ಕೋವಿಡ್‌ ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ: ಹಣ ಮರಳಿಸಿದ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಶುಲ್ಕ ವಿಧಿಸಿದ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರು ದೂರು ದಾಖಲಿಸುವ ಸಂಬಂಧ ಬಿಬಿಎಂಪಿಯು ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಸೂಚಿಸಿದ ನ್ಯಾಯಾಲಯ.
ಕೋವಿಡ್‌ ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ: ಹಣ ಮರಳಿಸಿದ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ
Karnataka HC, COVID-19

ಕೋವಿಡ್‌ ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸಿದ್ದ ಆಸ್ಪತ್ರೆಗಳ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸುವಂತೆ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಹಲವು ಸಾರ್ಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದ ಹಣವನ್ನು ರೋಗಿಗಳಿಗೆ ಮರಳಿಸಲಾಗಿದೆಯೇ ಎಂಬುದರ ಮಾಹಿತಿಯನ್ನು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ತಿಳಿಸುವಂತೆ ಪೀಠವು ಆದೇಶ ಮಾಡಿದೆ.

“ಮೂರನೇ ಪ್ರತಿವಾದಿಯ ಅನುಬಂಧ ಮತ್ತು ಸರ್ಕಾರವು ಇಂದು ಸಲ್ಲಿಸಿರುವ ಅನುಪಾಲನಾ ವರದಿಯ ಪ್ರಕಾರ ಕೋವಿಡ್‌ ರೋಗಿಗಳಿಗೆ ಶುಲ್ಕ ವಿಧಿಸಬಾರದ ಆಸ್ಪತ್ರೆಗಳು ಶುಲ್ಕ ವಿಧಿಸಿವೆ. ಕೆಲವು ಆಸ್ಪತ್ರೆಗಳಿಗೆ ವಿಧಿಸಿಲಾದ ಶುಲ್ಕವನ್ನು ಮರಳಿಸುವಂತೆ ಆದೇಶ ಮಾಡಲಾಗಿದೆ ಎಂಬುದರತ್ತ ಮಧ್ಯಪ್ರವೇಶ ಮನವಿ ಸಲ್ಲಿಸಿದ್ದವರ ಪರ ವಕೀಲ ಶ್ರೀಧರ್‌ ಪ್ರಭು ಬೆರಳು ಮಾಡಿದ್ದಾರೆ. ಹೆಚ್ಚು ಶುಲ್ಕ ವಿಧಿಸಿದ್ದು ಸಾಬೀತಾಗಿರುವ ಆಸ್ಪತ್ರೆಗಳ ವಿರುದ್ಧ ಪಾಲಿಕೆ/ಸರ್ಕಾರ ಯಾವ ಕ್ರಮಕೈಗೊಂಡಿದೆ ಮತ್ತು ಹೆಚ್ಚಿಗೆ ಶುಲ್ಕ ಪಡೆದಿರುವುದನ್ನು ಮರಳಿಸಲಾಗಿದೆಯೇ ಎಂಬುದನ್ನು ತಿಳಿಸಬೇಕು” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಕೋವಿಡ್‌ ರೋಗಿಗಳಿಂದ ಹೆಚ್ಚು ಹಣ ಸಂಗ್ರಹಿಸಿದ ಆಸ್ಪತ್ರೆಗಳು ಮತ್ತು ಸರ್ಕಾರ ಸೂಚಿಸಿದ್ದ ರೋಗಿಗಳಿಂದ ಹೆಚ್ಚು ಶುಲ್ಕ ಪಡೆದಿರುವ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದೆ. ಖಾಸಗಿ ಆಸ್ಪತ್ರೆಗಳು 1,98,83,498 ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಿದ್ದು,ಇದು ವರೆಗೆ 32,22,352 ರೂಪಾಯಿಗಳನ್ನು ಮರಳಿಸಿವೆ ಎಂದು ತಿಳಿಸಲಾಗಿದೆ.

