ವಕೀಲರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ; ವಕೀಲರ ಮೇಲಿನ ಅಪರಾಧಗಳಿಗೆ 10 ವರ್ಷ ಜೈಲು ಶಿಕ್ಷೆಗೆ ಆಗ್ರಹ

ವಕೀಲರಿಗೆ ಕಾನೂನು ರಕ್ಷಣೆ ಒದಗಿಸುವುದು ಹಾಗೂ ವಕೀಲರ ಮೇಲಿನ ಹಿಂಸಾಚಾರ ತಡೆ ನಿಷೇಧ ಕಾಯಿದೆ–2023 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಗ್ರಹ.
ವಕೀಲರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ; ವಕೀಲರ ಮೇಲಿನ ಅಪರಾಧಗಳಿಗೆ 10 ವರ್ಷ ಜೈಲು ಶಿಕ್ಷೆಗೆ ಆಗ್ರಹ
Published on: 

ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ವಕೀಲ ಶ್ರೀರಾಮ್ ಹತ್ಯೆ ಹಾಗೂ ಕೋಲಾರದ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಅವರ ಹತ್ಯೆಗೆ ಯತ್ನಿಸಿದ ಘಟನೆಗಳನ್ನು ಖಂಡಿಸಿ ಮಂಗಳವಾರ ರಾಜ್ಯಾದ್ಯಂತ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ವಕೀಲರಿಗೆ ಕಾನೂನು ರಕ್ಷಣೆ ಒದಗಿಸುವುದು ಮತ್ತು ವಕೀಲರ ಮೇಲಿನ ಹಿಂಸಾಚಾರ ತಡೆ ನಿಷೇಧ ಕಾಯಿದೆ–2023 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (ಕೆಎಸ್‌ಬಿಸಿ) ಅಧ್ಯಕ್ಷ ಆರ್ ರಾಜಣ್ಣ, ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ವಕೀಲರ ಸುರಕ್ಷತೆ ಖಚಿತಪಡಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಬೆಳಿಗ್ಗೆ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರ ಗುಂಪುಗಳು ನ್ಯಾಯಾಲಯದ ಕೊಠಡಿಗಳಿಗೆ ತೆರಳಿ, ಅಂದು ವಿಚಾರಣೆಗೆ ಪಟ್ಟಿ ಮಾಡಲಾಗಿದ್ದ ಪ್ರಕರಣಗಳಲ್ಲಿ ಪ್ರತಿಕೂಲ ಆದೇಶಗಳನ್ನು ಹೊರಡಿಸದಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಇದೇ ವೇಳೆ, ವಕೀಲರು ಕರ್ನಾಟಕ ಹೈಕೋರ್ಟ್‌ನ ಗೋಲ್ಡನ್ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಕೀಲ ಸಮುದಾಯದ ರಕ್ಷಣೆಯಲ್ಲಿ ವಿಫಲವಾಗಿರುವ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ವಕೀಲರ ಸಮಸ್ಯೆಗಳನ್ನು ಪರಿಗಣಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸುವಂತೆ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಎಚ್ ಶಾಂತಿ ಭೂಷಣ್ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

"ವಕೀಲರಿಗೆ ರಕ್ಷಣೆ ನೀಡಬೇಕು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಹಾಗೂ ವಕೀಲರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಬೇಕು ಎಂದು ಮನವಿ ಮಾಡಿದ್ದೇವೆ. ಪೊಲೀಸ್ ಠಾಣೆಗಳು ಸಮಾನಾಂತರ ಸಿವಿಲ್ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ವಿಷಯಗಳಿಂದ ಪೊಲೀಸರು ದೂರವಿರಬೇಕು. ಈಗ ಇನ್‌ಸ್ಪೆಕ್ಟರ್‌ಗಳೇ ಮುಖ್ಯ ನ್ಯಾಯಮೂರ್ತಿಗಳಾಗಿ, ನ್ಯಾಯಾಧೀಶರಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು," ಎಂದು ಅವರು ಹೇಳಿದರು.

