ಕನಿಷ್ಠ ಒಂದು ಡೋಸ್‌ ಪಡೆದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮಾತ್ರ ಶಾಲಾ, ಕಾಲೇಜು ಪ್ರವೇಶಕ್ಕೆ ಅವಕಾಶ: ಹೈಕೋರ್ಟ್‌

“ಲಸಿಕೆ ಪಡೆಯುವುದಿಲ್ಲ ಎಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ” ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ಏರುಧ್ವನಿಯಲ್ಲಿ ಹೇಳಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ.
Karnataka HC, COVID-19
Karnataka HC, COVID-19

ಲಸಿಕೆ ಪಡೆಯದ ವಿದ್ಯಾರ್ಥಿ, ಶಿಕ್ಷಕರು ಅಥವಾ ಸಿಬ್ಬಂದಿಯನ್ನು ಶಾಲೆ ಅಥವಾ ಕಾಲೇಜಿಗೆ ಪ್ರವೇಶಿಸಲು ಅನುಮತಿಸಲಾಗದು ಎಂದು ಶನಿವಾರ ಕರ್ನಾಟಕ ಹೈಕೋರ್ಟ್‌ ಖಂಡತುಂಡವಾಗಿ ಹೇಳಿದೆ.

ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ್‌ ಕಕ್ಕಿಲ್ಲಾಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯನ್ನು ವಜಾ ಮಾಡಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಮೇಲಿನಂತೆ ಹೇಳಿತು.

ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಜುಲೈ 16ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯು ಸಂವಿಧಾನದ 14 ಮತ್ತು 19 (1) (ಜಿ) ವಿಧಿಯಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲುಎಚ್‌ಒ) ಲಸಿಕೆ ಪಡೆಯುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸಾಂಕ್ರಾಮಿಕ ಹಬ್ಬುವುದನ್ನು ತಡೆಯಲಾಗದು. ಸಾಂಕ್ರಾಮಿಕ ತಡೆಯುವಲ್ಲಿ ಅಥವಾ ಸಾರ್ವಜನಿಕ ಆರೋಗ್ಯ ರಕ್ಷಿಸುವಲ್ಲಿ ಲಸಿಕೆ ಅಷ್ಟು ಶಕ್ತಿಯುತವಾಗಿಲ್ಲ ಎಂದು ಹೇಳಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ವ್ಯಕ್ತಿಯೊಬ್ಬರು ಲಸಿಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಸಮರ್ಥನೀಯ ವರ್ಗೀಕರಣದ ತಾರತಮ್ಯದಿಂದಾಗಿ ವ್ಯಕ್ತಿಯು ತನ್ನ ಇಚ್ಛೆಯ ವೃತ್ತಿ ಕೈಗೊಳ್ಳುವ ಹಕ್ಕನ್ನು ಕಸಿಯಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ರಾಜ್ಯ ಸರ್ಕಾರದ ಸುತ್ತೋಲೆಯು ಕಾಮನ್‌ ಕಾಸ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ತಮ್ಮ ಇಚ್ಛೆಯ ಔಷಧ ಪಡೆಯುವ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ವ್ಯಕ್ತಿ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ.
ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ

ಅರ್ಜಿದಾರರ ಆಕ್ಷೇಪಗಳನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಾಲಯವು “ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಪಾರವಾಗಿ ನೆರೆಯುವುದರಿಂದ ಲಸಿಕೆ ಪಡೆಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಶಾಲೆ ಅಥವಾ ಕಾಲೇಜು ಪ್ರವೇಶಿಸಲು ಅನುಮತಿಸುವ ಮೂಲಕ ಉಳಿದವರನ್ನು ಅಪಾಯಕ್ಕೆ ಸಿಲುಕಿಸಲಾಗದು ಎಂಬುದು ನಮ್ಮ ಖಚಿತ ಅಭಿಪ್ರಾಯವಾಗಿದೆ. ಜುಲೈ 16ರ ಸರ್ಕಾರದ ಸುತ್ತೋಲೆಗೆ ಸಂಬಂಧಿಸಿದಂತೆ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆಯದ ಶಿಕ್ಷಕರು, ವಿದ್ಯಾರ್ಥಿಗಳು ಅಥವಾ ಸಿಬ್ಬಂದಿಯನ್ನು ಶಾಲೆ ಅಥವಾ ಕಾಲೇಜಿಗೆ ಪ್ರವೇಶಿಸಲು ಅನುಮತಿಸಲಾಗದು” ಎಂದು ಸ್ಪಷ್ಟವಾಗಿ ಹೇಳಿತು.

