

ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಸೆಸ್ ವಿಧಿಸುವುದನ್ನು ಪ್ರಶ್ನಿಸಿ ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಅಂಡ್ ಡಿಜಿಟಲ್ ಫೌಂಡೇಶನ್ (ಐಬಿಡಿಎಫ್), ಜಿಯೋಸ್ಟಾರ್ ಮತ್ತು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದೆ.
ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠವು ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಸೆಸ್ ಸಂಗ್ರಹಿಸದಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ಬೇರೆ ಅರ್ಜಿದಾರರ ಪರವಾಗಿ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಇಲ್ಲಿಯೂ ಮುಂದುವರಿಸಿದೆ.
ಅರ್ಜಿದಾರರು ಕಾರ್ಮಿಕ ಇಲಾಖೆಯು 2026ರ ಸೆಪ್ಟೆಂಬರ್ 10ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ಅಲ್ಲದೆ, ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಕಾಯಿದೆಗೆ 2026ರಲ್ಲಿ ಮಾಡಿರುವ ತಿದ್ದುಪಡಿ ಹಾಗೂ ಅದಕ್ಕೆ ಸಂಬಂಧಿಸಿದ 2025ರ ನಿಯಮಗಳು ಸಿನಿಮಾ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸಲು ಅಥವಾ ಸಂಗ್ರಹಿಸಲು ಅವಕಾಶ ಕಲ್ಪಿಸುವಷ್ಟರ ಮಟ್ಟಿಗೆ ಅಸಂವಿಧಾನಿಕ ಎಂದು ಘೋಷಿಸುವಂತೆ ಮನವಿ ಮಾಡಿದ್ದಾರೆ.
ನಿರ್ದಿಷ್ಟವಾಗಿ ಕಾಯಿದೆಯ ಸೆಕ್ಷನ್ 2(ಜಿ), 2(ಒ), 8, 9, 11, 13 ಮತ್ತು 16 ಹಾಗೂ 2025ರ ನಿಯಮಗಳಾದ 2(1)(ಸಿ), 8(2), 10 ಮತ್ತು 11ರ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸೆಪ್ಟೆಂಬರ್ 10ರ ಅಧಿಸೂಚನೆಯಿಂದ ಉಂಟಾಗಿರುವ ಎಲ್ಲಾ ತತ್ಪರಿಣಾಮದ ಕ್ರಮಗಳನ್ನು ರದ್ದುಗೊಳಿಸುವಂತೆಯೂ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಅರ್ಜಿದಾರರ ಪರ ವಕೀಲೆ ಗೀತಾಂಜಲಿ ಮಿರಿಯಮ್ ಮ್ಯಾಥ್ಯೂ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಲಾಗಿದೆ.
ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಸೆಸ್ ವಿಧಿಸುವುದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್ ಐನಾಕ್ಸ್ ಲಿಮಿಟೆಡ್, ಪಿವಿಆರ್ ಐನಾಕ್ಸ್ ಷೇರುದಾರರಾದ ಪ್ರತೀಕ್ ಚೌಹಾಣ್ ಮತ್ತು ವಿನಾಯಕ ಚಿತ್ರಮಂದಿರವೂ ಹೈಕೋರ್ಟ್ ಮೆಟ್ಟಿಲೇರಿವೆ.
ಸೆಪ್ಟೆಂಬರ್ 30ರಂದು ನಡೆದ ವಿಚಾರಣೆ ವೇಳೆ, ಸಿನಿಮಾ ಟಿಕೆಟ್‌ಗಳ ಮೇಲಿನ ಶೇ. 2ರಷ್ಟು ಸೆಸ್ ಸಂಗ್ರಹಿಸದಿರುವುದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಚಿತ್ರಮಂದಿರಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿತ್ತು.