ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ ಮಾರ್ಚ್ 11ಕ್ಕೆ
ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) 23 ನೂತನ ಪದಾಧಿಕಾರಿಗಳ ಆಯ್ಕೆಗೆ 2026ರ ಮಾರ್ಚ್ 11ರಂದು ಚುನಾವಣೆ ಘೋಷಿಸಲಾಗಿದೆ. ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಈ ಕುರಿತಂತೆ ಜನವರಿ 5ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಮಾರ್ಚ್ 11ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಜ್ಯದ ವಿವಿಧೆಡೆಯ ಒಟ್ಟು 194 ಸೂಚಿತ ಸ್ಥಳಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರು ನಗರದಲ್ಲಿ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ಮತದಾನ ಜರುಗಲಿದೆ.
ವಕೀಲರ ವರ್ಗದಲ್ಲಿನ 18 ಮತ್ತು ಮಹಿಳೆಯರ ಕೋಟಾದಡಿಯ 7 ಸೀಟುಗಳೂ ಸೇರಿದಂತೆ ಒಟ್ಟು 25 ಜನ ಸದಸ್ಯರನ್ನು ಕೆಎಸ್‌ಬಿಸಿ ಹೊಂದಿದೆ. ಇವರಲ್ಲಿ ಇಬ್ಬರನ್ನು ಭಾರತೀಯ ವಕೀಲರ ಪರಿಷತ್ (ಬಿಸಿಐ) ಮುಖಾಂತರ ನಾಮನಿರ್ದೇಶನ ಮಾಡಲಾಗುತ್ತದೆ. ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರಗಳನ್ನು ಬೆಂಗಳೂರಿನ ರಾಜ್ಯ ವಕೀಲರ ಪರಿಷತ್ ಕಚೇರಿಯಲ್ಲಿ ಪಡೆಯಬಹುದಾಗಿದ್ದು ನಾಮಪತ್ರ ಸಲ್ಲಿಕೆಗೆ 2026ರ ಫೆಬ್ರುವರಿ 10 ಕಡೆಯ ದಿನವಾಗಿರುತ್ತದೆ.
ಒಟ್ಟು ಐದು ಹಂತಗಳಲ್ಲಿ ದೇಶಾದ್ಯಂತ ಚುನಾವಣೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮೂರನೇ ಹಂತದಲ್ಲಿ, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕರ್ನಾಟಕ, ಗುಜರಾತ್, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಚುನಾವಣೆಗಳು ಮಾರ್ಚ್ 15, 2026 ರೊಳಗೆ ಪೂರ್ಣಗೊಳ್ಳಬೇಕು ಎಂದು ಕಳೆದ ವರ್ಷ ನಿರ್ದೇಶಿಸಿತ್ತು.
ಉನ್ನತ ಅಧಿಕಾರ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಎಣಿಕೆ ಕಾರ್ಯ ನಡೆಯಬೇಕು. ಪ್ರಾದೇಶಿಕ ಸಮಿತಿಯ ನಿರ್ಧಾರಕ್ಕೆ ಆಕ್ಷೇಪ ಇದ್ದರೆ ರಾಷ್ಟ್ರೀಯ ಉನ್ನತ ಅಧಿಕಾರದ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು. ಅದರ ತೀರ್ಮಾನವೇ ಅಂತಿಮ. ಇದನ್ನು ಪ್ರಶ್ನಿಸುವ ಅರ್ಜಿಗಳನ್ನು ಸಿವಿಲ್ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಸ್ವೀಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.


