ಪೊಲೀಸ್‌, ನ್ಯಾಯಾಂಗ, ಜೈಲು ನಿರ್ವಹಣೆ, ಕಾನೂನು ನೆರವು ಒಳಗೊಂಡ ನ್ಯಾಯದಾನದಲ್ಲಿ ಕರ್ನಾಟಕ ನಂ.1: ಐಜೆಆರ್‌ ವರದಿ

ರಾಜ್ಯವು ಪೊಲೀಸ್‌ ವ್ಯವಸ್ಥೆಯಲ್ಲಿ 6.19, ಕಾರಾಗೃಹ ವ್ಯವಸ್ಥೆಗೆ 6.78, ನ್ಯಾಯಾಂಗ ಸೇವೆಗೆ 6.7, ಕಾನೂನು ನೆರವಿಗೆ 7.52 ಅಂಕ ಪಡೆದಿದೆ. ನ್ಯಾಯಾಂಗ ಸೇವಾ ವಿಭಾಗದಲ್ಲಿ 4ನೇ ಸ್ಥಾನ ಮತ್ತು ಕಾನೂನು ನೆರವಿನ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದೆ.
IJR 2025
IJR 2025
Published on

ನ್ಯಾಯದಾನ ವ್ಯವಸ್ಥೆಗಳಾದ ಪೊಲೀಸ್‌, ನ್ಯಾಯಾಂಗ, ಜೈಲು ನಿರ್ವಹಣೆ ಮತ್ತು ಕಾನೂನು ನೆರವುಗಳ ವಿಚಾರದಲ್ಲಿ ಕರ್ನಾಟಕವು ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಭಾರತ ನ್ಯಾಯ ವರದಿ 2025 (ಇಂಡಿಯಾ ಜಸ್ಟೀಸ್‌ ರಿಪೋರ್ಟ್‌) ಹೇಳಿದೆ.

ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸ್ಪಷ್ಟ ಮೇಲುಗೈ ಸಾಧಿಸಿರುವುದನ್ನು ವರದಿಯು ಬಹಿರಂಗಗೊಳಿಸಿದೆ.

ಒಟ್ಟು10 ಅಂಕಗಳ ಪೈಕಿ 6.78 ಅಂಕ ಪಡೆದಿರುವ ಕರ್ನಾಟಕವು ಪ್ರಥಮ ಸ್ಥಾನಿಯಾಗಿದ್ದು, ಆನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಬಳಿಕ ಉತ್ತರ ಭಾರತದ ರಾಜ್ಯಗಳು ಸ್ಥಾನ ಪಡೆದಿವೆ.

ಪೊಲೀಸ್‌ ವ್ಯವಸ್ಥೆ ಕರ್ನಾಟಕವು 6.19, ಕಾರಾಗೃಹ ವ್ಯವಸ್ಥೆಗೆ 6.78, ನ್ಯಾಯಾಂಗ ಸೇವೆಗೆ 6.7 ಹಾಗೂ ಕಾನೂನು ನೆರವಿಗೆ 7.52 ಅಂಕ ಪಡೆದಿದೆ.

ನ್ಯಾಯಾಂಗ ಸೇವಾ ವಿಭಾಗದಲ್ಲಿ 4ನೇ ಸ್ಥಾನ ಪಡೆದಿರುವ ಕರ್ನಾಟಕವು ಕಾನೂನು ನೆರವಿನ ವಿಚಾರದಲ್ಲಿ ಅಗ್ರಸ್ಥಾನಿಯಾಗಿದೆ.

Also Read
ಇಂಡಿಯಾ ಜಸ್ಟೀಸ್‌ ರಿಪೋರ್ಟ್ 2022: ದೊಡ್ಡ ರಾಜ್ಯಗಳಲ್ಲಿ ತಮಿಳುನಾಡು, ಚಿಕ್ಕ ರಾಜ್ಯಗಳಲ್ಲಿ ಸಿಕ್ಕಿಂಗೆ ಅಗ್ರಸ್ಥಾನ

2022ಕ್ಕೆ ಹೋಲಿಕೆ ಮಾಡಿದರೆ 2025ರಲ್ಲಿ ಜಿಲ್ಲಾ ನ್ಯಾಯಾಧೀಶರ ಖಾಲಿ ಹುದ್ದೆಗಳನ್ನು ಶೇ 22ರಿಂದ ಶೇ.16ಕ್ಕೆ ಇಳಿಕೆ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ಪ್ರಮಾಣವು ಶೇ. 37ರಷ್ಟಿದೆ. ಹೈಕೋರ್ಟ್‌ನಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯನ್ನು ಶೇ. 26ರಿಂದ ಶೇ.17ಕ್ಕೆ ಇಳಿಸಲಾಗಿದೆ. ನ್ಯಾಯಾಂಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹುದ್ದೆಗಳನ್ನು ತುಂಬಿದ ಏಕಮಾತ್ರ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ.

ಕಾನೂನು ನೆರವು ನೀಡುವುದಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಅತಿ ಹೆಚ್ಚು ಪ್ಯಾನಲ್‌ ವಕೀಲರನ್ನು ನೇಮಿಸಿದ್ದು, ಈ ವಿಭಾಗದಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ ಎಂದು ವರದಿ ವಿವರಿಸಿದೆ.

ವರದಿಯ ಬಗ್ಗೆ: ಇಂಡಿಯಾ ಜಸ್ಟೀಸ್‌ ವರದಿಯನ್ನು ಟಾಟಾ ಟ್ರಸ್ಟ್‌ ಸಂಸ್ಥೆಯು ಬಿಡುಗಡೆಗೊಳಿಸುತ್ತದೆ. ವಿವಿಧ ಕಾನೂನು ಸೇವಾ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳು ವರದಿಯನ್ನು ರೂಪಿಸುವಲ್ಲಿ ಶ್ರಮಿಸುತ್ತವೆ. ಪ್ರಸ್ತುತ ವರದಿಯ ನಾಲ್ಕನೇ ಆವೃತ್ತಿಯಾಗಿದೆ.

ದೇಶದ ಪ್ರಜಾಸತ್ತಾತ್ಮಕತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ, ಕಾನಾನಾತ್ಮಕ ಆಡಳಿತ, ಸಮಾನ ಹಕ್ಕುಗಳ ಭರವಸೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ನ್ಯಾಯಾಂಗದ ಸುಧಾರಣೆಯು ಅತ್ಯವಶ್ಯಕವಾಗಿದೆ ಎನ್ನುವ ಅರಿವಿನಡಿ ವರದಿಯನ್ನು ರೂಪಿಸಲಾಗಿದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಮುಖ ನಾಲ್ಕು ಸ್ತಂಭಗಳಾದ ಪೊಲೀಸ್‌, ನ್ಯಾಯಾಂಗ, ಜೈಲು ನಿರ್ವಹಣೆ ಮತ್ತು ಕಾನೂನು ನೆರವುಗಳ ವಿಚಾರದಲ್ಲಿ ವಿವಿಧ ರಾಜ್ಯಗಳ ಸಾಧನೆಯನ್ನು ವರದಿಯು ಅನಾವರಣಗೊಳಿಸುತ್ತದೆ.

Kannada Bar & Bench
kannada.barandbench.com