
ಹಾಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್ ಒಪ್ಪಿಗೆ ಕೋರಿದ್ದ ರಾಜಕಾರಣಿಗಳ ವಿರುದ್ಧದ 17 ಪ್ರಕರಣಗಳಿಗೆ ವಜಾಕ್ಕೆ ಅನುಮತಿ ಕೋರಿದ್ದ ಆದೇಶವೂ ವಜಾಗೊಳ್ಳಲಿದೆ.
ಸರ್ಕಾರಿ ಅಭಿಯೋಜಕರಿಗೆ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 321ರ ಅಡಿ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 43 ಪ್ರಕರಣಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವು 2024ರ ಅಕ್ಟೋಬರ್ 10ರಂದು ಮಾಡಿರುವ ಆದೇಶ ಬದಿಗೆ ಸರಿಸಲು ಕೋರಿ ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ಸರ್ಕಾರದ ಆದೇಶವನ್ನು ಬದಿಗೆ ಸರಿಸಲಾಗಿದೆ. ಆರಂಭದಿಂದಲೂ ಆದೇಶವು ಅಸಿಂಧುವಾಗಿದೆ. ಕಾನೂನಿನ ಪರಿಣಾಮಗಳು ಜಾರಿಯಾಗಲಿವೆ” ಎಂದು ನ್ಯಾಯಾಲಯ ಹೇಳಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು “ಈ ಹೈಕೋರ್ಟ್‌ನಲ್ಲಿ ಇದು ನನ್ನ ಕೊನೆಯ ವಿಚಾರಣೆ. ಎಲ್ಲಾ ವಕೀಲರು ಮತ್ತು ಸಿಬ್ಬಂದಿಗೆ ಹೃದಯಾಂತರಳಾದಿಂದ ಧನ್ಯವಾದ ಸಲ್ಲಿಸುತ್ತೇನೆ. ಇದು ಇಲ್ಲಿ ನಾನು ಓದುತ್ತಿರುವ ಕೊನೆಯ ಆದೇಶ” ಎಂದರು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಲಾಗದು, ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ಸರ್ಕಾರಿ ಅಭಿಯೋಜಕರಿಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಸರ್ಕಾರಿ ಅಭಿಯೋಜಕರ ಕಚೇರಿಯು ಅಂಚೆ ಕಚೇರಿಯ ರೀತಿ ನಡೆದುಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಹೇಳಿದೆ. ಪ್ರಕರಣ ಹಿಂಡೆಯುವಂತೆ ಅಭಿಯೋಜಕರಿಗೆ ಸರ್ಕಾರ ಒತ್ತಡ ಹಾಕಲಾಗದು. ಪ್ರಕರಣಗಳನ್ನು ಹಿಂಪಡೆಯಲು ಅರ್ಹವಾಗಿಲ್ಲ ಎಂದು ಕಾನೂನು ಮತ್ತು ಅಭಿಯೋಜನಾ ಇಲಾಖೆಯು ಟಿಪ್ಪಣಿಯಲ್ಲಿ ಹೇಳಿವೆ. ಅದಾಗ್ಯೂ, ಸರ್ಕಾರ ಆದೇಶ ಮಾಡಿದೆ” ಎಂದಿದ್ದರು.
“ಹಲವು ಆರೋಪಿಗಳ ಮೇಲೆ ದೊಂಬಿ, ಕೊಲೆ ಪ್ರಯತ್ನ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅತಿಕ್ರಮ ಪ್ರವೇಶದಂಥ ಗಂಭೀರ ಆರೋಪಗಳಿವೆ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗೆ ಆಕ್ಷೇಪಿಸಿ ಹುಬ್ಬಳ್ಳಿಯಲ್ಲಿ ಒಂದು ಕೋಮಿನವರು ಹಳೇಹುಬ್ಬಳ್ಳಿ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಸಂಬಂಧ ದಾಖಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ” ಎಂದಿದ್ದರು.
ಯಾರೆಲ್ಲರ ವಿರುದ್ಧ ಪ್ರಕರಣ ಹಿಂಪಡೆಯಲಾಗಿತ್ತು: ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ನರಗುಂದದ ಬಿ ಆರ್ ಯಾವಗಲ್, ಹಿರೇಕೆರೂರು ಶಾಸಕ ಯು ಬಿ ಬಣಕಾರ್, ಕಾಂಗ್ರೆಸ್ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಮಾಜಿ ಶಾಸಕರಾದ ದಾವಣಗೆರೆಯ ಎಸ್ ಎ ರವೀಂದ್ರನಾಥ್, ಬೆಳಗಾವಿಯ ಸಂಜಯ್ ಪಾಟೀಲ್, ಬಾಗಲಕೋಟೆಯ ಡಾ. ವೀರಣ್ಣ ಚರಂತಿಮಠ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು.
ಅಲ್ಲದೆ, ಹೊನ್ನಾಳಿ ಎಂ ಪಿ ರೇಣುಕಾಚಾರ್ಯ, ಬೆಳಗಾವಿಯ ಅನಿಲ ಬೆನಕೆ, ಡಾ. ಎಸ್ ಸಿದ್ದಯ್ಯ, ಬೆಂಗಳೂರು ಗಾಮಾಂತರ ಜಿಲ್ಲೆಯ ಬಿ ಶಿವಣ್ಣ, ಭದ್ರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್ ಆರ್ ಬಸವರಾಜಪ್ಪ, ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಕಲಬುರ್ಗಿ ಜಿಲ್ಲೆಯ ದರ್ಗಾ ಹಜರತ್ ಮಲಿಕುಲ್ ಮಶಾಲ್‌ಕಹ್ ಮಕ್ದೂಮ್ ಲಾಡಿ ಅನ್ಸಾರಿ (ಸುನ್ನಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಎಂ ಎಸ್ ಅಂಗಡಿ, ಮೈಸೂರಿನ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್ ಭಾಸ್ಕರ್, ಭೀಮ್ ಆರ್ಮಿ ಜಿಲ್ಲಾ ಸಮಿತಿಯ ಅಧ್ಯಕ್ಷ ರಾಘು ಚಾಕ್ರಿ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು.
ಅದೇ ರೀತಿ, ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಹುಬ್ಬಳ್ಳಿಯ ಅಂಜುಮಾನ ಇ-ಇಸ್ಲಾಂ ಅಡಿ ರಚಿಸಲಾಗಿದ್ದ ಪರಿಹಾರ ಸಮಿತಿಯ ಸದಸ್ಯರು, ರಾಯಚೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್ ಪ್ರಸಾದ್, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪರವಾಗಿ ಚುಕ್ಕಿ ನಂಜುಂಡಸ್ವಾಮಿ ಅವರು ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿತ್ತು.