ಕರ್ನಾಟಕ ಹೈಕೋರ್ಟ್‌ಗೆ ಡಿಸೆಂಬರ್ 22ರಿಂದ ಡಿಸೆಂಬರ್ 30ರ ವರೆಗೆ ಚಳಿಗಾಲದ ರಜೆ ಇರಲಿದೆ. ಹೊಸ ವರ್ಷದಿಂದ ನ್ಯಾಯಾಲಯದ ಚಟುವಟಿಕೆಗಳು ಪುನಾರಂಭವಾಗಲಿವೆ.
ಡಿಸೆಂಬರ್ 26 ಮತ್ತು 28ರಂದು ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ರಜಾಕಾಲೀನ ಪೀಠಗಳು ತುರ್ತು ಅರ್ಜಿಗಳ ವಿಚಾರಣೆ ನಡೆಸಲಿವೆ.
ಡಿಸೆಂಬರ್ 26ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ ವಿ ಅರವಿಂದ್ ಅವರು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿಗಳಾದ ಟಿ ಜಿ ಶಿವಶಂಕರೇಗೌಡ ಮತ್ತು ಟಿ ವೆಂಕಟೇಶ್ ನಾಯಕ್ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ಡಿಸೆಂಬರ್ 28ರಂದು ನ್ಯಾಯಮೂರ್ತಿಗಳಾದ ಆರ್ ನಟರಾಜ್ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರು ವಿಭಾಗೀಯ ಪೀಠದ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ಎಂ ಜಿ ಎಸ್ ಕಮಲ್ ಮತ್ತು ಕೆ ರಾಜೇಶ್ ರೈ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ಡಿಸೆಂಬರ್ 26 ಮತ್ತು 28ರಂದು ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರು ವಿಭಾಗೀಯ ಪೀಠದ ಪ್ರಕರಣಗಳು ಮುಗಿದ ಬಳಿಕ ಏಕಸದಸ್ಯ ಪೀಠದ ಅರ್ಜಿಗಳನ್ನು ವಿಚಾರಣೆ ನಡೆಸಲಿದ್ದಾರೆ.
ಡಿಸೆಂಬರ್ 26 ಮತ್ತು 28ರಂದು ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಇ ಎಸ್ ಇಂದಿರೇಶ್ ಮತ್ತು ಅನಿಲ್ ಬಿ. ಕಟ್ಟಿ ಅವರು ವಿಭಾಗೀಯ ಪೀಠದ ಅರ್ಜಿಗಳ ವಿಚಾರಣೆ ಮುಗಿದ ಬಳಿಕ ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ತುರ್ತು ಮಧ್ಯಂತರ ಆದೇಶ ಅಗತ್ಯವಾಗಿರುವ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಅರ್ಜಿಗಳನ್ನು ಮಾತ್ರ ರಜಾಕಾಲೀನ ಪೀಠಗಳಲ್ಲಿ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ಎಂ ಚಂದ್ರಶೇಖರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.