ಖಾಸಗಿ ಕೋವಿಡ್‌ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು1,55,91,845 ರೂಪಾಯಿ ಸಂಗ್ರಹಿಸಿದ್ದು, ಇದುವರೆಗೆ 10,42,339 ರೂಪಾಯಿ ಪಾವತಿಸಿವೆ. ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿಗೆ ಹಣ ಪಾವತಿಸಲಾಗಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಸಹಾಯವಾಣಿಗೆ 1,325 ದೂರು ಬಂದಿವೆ ಎಂದು ಸರ್ಕಾರ ತಿಳಿಸಿದೆ.

“ರೋಗಿಗೆ ಕೋವಿಡ್‌ ಸೋಂಕು ತಗುಲಿದರೆ ಬಿಬಿಎಂಪಿಯು ಬಿಯು ಸಂಖ್ಯೆಯನ್ನು ಬಿಡುಗಡೆ ಮಾಡುತ್ತದೆ. ಬಿಯು ನಂಬರ್‌ ಆಧರಿಸಿ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದ ಅಡಿ ಬೆಡ್‌ ಹಂಚಿಕೆಯಾಗುತ್ತದೆ. ಸರ್ಕಾರದ ಕೋಟಾದಡಿ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲಾಗುವ ಚಿಕಿತ್ಸೆ ಸರ್ಕಾರ ಪೂರೈಸುವ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಸೇರಿದಂತೆ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ರೋಗಿಯು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಇದು ಎಲ್ಲಾ ಬಡತನ ರೇಖೆಗಿಂತ ಕೆಳಗಿರುವವರು, ಎಪಿಎಲ್‌ ಕಾರ್ಡ್‌ ಹೊಂದಿರುವವರು, ವಲಸೆ ಕಾರ್ಮಿಕರು, ಅಂತರರಾಜ್ಯಗಳಿಂದ ಮರಳಿರುವ ಎಲ್ಲ ಅರ್ಹರಿಗೂ ಇದು ಅನ್ವಯಿಸುತ್ತದೆ” ಎಂದು ಹೇಳಲಾಗಿದೆ.

“ಖಾಸಗಿ ಆಸ್ಪತ್ರೆಯಲ್ಲಿ ಖಾಸಗಿ ರೋಗಿಯಾಗಿ ನಗದು ಆಧಾರಿತವಾಗಿ ಚಿಕಿತ್ಸೆಯನ್ನು ರೋಗಿಯು ಪಡೆದರೆ ಸರ್ಕಾರದ ನಿಗದಿಪಡಿಸಿದ ಶುಲ್ಕವನ್ನು ರೋಗಿಯೇ ಪಾವತಿಸಬೇಕಾಗುತ್ತದೆ. ದಿನಕ್ಕೆ ಸಾಮಾನ್ಯ ವಾರ್ಡ್‌ಗೆ ಹತ್ತು ಸಾವಿರ ರೂಪಾಯಿ, ವೆಂಟಿಲೇಟರ್‌ ಇಲ್ಲದ ಐಸಿಯುಗೆ ಹದಿನೈದು ಸಾವಿರ ರೂಪಾಯಿ, ಎಚ್‌ಡಿಯುಗೆ ಹನ್ನೆರಡು ಸಾವಿರ ರೂಪಾಯಿ, ವೆಂಟಿಲೇಟರ್‌ ಒಳಗೊಂಡ ಐಸಿಯುಗೆ ಇಪ್ಪತ್ತೈದು ಸಾವಿರ ರೂಪಾಯಿ ಪಾವತಿಸಬೇಕು” ಎಂದು ಹೇಳಲಾಗಿದೆ.

“ಸರ್ಕಾರ ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಹೆಚ್ಚಿನ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವಂತಿಲ್ಲ. ಯಾವುದಾದರೂ ಆಸ್ಪತ್ರೆಯು ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದರೆ ಅಂಥ ಆಸ್ಪತ್ರೆಯ ವಿರುದ್ಧ ಕೆಪಿಎಂಇ ಕಾಯಿದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ ಅಡಿ ಕ್ರಮಕೈಗೊಳ್ಳಬಹುದಾಗಿದೆ. ಖಾಸಗಿ ಆಸ್ಪತ್ರೆಯು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಥವಾ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದರೆ ಸಹಾಯವಾಣಿ1800 425 8330 ಮತ್ತು sastgrievance@gmail.com ಮೂಲಕ ದೂರು ನೀಡಬಹುದಾಗಿದೆ” ಎಂದು ಹೇಳಿದೆ.

