ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 16ಕ್ಕೆ ನಿಗದಿಪಡಿಸಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ನಡೆಸಿತು.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಸೆಪ್ಟೆಂಬರ್ 8ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಲು ಇಂದು ಪ್ರಕರಣವನ್ನು ಪಟ್ಟಿ ಮಾಡಿತ್ತು. ನ್ಯಾಯಾಲಯ ಅವಕಾಶ ನೀಡಿದರೆ, ಇಂದೇ ವಾದ ಮಂಡಿಸಲು ಸಿದ್ಧವಿದ್ದೇನೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಹಾಗೂ ಗುಜರಾತ್ ಹೈಕೋರ್ಟ್‌ಗಳೂ ತೀರ್ಪು ನೀಡಿವೆ. ಜತೆಗೆ, ಪ್ರಕರಣದಲ್ಲಿ ಕಾಯಿದೆಯನ್ನು ಬೆಂಬಲಿಸಿ ಕೆಲ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿವೆ. ಈ ಎಲ್ಲ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಬಹುದಾಗಿದೆ” ಎಂದರು.
ಬಾಂಬೆ ಹೈಕೋರ್ಟ್ ಹಾಗೂ ಗುಜರಾತ್ ತೀರ್ಪುಗಳ ಬಗ್ಗೆ ಸರ್ಕಾರ ಹೇಳುತ್ತಿದೆ. ಆದರೆ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ನಾವು ವಾದ ಮಂಡಿಸಲಿದ್ದೇವೆ. ಅರ್ಜಿ ವಿಚಾರಣೆಗೆ ಯಾವುದಾದರೂ ಹತ್ತಿರದ ದಿನಾಂಕ ನಿಗದಿಪಡಿಸಬೇಕೆಂದು ರವಿವರ್ಮ ಕುಮಾರ್ ಮನವಿ ಮಾಡಿದರು.
ನಾವದಗಿ ಅವರು “ಜಾತಿ ಆಧಾರಿತ ನಿಗಮ-ಮಂಡಳಿ ರಚನೆ, ಆನ್‌ಲೈನ್ ಜೂಜಾಟ ನಿಷೇಧ ಪ್ರಶ್ನಿಸಿದ ಅರ್ಜಿಗಳೂ ಇದೇ ನ್ಯಾಯಾಲಯದ ಮುಂದಿದೆ. ಈ ಎಲ್ಲ ಪ್ರಕರಣಗಳು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, ಅವುಗಳಿಗೆ ಸಿದ್ಧತೆ ನಡೆಸಿಕೊಳ್ಳಬೇಕಿದೆ. ಜತೆಗೆ, ಸುಪ್ರೀಂ ಕೋರ್ಟ್‌ನಲ್ಲೂ ಕೆಲ ಪ್ರಮುಖ ಪ್ರಕರಣಗಳಿವೆ. ಹತ್ತಿರದ ದಿನಾಂಕ ನಿಗದಿಪಡಿಸಿದರೆ ನನಗೆ ಕೊಂಚ ಕಷ್ಟವಾಗಲಿದೆ. ಆದ್ದರಿಂದ, ಜನವರಿ ಮೊದಲ ವಾರದ ನಂತರ ಅರ್ಜಿ ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಕೋರಿದರು.
“ಜನವರಿ ಎಂದರೆ ಬಹಳ ವಿಳಂಬವಾಗುತ್ತದೆ. ಅರ್ಜಿ ಸಂಬಂಧ ನ್ಯಾಯಾಲಯ ಯಾವುದೇ ಮಧ್ಯಂತರ ಆದೇಶಗಳನ್ನೂ ನೀಡಿಲ್ಲ. ಆದ್ದರಿಂದ, ಆದಷ್ಟೂ ಶೀಘ್ರ ಅರ್ಜಿ ವಿಚಾರಣೆ ನಡೆಸಿ, ಇತ್ಯರ್ಥಪಡಿಸಬೇಕಿದೆ. ನಾವೇ ಮೊದಲು ವಾದ ಮಂಡಿಸಲು ಸಿದ್ಧರಿದ್ದೇವೆ” ಎಂದು ರವಿವರ್ಮ ಕುಮಾರ್ ತಿಳಿಸಿದರು.
ಇದನ್ನು ಪರಿಗಣಿಸಿದ ಪೀಠವು ಡಿಸೆಂಬರ್ ಮೂರನೇ ವಾರದಲ್ಲಿ ಅರ್ಜಿ ವಿಚಾರಣೆಗೆ ನಿಗದಿಪಡಿಸಲಾಗುವುದು. ಒಂದು ವೇಳೆ ಅಡ್ವೊಕೇಟ್ ಜನರಲ್‌ಗೆ ವಾದ ಮಂಡಿಸಲು ಸಾಧ್ಯವಾಗದಿದ್ದರೆ ಆಗ ನೋಡೋಣ. ಮೊದಲು ಅರ್ಜಿದಾರರೇ ವಾದ ಮಂಡನೆ ಆರಂಭಿಸಲಿ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳನ್ನೂ ಆಲಿಸುವುದಾಗಿ ತಿಳಿಸಿ, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.