ವಿಚಾರಣೆಯ ಸಂದರ್ಭದಲ್ಲಿ ಕಕ್ಕಿಲಾಯ ಅವರನ್ನು ಪ್ರತಿನಿಧಿಸಿದ್ದ ವಕೀಲರು “ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡಬಾರದು. ಕಾಲೇಜಿಗೆ ತೆರಳಲು ಅವರಿಗೆ ಅವಕಾಶ ಮಾಡಿಕೊಡಬೇಕು” ಎಂದರು. ಇದಕ್ಕೆ ಪೀಠವು “ಲಸಿಕೆ ಪಡೆಯುವುದಿಲ್ಲ ಎಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ” ಎಂದು ಮೌಖಿಕವಾಗಿ ಏರುಧ್ವನಿಯಲ್ಲಿ ಹೇಳಿತು.

ಆಸ್ಪತ್ರೆಗಳಿಂದ 73 ಲಕ್ಷ ರೂಪಾಯಿ  ಮರು ಪಾವತಿ

ಕೋವಿಡ್‌ ಸೋಂಕಿತರಿಗೆ ಹೆಚ್ಚುವರಿಯಾಗಿ ಶುಲ್ಕ ವಿಧಿಸಿದ್ದ 303 ಆಸ್ಪತ್ರೆಗಳು ಒಟ್ಟಾರೆ 73.28 ಲಕ್ಷ ರೂಪಾಯಿ ಮರುಪಾವತಿ ಮಾಡಿವೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಕೋವಿಡ್‌ ಸೋಂಕಿತರಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಬಿಎಂಪಿಗೆ ನ್ಯಾಯಾಲಯವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಕ್ಕೆ ಸಂಬಂಧಿಸಿದಂತೆ 343 ಆಸ್ಪತ್ರೆಗಳ ವಿರುದ್ಧ 1,715 ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಬೇಕಿದ್ದ 10.2 ಕೋಟಿ ರೂಪಾಯಿ ತಡೆ ಹಿಡಿಯಲಾಗಿದ ಎಂದು ಸರ್ಕಾರಿ ವಕೀಲರು ಪೀಠಕ್ಕೆ ವಿವರಿಸಿದರು.

ಚಿಕಿತ್ಸೆಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪ ಸಾಬೀತಾದ ಆಸ್ಪತ್ರೆಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮವನ್ನು ವಿವರಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಬಿಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಆಸ್ಪತ್ರೆ ಮೂಲಸೌಕರ್ಯ, ಹಾಸಿಗೆಗಳ ಲಭ್ಯತೆ, ವಿಶೇಷ ಚೇತನರಿಗೆ ಲಸಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಹಲವು ಮನವಿಗಳನ್ನು ಪೀಠವು ವಿಲೇವಾರಿ ಮಾಡಿತು. “ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಅಗತ್ಯಬಿದ್ದರೆ ಮತ್ತೆ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಲ್ಪಿಸಿ ಸದರಿ ಮನವಿಗಳನ್ನು ವಿಲೇವಾರಿ ಮಾಡುತ್ತಿದ್ದೇವೆ” ಎಂದು ಪೀಠ ಹೇಳಿದೆ.

Also Read
ಕೋವಿಡ್‌ ಪರಿಹಾರ: ಆನ್‌ಲೈನ್‌ ಪೋರ್ಟಲ್‌ ಆರಂಭಿಸಿ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಸುಪ್ರೀಂ ಸೂಚನೆ

ಬಾಕಿ ಇರುವ ಮನವಿಗಳಿಗೆ ಸಂಬಂಧಿಸಿದಂತೆ ಅವುಗಳ ಪ್ರಸ್ತುತತೆ ಕುರಿತು ವಿಸ್ತೃತವಾದ ಪಟ್ಟಿಯನ್ನು ಸಲ್ಲಿಸುವಂತೆ ಅಮಿಕಸ್‌ ಕ್ಯೂರಿ ಹಾಗೂ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 27ಕ್ಕೆ ಮುಂದೂಡಿದೆ.

ಅರ್ಜಿದಾರರ ಪರವಾಗಿ‌ ವಕೀಲರಾದ ಪುತ್ತಿಗೆ ರಮೇಶ್‌, ಜಿ ಆರ್ ಮೋಹನ್‌, ಅಶ್ವಿನಿ ಓಬಳೇಶ್‌, ನಾರಾಯಣ್‌ ಭಟ್‌, ಕ್ಲಿಫ್ಟನ್‌ ರೋಜಾರಿಯೊ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಸರ್ಕಾರದ ಪರವಾಗಿ ವಕೀಲ ಶಿವಕುಮಾರ್‌, ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com