ಸರ್ಕಾರಿ ನಿಗಮ, ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಹಿಂದೆ ಸರ್ಕಾರವು ಹೈಕೋರ್ಟ್‌ಗೆ ವಿವರಿಸಿತ್ತು.
Karnataka HC and LGBT
Karnataka HC and LGBT
Published on

ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡುವುದನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಿಂದಿನ ನಿರ್ಧಾರಕ್ಕೆ ಅನುಗುಣವಾಗಿ ಅದೇ ರೀತಿಯ ನಿರ್ದೇಶನಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

“ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) 1977ರಡಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಮೀಸಲಾತಿ ಕಲ್ಪಿಸುವ ನಿರ್ಧಾರ ಮಾಡುವ ಮೂಲಕ ರಾಜ್ಯ ಸರ್ಕಾರವು ನವೀನ ಕ್ರಮ ಕೈಗೊಂಡಿದೆ. ಅದೇ ರೀತಿ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವುದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡಿದ್ದರ ಕುರಿತು ಆರು ವಾರಗಳಲ್ಲಿ ಅಧಿಕೃತವಾಗಿ ರಾಜ್ಯ ಸರ್ಕಾರವು ಮಾಹಿತಿ ನೀಡಬೇಕು” ಎಂದು ಪೀಠ ಹೇಳಿದೆ.

ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಸಂಸ್ಥೆ ಹಾಗೂ ಶಾಸನಬದ್ಧ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಸಂಗಮ ಸಂಸ್ಥೆಯು ಸಲ್ಲಿಸಿದ್ದ ಮಧ್ಯಪ್ರವೇಶಿಕೆ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸುವುದರ ಕುರಿತಾದ ಅರ್ಜಿಯಲ್ಲಿ ಮಧ್ಯಪ್ರವೇಶಿಕೆ ಮನವಿ ಮಾಡಲಾಗಿತ್ತು.

ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ರಾಜ್ಯ ಸರ್ಕಾರವು ಜುಲೈ 21ರಂದು ಹೈಕೋರ್ಟ್‌ಗೆ ತಿಳಿಸಿತ್ತು. ಈ ಮೂಲಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿತ್ತು.

“ರಾಜ್ಯ ಸರ್ಕಾರದ ನಿಗಮ ಮತ್ತು ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸಬೇಕು. ಹೀಗೆ ಮಾಡಿದರೆ ಸರ್ಕಾರಿ ಉದ್ಯೋಗದಲ್ಲಿಯೂ ತೃತೀಯ ಲಿಂಗಗಳಿಗೆ ಸಮನಾದ ಅವಕಾಶ ಸಿಗುತ್ತದೆ. ಹಲವು ಸರ್ಕಾರಿ ಮಂಡಳಿ ಮತ್ತು ಸಂಸ್ಥೆಗಳು ನೇಮಕಾತಿಯಲ್ಲಿ ತಮ್ಮದೇ ಆದ ಶಾಸನಬದ್ಧ ನಿಬಂಧನೆಗಳನ್ನು ಹೊಂದಿದ್ದು, ಕೆಲವು ಯಾವುದೇ ನಿಬಂಧನೆಗಳನ್ನು ಹೊಂದಿಲ್ಲ. ಅಲ್ಲದೇ, ಕೆಲವು ರಾಜ್ಯ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳನ್ನು ಪಾಲಿಸುವುದಿಲ್ಲ. ಹೀಗಾಗಿ, ಸರ್ಕಾರದ ಎಲ್ಲಾ ನಿಗಮ ಮತ್ತು ಮಂಡಳಿಗಳಲ್ಲಿ ರಾಜ್ಯ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು 2021ರ ಪ್ರಕಾರ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿಗೆ ನಿರ್ದೇಶಿಸಿದರೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಪಡೆಯಲಿದ್ದಾರೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

Also Read
ದೇಶದಲ್ಲೇ ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಿದ ಕರ್ನಾಟಕ

ಮಧ್ಯಪ್ರವೇಶಿಕೆದಾರರ ಪರ ವಾದಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ರಾಜ್ಯದಲ್ಲಿ ಶೇ. 75-80ರಷ್ಟು ವಿವಿಧ ನಿಗಮಗಳಿದ್ದು, ಉದ್ಯೋಗದಲ್ಲಿ ಶೇ. 1ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರ ಸುತ್ತೋಲೆ ಹೊರಡಿಸಬೇಕು” ಎಂದರು.

“ಸರ್ಕಾರದ ಎಲ್ಲಾ ನಿಗಮ ಮತ್ತು ಸಂಸ್ಥೆಗಳನ್ನು ಮನವಿಯಲ್ಲಿ ಸೇರಿಸಲಾಗದು” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಈ ನಿಗಮ ಮತ್ತು ಸಂಸ್ಥೆಗಳು ತಮ್ಮದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿವೆ. ಈ ಸಂಬಂಧ ಒತ್ತಾಯ ಮಾಡಲಾಗದು” ಎಂದು ಹೇಳಿದರು.

ಈ ಹಂತದಲ್ಲಿ ಪೀಠವು “ನೀವು (ಮಧ್ಯಪ್ರವೇಶಕಾರರು) ಅವರ ವಿರುದ್ಧ ನ್ಯಾಯಿಕ ಪರಮಾದೇಶ (ರಿಟ್‌ ಆಫ್‌ ಮ್ಯಾಂಡಮಸ್‌) ಕೋರಬೇಕು. ಅವರ ವಿರುದ್ಧ ರಿಟ್‌ ಸಲ್ಲಿಕೆಯಾಗಿಲ್ಲ” ಎಂದಿತು. ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಪೀಠವು ಮಧ್ಯಪ್ರವೇಶ ಮನವಿಯನ್ನು ವಿಲೇವಾರಿ ಮಾಡಿತು.

ಸೆಪ್ಟೆಂಬರ್‌ 22ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿದೆ.

Kannada Bar & Bench
kannada.barandbench.com