ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಕೀಲರ ಪರಿಷತ್ ಚುನಾವಣೆ: ವೇಳಾಪಟ್ಟಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌

17 ರಾಜ್ಯಗಳ ವಕೀಲರ ಪರಿಷತ್‌ ಚುನಾವಣೆಗಳು 2026ರ ಜನವರಿಯಿಂದ ಏಪ್ರಿಲ್‌ವರೆಗೆ ಐದು ಹಂತಗಳಲ್ಲಿ ನಡೆಯಲಿವೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗಳು ಚುನಾವಣೆಯ ಮೇಲ್ವಿಚಾರಣೆ ನಡೆಯಲಿವೆ.
Bar Elections
Bar Elections
Published on

ಕರ್ನಾಟಕವೂ ಸೇರಿದಂತೆ ಬಹುಪಾಲು ರಾಜ್ಯಗಳಲ್ಲಿ ವಕೀಲರ ಪರಿಷತ್‌ನ ಚುನಾವಣೆಗಳು ವರ್ಷಗಳ ಕಾಲ ವಿಳಂಬವಾಗಿರುವುದಕ್ಕೆ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಚುನಾವಣೆ ನಡೆಸುವುದಕ್ಕೆ ಕಟ್ಟುನಿಟ್ಟಾದ, ರಾಷ್ಟ್ರವ್ಯಾಪಿ ವೇಳಾಪಟ್ಟಿ ನಿಗದಿಪಡಿಸಿದೆ. ಇಡೀ ಪ್ರಕ್ರಿಯೆಯನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಹೇಳಿದೆ [ ಎಂ ವರದನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಉಜ್ಜಲ್ ಭುಯಾನ್ ಮತ್ತು ಎನ್‌ ಕೆ ಸಿಂಗ್ ಅವರಿದ್ದ ಪೀಠ,  ಅವಧಿ ಪೂರ್ಣಗೊಳ್ಳದ ವಕೀಲರ ಪರಿಷತ್ತುಗಳನ್ನು ಹೊರತುಪಡಿಸಿ, ಉಳಿದ ಪರಿಷತ್ತುಗಳ ಚುನಾವಣೆಗಳನ್ನು ಜನವರಿಯಿಂದ  ಏಪ್ರಿಲ್ 2026ರ ನಡುವೆ ಹಂತ ಹಂತವಾಗಿ ಪೂರ್ಣಗೊಳಿಸಬೇಕು. ಇನ್ನು ಗಡುವು ವಿಸ್ತರಿಸುವುದಿಲ್ಲ ಎಂದು ಹೇಳಿದೆ.

Also Read
ರಾಜ್ಯ ವಕೀಲರ ಪರಿಷತ್‌ ನೂತನ ಅಧ್ಯಕ್ಷರಾಗಿ ಎಸ್‌ ಎಸ್‌ ಮಿತ್ತಲಕೋಡ್‌ ನಾಮನಿರ್ದೇಶನ

ಮೊದಲ ಹಂತದಲ್ಲಿ, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ಜನವರಿ 31, 2026 ರೊಳಗೆ ಚುನಾವಣೆಗಳು ಮುಕ್ತಾಯಗೊಳ್ಳಬೇಕು.  ಎರಡನೇ ಹಂತದಲ್ಲಿ, ಆಂಧ್ರಪ್ರದೇಶ, ದೆಹಲಿ, ತ್ರಿಪುರ ಮತ್ತು ಪುದುಚೇರಿಯಲ್ಲಿ ಫೆಬ್ರವರಿ 28, 2026 ರೊಳಗೆ ಚುನಾವಣೆ ಪೂರ್ಣಗೊಳ್ಳಬೇಕು.ಮೂರನೇ ಹಂತದಲ್ಲಿ, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕರ್ನಾಟಕ, ಗುಜರಾತ್ ಮತ್ತು ಪಂಜಾಬ್ ಮತ್ತು ಹರಿಯಾಣಗಳಲ್ಲಿ ಚುನಾವಣೆಗಳು ಮಾರ್ಚ್ 15, 2026 ರೊಳಗೆ ಪೂರ್ಣಗೊಳ್ಳಬೇಕು.ನಾಲ್ಕನೇ ಹಂತದಲ್ಲಿ, ಮೇಘಾಲಯ ಮತ್ತು ಮಹಾರಾಷ್ಟ್ರದಲ್ಲಿ ಮಾರ್ಚ್ 31, 2026 ರೊಳಗೆ ಚುನಾವಣೆ ನಡೆಯಬೇಕು.  ಐದನೇ ಹಂತದಲ್ಲಿ, ತಮಿಳುನಾಡು, ಕೇರಳ ಮತ್ತು ಅಸ್ಸಾಂನಲ್ಲಿ ಏಪ್ರಿಲ್ 30, 2026 ರೊಳಗೆ ಚುನಾವಣೆ ನಡೆಸಬೇಕು ಎಂದು ಅದು ಹೇಳಿದೆ.

Also Read
ಕೆಎಸ್‌ಬಿಸಿ ಚುನಾವಣೆ: ಭಾರತೀಯ ವಕೀಲರ ಪರಿಷತ್‌, ಕೆಎಸ್‌ಬಿಸಿಗೆ ಹೈಕೋರ್ಟ್‌ ತುರ್ತು ನೋಟಿಸ್‌

ನವೆಂಬರ್ 20 ರಿಂದ ಮತದಾರರ ಪಟ್ಟಿಯ ತಯಾರಿಕೆ ಆರಂಭಿಸಿ 15 ದಿನಗಳ ಒಳಗೆ ಅದನ್ನು ಪ್ರಕಟಿಸಬೇಕು. ಆಕ್ಷೇಪಣೆ ಸಲ್ಲಿಸಲು 7 ದಿನ; ನಾಮಪತ್ರ ಸಲ್ಲಿಸಲು 7 ದಿನ ಅಂತಿಮ ಪಟ್ಟಿ ಪ್ರಕಟಣೆಗೆ 1 ದಿನ, ಹಿಂಪಡೆಯಲು 3 ದಿನ ಹಾಗೂ ಪ್ರಾಶಸ್ತ್ಯ-ಮತದ ಚುನಾವಣೆಗೆ 20 ದಿನ ಕಾಲಾವಕಾಶ ಇರಲಿದೆ.

ಉನ್ನತ ಅಧಿಕಾರ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಎಣಿಕೆ ಕಾರ್ಯ ನಡೆಯಬೇಕು. ಪ್ರಾದೇಶಿಕ ಸಮಿತಿಯ ನಿರ್ಧಾರಕ್ಕೆ ಆಕ್ಷೇಪ ಇದ್ದರೆ ರಾಷ್ಟ್ರೀಯ ಉನ್ನತ ಅಧಿಕಾರದ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು. ಅದರ ತೀರ್ಮಾನವೇ ಅಂತಿಮ. ಇದನ್ನು ಪ್ರಶ್ನಿಸುವ ಅರ್ಜಿಗಳನ್ನು ಸಿವಿಲ್‌ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಸ್ವೀಕರಿಸಬಾರದು ಎಂದು ಅದು ಹೇಳಿದೆ.

Kannada Bar & Bench
kannada.barandbench.com