[ಶೇ 2 ಉಪಕರ] ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಆತುರದ ಕ್ರಮಕೈಗೊಳ್ಳಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಮೂರ್ನಾಲ್ಕು ದಿನ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ವಾದ-ಪ್ರತಿವಾದ ಆಲಿಸಿ ನ್ಯಾಯಾಲಯ ನಿರ್ಧರಿಸಬಹುದು. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದ ಎಎಜಿ.
[ಶೇ 2 ಉಪಕರ] ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಆತುರದ ಕ್ರಮಕೈಗೊಳ್ಳಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ
Published on: 

ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಶೇ 2 ಸೆಸ್ (ಉಪಕರ) ಸಂಗ್ರಹಿಸುವ ವಿಚಾರದಲ್ಲಿ ಆತುರದ ಕ್ರಮಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್‌ ಐನಾಕ್ಸ್‌, ಇದರ ಷೇರುದಾರ ಪ್ರತೀಕ್‌ ಚೌಹಾಣ್‌ ಹಾಗೂ ಬೆಂಗಳೂರಿನ ವಿನಾಯಕ ಚಿತ್ರಮಂದಿರದ ಮಾಲೀಕರು ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯಿದೆ, ಅದಕ್ಕೆ ತರಲಾಗಿರುವ ತಿದ್ದುಪಡಿ ಮತ್ತು ಅದರ ಅಡಿ ರೂಪಿಸಿರುವ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆಯ ಆರಂಭದಲ್ಲಿ ಪೀಠವು “ಕಾಯಿದೆ ಸೆಕ್ಷನ್‌ 9ರ ಪ್ರಕಾರ ಮಾಸಿಕವಾಗಿ ಪ್ರತಿ ತಿಂಗಳು ಅರ್ಜಿದಾರರು ಅನುಪಾಲನೆ (ಸೆಸ್‌ ಸಂಗ್ರಹಿಸಿದ ವರದಿ) ಮಾಡಬೇಕು ಎಂದಿದೆ. ಈಗ ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವುದರಿಂದ ಅಲ್ಲಿಯವರೆಗೆ ಆತುರ ಕ್ರಮಕೈಗೊಳ್ಳಬಾರದು” ಎಂದಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಭಾನುಪ್ರಕಾಶ್‌ ಅವರು “ಇಂದಿನಿಂದ ಕಾಯಿದೆ ಜಾರಿಗೆ ಬಂದಿದೆ. ಶೇ. 2 ಸೆಸ್ ವಿಧಿಸುವ ಅಧಿಸೂಚನೆಯನ್ನು ಹಿಂಪಡೆಯಲಾಗುವುದು. ಅರ್ಜಿದಾರರ ವಿರುದ್ಧ ಯಾವುದೇ ತೆರನಾದ ಆತುರದ ಕ್ರಮಕೈಗೊಳ್ಳುವುದಿಲ್ಲ” ಎಂದರು.

ವಿನಾಯಕ ಚಿತ್ರಮಂದಿರ ಪ್ರತಿನಿಧಿಸಿದ್ದ ವಕೀಲ ಕೆ ವಿ ಧನಂಜಯ್‌ ಅವರು “ಕಾಯಿದೆಯಲ್ಲಿ ಸೆಸ್‌ ಸಂಗ್ರಹಿಸಬೇಕು ಎಂದು ಎಲ್ಲೂ ಹೇಳಿಲ್ಲ. ಕಾಯಿದೆ ಇಂದು ಜಾರಿಗೆ ಬಂದಿರುವುದರಿಂದ ಮುಂದಿನ ತಿಂಗಳಿಂದ ಅರ್ಜಿದಾರರು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಸಲ್ಲಿಸಬೇಕಾಗುತ್ತದೆ. ಕಾಯಿದೆ ಅಡಿ ನೋಂದಣಿ ಮಾಡಲು ನಿರ್ದಿಷ್ಟ ಫಾರ್ಮ್‌ ಸಹ ಇಲ್ಲ. ಹೀಗಾಗಿ, ಕಾಯಿದೆಗೆ ತಡೆ ನೀಡಬೇಕು” ಎಂದು ಕೋರಿದರು.

Also Read
ನಾಳೆ ಶೇ.2 ಸಿನಿಮಾ ಟಿಕೆಟ್‌ ಸೆಸ್‌ ತಡೆ ಕೋರಿರುವ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ಈ ಹಂತದಲ್ಲಿ ಎಎಜಿ ಅವರು “ಮೂರ್ನಾಲ್ಕು ದಿನ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ವಾದ-ಪ್ರತಿವಾದ ಆಲಿಸಿ ನ್ಯಾಯಾಲಯ ನಿರ್ಧರಿಸಬಹುದು. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಹೀಗಾಗಿ, ಕಾಯಿದೆಗೆ ತಡೆ ನೀಡಬಾರದು” ಎಂದು ಮನವಿ ಮಾಡಿದರು.

ಎಎಜಿಯವರು ಅರ್ಜಿದಾರರ ವಿರುದ್ಧ ಆತುರದ ಕ್ರಮಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ದಾಖಲಿಸಿದ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 26ಕ್ಕೆ ಮುಂದೂಡಿತು.

Kannada Bar & Bench
kannada.barandbench.com