ಕೆಎಸ್‌ಬಿಸಿ ಅಧ್ಯಕ್ಷ ಆರ್ ರಾಜಣ್ಣ ಮಾತನಾಡಿ, ರಾಜ್ಯ ವಕೀಲರ ಪರಿಷತ್ತು ಶಾಸನಬದ್ಧ ಸಂಸ್ಥೆಯಾಗಿರುವುದರಿಂದ ಬಂದ್‌ಗೆ ಕರೆ ನೀಡಲು ಅಥವಾ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಆದಾಗ್ಯೂ, ವಕೀಲರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಅವರು ಹೇಳಿದರು. ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವವರೆಗೆ ಜಾಮೀನು ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.

"ಬೆಂಗಳೂರು ವಕೀಲರ ಸಂಘವು ಉತ್ತಮ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ," ಎಂದು ಅವರು ತಿಳಿಸಿದರು.

2023ರ ಕಾಯಿದೆಗೆ ತಿದ್ದುಪಡಿ ತಂದು ವಕೀಲರ ಮೇಲಿನ ಅಪರಾಧಗಳನ್ನು ಜಾಮೀನು ರಹಿತಗೊಳಿಸುವುದು, ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ಮೇಲ್ವಿಚಾರಣೆ ವ್ಯವಸ್ಥೆ ರೂಪಿಸುವುದು ಹಾಗೂ ವಕೀಲರ ಮೇಲೆ ಹಲ್ಲೆ ಅಥವಾ ಕಿರುಕುಳ ನಡೆದಾಗ ಕೆಎಸ್‌ಬಿಸಿ ಅಥವಾ ವಕೀಲರ ಸಂಘಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸುವಂತೆ ರಾಜ್ಯ ವಕೀಲರ ಪರಿಷತ್ತು ಆಗ್ರಹಿಸುತ್ತಿದೆ ಎಂದು ರಾಜಣ್ಣ ಹೇಳಿದರು.

ಇದಲ್ಲದೆ, ವಕೀಲರ ಮೇಲಿನ ಅಪರಾಧಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವುದು ಹಾಗೂ ಇಂತಹ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.

ಆದರೆ, ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಸದಸ್ಯ ಧನಂಜಯ ಸಿಎಂ ಮಾತನಾಡಿ, ಪ್ರತಿಭಟನೆ ನಡೆಸಲು ಕೆಎಸ್‌ಬಿಸಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಕೀಲರು ವೈಯಕ್ತಿಕ ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಗಳು ಕೊನೆಯ ಆಯ್ಕೆಯಾಗಿರಬೇಕು. ಪ್ರತಿಯೊಂದು ಸಮಸ್ಯೆಗೂ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಭಟನೆ ನಡೆಸುವ ಬದಲು ವಕೀಲರು ಕಪ್ಪು ಪಟ್ಟಿ ಧರಿಸಿ, ಹಲ್ಲೆಗೊಳಗಾದ ವಕೀಲರ ಕುಟುಂಬಕ್ಕೆ ಒಂದು ದಿನದ ಗಳಿಕೆಯ ಅರ್ಧ ಭಾಗವನ್ನು ನೀಡಬಹುದಿತ್ತು ಎಂದು ಸಲಹೆ ನೀಡಿದರು.

ವಕೀಲರ ಮೇಲಿನ ಅಪರಾಧಗಳಿಗೆ ಶಿಕ್ಷೆ ಹೆಚ್ಚಿಸುವ ಬೇಡಿಕೆಯನ್ನು ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಪರಿಹರಿಸಬಹುದು ಎಂದು ಅವರು ಹೇಳಿದರು.

"ನಮ್ಮದೇ ಸರ್ಕಾರವಿದೆ. ಈ ಬೇಡಿಕೆಯನ್ನು ತಕ್ಷಣವೇ ಪರಿಹರಿಸಬಹುದು. ಆರೋಪ ಪಟ್ಟಿ ಸಲ್ಲಿಸುವವರೆಗೆ ಆರೋಪಿಗಳಿಗೆ ಜಾಮೀನು ನೀಡದಂತೆ ಕ್ರಮ ಕೈಗೊಳ್ಳಬಹುದು. ಈ ಕ್ರಮಗಳನ್ನು ತಕ್ಷಣ ಜಾರಿಗೊಳಿಸಲು ನಾವು ಪ್ರಯತ್ನಿಸುತ್ತೇವೆ," ಎಂದು ಧನಂಜಯ ತಿಳಿಸಿದರು.

