ಜಾರಿ ನಿರ್ದೇಶನಾಲಯದಿಂದ ಗೇಮ್ಸ್‌ಕ್ರಾಫ್ಟ್‌ನ ಮೂವರ ನಿರ್ದೇಶಕರ ಬಂಧನ ಅಕ್ರಮ ಎಂದ ಹೈಕೋರ್ಟ್‌; ಇ ಡಿಗೆ ಹಿನ್ನಡೆ

ಗೇಮ್ಸ್‌ಕ್ರಾಫ್ಟ್‌ ಕಂಪನಿಯ ಮುಖ್ಯಸ್ಥರ ವಿರುದ್ಧ ತೆಲಂಗಾಣದ ಮೂರು ಕಡೆ ಎಫ್‌ಐಆರ್‌ ದಾಖಲಾಗಿದ್ದನ್ನು ಆಧರಿಸಿ ಇ ಡಿ ಪ್ರಕರಣ ದಾಖಲಿಸಿತ್ತು.
ಜಾರಿ ನಿರ್ದೇಶನಾಲಯದಿಂದ ಗೇಮ್ಸ್‌ಕ್ರಾಫ್ಟ್‌ನ ಮೂವರ ನಿರ್ದೇಶಕರ ಬಂಧನ ಅಕ್ರಮ ಎಂದ ಹೈಕೋರ್ಟ್‌; ಇ ಡಿಗೆ ಹಿನ್ನಡೆ
Published on

ವಂಚನೆ ಆರೋಪದಲ್ಲಿ ಹಳೆಯ ಆರೋಪಗಳನ್ನು ಆಧರಿಸಿ ಗೇಮ್ಸ್‌ ಕ್ರಾಫ್ಟ್‌ ಕಂಪನಿಯ ಮೂವರು ನಿರ್ದೇಶಕರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯದ (ಇ ಡಿ) ಕ್ರಮ ಕಾನೂನಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದ್ದು, ಅವರನ್ನು ಬಿಡುಗಡೆಗೊಳಿಸಲು ನಿರ್ದೇಶಿಸಿದೆ.

ತಮ್ಮ ಬಂಧನ ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಕೋರಿ ಕಂಪನಿಯ ನಿರ್ದೇಶಕರಾದ ಗುರುಗ್ರಾಮದ ದೀಪಕ್‌ ಸಿಂಗ್, ವಿಕಾಸ್ ತನೇಜಾ ಮತ್ತು ಪೃಥ್ವಿರಾಜ್‌ ಸಿಂಗ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. 

Justice M Nagaprasanna
Justice M Nagaprasanna

“ಗೇಮ್ಸ್‌ಕ್ರಾಫ್ಟ್‌ ನಿರ್ದೇಶಕರ ಬಂಧನವು ಹಣ ಅಕ್ರಮ ವರ್ಗಾವಣೆ ಕಾಯಿದೆಯ (ಪಿಎಂಎಲ್ಎ) ಸೆಕ್ಷನ್‌ 19ರ ಅಡಿಯಲ್ಲಿನ ಅಪರಾಧಗಳನ್ನು ಆಧರಿಸಿಲ್ಲ. ಒಂದು ವೇಳೆ, ಪಿಎಂಎಲ್‌ಎ ಸೆಕ್ಷನ್‌ 50ರ ಅಡಿಯಲ್ಲಿ ಇ ಡಿ ಅಧಿಕಾರಿಗಳು ಮತ್ತೇನಾದರೂ ಕಾನೂನು ಕ್ರಮಕ್ಕೆ ಬಯಸಿದರೆ ಅರ್ಜಿದಾರರ ವಿರುದ್ಧ ಸಮನ್ಸ್ ಜಾರಿಗೊಳಿಸಿ ಕಾನೂನು ಪ್ರಕಾರ ಮುಂದುವರಿಯಲು ಮುಕ್ತವಾಗಿದ್ದಾರೆ” ಎಂದು ಪೀಠ ಸ್ಪಷ್ಟಪಡಿಸಿದೆ.

Also Read
ಗೇಮ್ಸ್‌ಕ್ರಾಫ್ಟ್‌ ಸಂಸ್ಥಾಪಕರ ಬಂಧನ ಸಮರ್ಥಿಸಿಲು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದ ಹೈಕೋರ್ಟ್‌

ಆನ್‌ಲೈನ್‌ ಕೌಶಲ್ಯಾಧಾರಿತ (ರಮ್ಮಿ, ಲೂಡೊ, ಪೋಕರ್...) ಆಟಗಳ ಕಂಪನಿಯಲ್ಲಿ ಒಂದಾದ ಗೇಮ್ಸ್ ಕ್ರಾಫ್ಟ್‌ ಕಂಪನಿಯು ಜನರಿಗೆ ವಂಚಿಸಿ, ಹಣ ಗಳಿಸಿ ಅದನ್ನು ಅನ್ಯ ಉದ್ದೇಶಕ್ಕೆ ಬೇರೆ ಖಾತೆಗಳಿಗೆ ವರ್ಗಾಯಿಸಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ ಎಂದು ಇ ಡಿ ಆರೋಪಿಸಿತ್ತು.  ಈ ಕಂಪನಿಯ ಮುಖ್ಯಸ್ಥರ ವಿರುದ್ಧ ತೆಲಂಗಾಣದ ಮೂರು ಕಡೆ ಎಫ್‌ಐಆರ್‌ ದಾಖಲಾಗಿದ್ದನ್ನು ಆಧರಿಸಿ ಇ ಡಿ ಪ್ರಕರಣ ದಾಖಲಿಸಿತ್ತು.

ಗೇಮ್ಸ್‌ಕ್ರಾಫ್ಟ್‌ ನಿರ್ದೇಶಕರು ಮೇ 8ರಿಂದ ಇಲ್ಲಿಯವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಬಂಧನ ಅಕ್ರಮ ಎಂದು ಘೋಷಿಸುವಂತೆ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಿರಿಯ ವಕೀಲರಾದ ಡಾ. ಎಸ್‌ ಮುರಳೀಧರ್‌, ವಿಕ್ರಮ್‌ ಚೌಧರಿ, ಸಜನ್‌ ಪೂವಯ್ಯ ಮತ್ತು ಸಂದೇಶ್‌ ಚೌಟ ಅವರು ಅರ್ಜಿದಾರರ ಪರವಾಗಿ ವಾದಿಸಿದ್ದರು. ವಕೀಲರಾದ ಸಂಕಲ್ಪ್‌ ಶರ್ಮಾ, ಸುಹಾನ್‌ ಮುಖರ್ಜಿ, ವಿ ಸಂಪ್ರೀತ್‌ ಅರ್ಜಿದಾರರನ್ನು ಪ್ರತಿನಿಧಿಸಿದ್ದರು. ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌, ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್‌ ರಾವ್‌ ವಾದಿಸಿದ್ದರು.

Attachment
PDF
KAHC010087702026_2
Preview
Kannada Bar & Bench
kannada.barandbench.com