿರ್ಧರಿಸಿದೆ. ಪರಿಷ್ಕೃತ ಎಸ್‌ಒಪಿ ಕುರಿತಾದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್‌ ಹೊರಡಿಸಿದೆ.

ಪರಿಷ್ಕೃತ ಎಸ್‌ಒಪಿ ಪ್ರಕಾರ ವಕೀಲರ ಸಂಘ, ಗ್ರಂಥಾಲಯ, ಕ್ಯಾಂಟೀನ್‌, ಜೆರಾಕ್ಸ್‌ ಆಪರೇಟರ್‌, ಬೆರಳಚ್ಚುಗಾರರು, ನೋಟರಿಯವರು/ ಓಥ್‌ ಕಮಿಷನರ್‌ಗಳ ಮೇಲೆ ಇಲ್ಲಿಯವರೆಗೆ ಹೇರಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಆದರೆ ಅವರು ಎರಡೂ ಲಸಿಕೆಗಳನ್ನು ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕಿದೆ.

ಕೆಲ ನಿರ್ಬಂಧಗಳಿಗೆ ಒಳಪಡಿಸಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರು/ ನ್ಯಾಯವಾದಿಗಳ ಸಂಘಗಳನ್ನು ತೆರೆಯಲು ಅನುಮತಿಸಲಾಗಿದೆ. ಸೋಂಕು ಹರಡದಂತೆ ತಡೆಯಲು ಅರ್ಧದಷ್ಟು ಕುರ್ಚಿಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನ್ಯಾಯಾಂಗ ಅಧಿಕಾರಿಗಳಿಗೆ ಇರುತ್ತದೆ. ಸಂಘದ ಸದಸ್ಯರಿಗೆ ಸೋಂಕು ತಗುಲಿದ್ದು ಪತ್ತೆಯಾಗಿದ್ದಲ್ಲಿ ಸಂಘದ ಆವರಣವನ್ನು ಶುಚಿಗೊಳಿಸಲು ಒಂದು ದಿನ ಮುಚ್ಚಬೇಕಾಗುತ್ತದೆ. ವ್ಯಕ್ತಿಗಳಿಗೆ ಸೋಂಕು ತಗುಲಿರುವ ಬಗ್ಗೆ ನ್ಯಾಯಾಂಗ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಸಂಘಗಳ ಜವಾಬ್ದಾರಿ. ಸಂಘದ ಆವರಣದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳಿಗೆ ಅವಕಾಶವಿಲ್ಲ.

Also Read
ಕೋವಿಡ್‌ ಔಷಧ ಸಂಶೋಧಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಲಾಗದು: ಕರ್ನಾಟಕ ಹೈಕೋರ್ಟ್‌

ಆದರೆ ವಕೀಲರು ಸೇರಿದಂತೆ ಎಲ್ಲರೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಬೇಕಿದೆ. ಸಾಧ್ಯವಾದರೆ ನ್ಯಾಯಾಂಗ ಅಧಿಕಾರಿಗಳು, ವಕೀಲರು ಹಾಗೂ ಸಿಬ್ಬಂದಿಗೆ ಪ್ರತ್ಯೇಕ ದ್ವಾರ, ಹಾಗೂ ದಾವೆದಾರರು, ಸಾಕ್ಷಿಗಳು ಪೊಲೀಸರಿಗೆ ಮತ್ತೊಂದು ದ್ವಾರದಲ್ಲಿ ಪ್ರವೇಶ ಕಲ್ಪಿಸಲು ಸೂಚಿಸಲಾಗಿದೆ. ಎಲ್ಲಾ ಪ್ರವೇಶ ದ್ವಾರಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಒದಗಿಸುವಂತೆ ತಿಳಿಸಲಾಗಿದೆ.

ಮಾಸ್ಕ್‌ಗಳನ್ನು ಸೂಕ್ತ ರೀತಿಯಲ್ಲಿ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಸೂಚಿಸಿರುವ ಮಾರ್ಗಸೂಚಿಗಳು ಅನ್ವಯವಾಗಲಿವೆ. ವಕೀಲ ವರ್ಗ ಎರಡು ಮಾಸ್ಕ್‌ಗಳನ್ನು ಧರಿಸತಕ್ಕದ್ದು ಎಂದು ಸಲಹೆ ನೀಡಲಾಗಿದೆ. ನಿಯಮ ಪಾಲಿಸದ ವ್ಯಕ್ತಿಗಳಿಗೆ ನಿರ್ಬಂಧ ಹೇರುವ ಅಧಿಕಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಹಿರಿಯ ನ್ಯಾಯಾಧೀಶರಿಗೆ ಇದೆ.

ಕೋವಿಡ್‌ ಸೋಂಕು ಹರಡುವಿಕೆಯ ಪ್ರಸ್ತುತ ಸ್ಥಿತಿ ಗಮನಿಸಿ ಈ ಎಸ್‌ಒಪಿ ಜಾರಿ ಮಾಡಲಾಗಿದ್ದು ಪ್ರತಿಕೂಲ ಸ್ಥಿತಿ ಎದುರಾದರೆ ಅದನ್ನು ಬದಲಿಸಲಾಗುವುದು ಮತ್ತು ಇದನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೈಕೋರ್ಟ್‌ ತಿಳಿಸಿದೆ. ಒಂದು ವೇಳೆ ಕೋವಿಡ್‌ ಪ್ರಕರಣಗಳು ಏರಿಕೆಯಾದರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆ ಕುರಿತು ವರದಿ ಮಾಡಬೇಕು. ಆಗ ಎಸ್‌ಒಪಿಯಲ್ಲಿ ಬದಲಾವಣೆ ತರಲಾಗುವುದು ಎಂದು ವಿವರಿಸಲಾಗಿದೆ.

ಹೆಚ್ಚಿನ ವಿವರಗಳನ್ನು ಒಳಗೊಂಡ ಪರಿಷ್ಕೃತ ಎಸ್‌ಒಪಿಯನ್ನು ಇಲ್ಲಿ ಓದಿ:

Attachment
PDF
Modified SOP Notification.pdf
Preview

Related Stories

No stories found.
Kannada Bar & Bench
kannada.barandbench.com