ವಕೀಲ ಮಂಜುನಾಥ್ ಮತ್ತು ಶ್ರೀರಾಮ್ ಅವರ ಹತ್ಯೆ ಪ್ರಕರಣಗಳ ಆರೋಪಿಗಳನ್ನು ಹಾಗೂ ವಕೀಲ ಸಣ್ಣಕ್ಕಿ ಅವರ ಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನವೆಂಬರ್ 3ರಂದು ಸಲ್ಲಿಸಿದ ಮನವಿಯಲ್ಲಿ ಬೆಂಗಳೂರು ವಕೀಲರ ಸಂಘವು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸಿದೆ.

ಇತ್ತೀಚಿನ ಘಟನೆಗಳಿಂದ ವಕೀಲ ಸಮುದಾಯದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.

ಪೊಲೀಸ್ ಠಾಣೆಗಳಲ್ಲಿ ವಕೀಲರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವ ಬಗ್ಗೆಯೂ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಕಕ್ಷಿದಾರರ ಪರವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರಿಗೆ ಸೂಕ್ತ ಗೌರವ ನೀಡುತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಚರ್ಚೆ ನಡೆಸಲು ಕನಿಷ್ಠ ಕುಳಿತುಕೊಳ್ಳುವ ವ್ಯವಸ್ಥೆಯನ್ನೂ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದೆ.

ದೂರು ದಾಖಲಿಸಲು ಅಥವಾ ಕಕ್ಷಿದಾರರ ಪರವಾಗಿ ಪ್ರತಿನಿಧಿಸಲು ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರು ಹಾಗೂ ನಾಗರಿಕರನ್ನು ನಡೆಸಿಕೊಳ್ಳುವ ಬಗ್ಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಿ ಜಾರಿಗೊಳಿಸುವಂತೆ ಗೃಹ ಇಲಾಖೆಯನ್ನು ಆಗ್ರಹಿಸಿದೆ.

ಸಿವಿಲ್ ವಿವಾದಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು ಎಂದು ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರು ಎಸ್‌ಒಪಿ ರೂಪಿಸಿದ್ದರೂ, ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಅದನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸಂಘವು ಆರೋಪಿಸಿದೆ.

ಇಂತಹ ಕೃತ್ಯಗಳಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳು ಮತ್ತು ಪೊಲೀಸ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದೆ.

ಬೆಂಗಳೂರು ವಕೀಲರ ಸಂಘವು ಗೃಹ ಸಚಿವರ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ:

1.    ವಕೀಲರ ಹತ್ಯೆ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಬಂಧಿಸಿ, ದೋಷಿಗಳೆಂದು ಸಾಬೀತುಪಡಿಸಲು ಪರಿಣಾಮಕಾರಿಯಾಗಿ ವಿಚಾರಣೆ ನಡೆಸಬೇಕು.

2.    ವಕೀಲರ ರಕ್ಷಣಾ ಕಾಯಿದೆಯನ್ನು ಬಲಪಡಿಸಿ, ಜಾಮೀನು ರಹಿತ ಕಠಿಣ ನಿಬಂಧನೆಗಳನ್ನು ಸೇರಿಸಬೇಕು. ಕಾಯಿದೆಯಡಿ ದಾಖಲಾಗುವ ಅಪರಾಧಗಳಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತಾಗಬೇಕು.

3.    ದೂರು ದಾಖಲಿಸಲು ಅಥವಾ ಕಕ್ಷಿದಾರರ ಪರವಾಗಿ ಪ್ರತಿನಿಧಿಸಲು ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರು ಹಾಗೂ ನಾಗರಿಕರನ್ನು ನಡೆಸಿಕೊಳ್ಳುವ ಕುರಿತು ಎಸ್‌ಒಪಿ ರೂಪಿಸಿ ಜಾರಿಗೊಳಿಸಬೇಕು.

4.    ಸಿವಿಲ್ ವಿವಾದಗಳ ಇತ್ಯರ್ಥದಲ್ಲಿ ಪೊಲೀಸರು ಮಧ್ಯಪ್ರವೇಶಿಸದಂತೆ ಎಲ್ಲ ಪೊಲೀಸ್ ಠಾಣೆಗಳು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ನಿರ್ದೇಶನ ಉಲ್ಲಂಘಿಸುವವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.