ಜನರು ತಮ್ಮ ಅಹವಾಲು ಸಲ್ಲಿಸುವುದಕ್ಕೆ ಸಂಬಂಧಿಸಿದ ವ್ಯವಸ್ಥೆಗೆ ಹೆಚ್ಚಿನ ಪ್ರಚಾರವನ್ನು ನೀಡಲಾಗಿಲ್ಲ ಎಂದು ವಕೀಲ ಶ್ರೀಧರ್‌ ಪ್ರಭು ಆಕ್ಷೇಪಿಸಿದರು. ಇದಕ್ಕೆ ಪೀಠವು “ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಶುಲ್ಕ ವಿಧಿಸಿದ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರು ದೂರು ದಾಖಲಿಸುವ ಸಂಬಂಧ ಬಿಬಿಎಂಪಿಯು ತನ್ನ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಬೇಕು. ಅಲ್ಲದೇ, ದಿನಪತ್ರಿಕೆಗಳಲ್ಲೂ ಈ ಕುರಿತು ಜಾಹೀರಾತು ನೀಡಬೇಕು” ಎಂದು ಆದೇಶಿಸಿತು.

Also Read
ಮೈಸೂರಿನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿ ಶವ ಸಂಸ್ಕಾರ: ಪಾದ್ರಿಗಳ ವಿರುದ್ಧದ ಪ್ರಕರಣ ವಜಾ ಮಾಡಲು ಹೈಕೋರ್ಟ್‌ ತಿರಸ್ಕಾರ

ಪೌರ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡುವ ಕುರಿತಾದ ವಿಚಾರವನ್ನು ವಕೀಲೆ ಮೈತ್ರೇಯಿ ಕೃಷ್ಣನ್‌ ಪ್ರಸ್ತಾಪಿಸಿದರು. ಈ ಸಂಬಂಧ ಅಗತ್ಯ ದಾಖಲೆ ಸಲ್ಲಿಸುವಂತೆಯೂ ಸರ್ಕಾರಕ್ಕೆ ಪೀಠ ಆದೇಶ ಮಾಡಿತು.

ಕೋವಿಡ್‌ ಲಸಿಕೆಗಳ ಪರಿಣಾಮಕತೆಯನ್ನು ಪ್ರಶ್ನಿಸಿ ಸೈಯದ್‌ ಶುಜಾತ್‌ ಮೆಹ್ದಿ ಸಲ್ಲಿಸಿದ್ದ ಮನವಿಯನ್ನು ಪೀಠವು ವಜಾ ಮಾಡಿತು. ಅಲ್ಲದೇ, ಕೋವಿಡ್‌ ತೀವ್ರತೆ ಕಡಿಮೆಯಾಗಿರುವುದರಿಂದ ಸೂಕ್ತ ಮನವಿಗಳನ್ನು ಉಳಿಸಿಕೊಂಡು ಉಳಿದ ಮನವಿಗಳನ್ನು ವಿಲೇವಾರಿ ಮಾಡುವುದಾಗಿ ತಿಳಿಸಿದ ಪೀಠವು ಅಮಿಕಸ್‌ ಕ್ಯೂರಿ ವಿಕ್ರಮ್‌ ಹುಯಿಲಗೋಳ ಅವರಿಗೆ ವರದಿ ಸಲ್ಲಿಸುವಂತೆ ಆದೇಶಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಪುತ್ತಿಗೆ ರಮೇಶ್‌, ಜಿ ಆರ್‌ ಮೋಹನ್‌, ಸರ್ಕಾರದ ಪರವಾಗಿ ವಿ ಶ್ರೀನಿಧಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

Related Stories

No stories found.
Kannada Bar & Bench
kannada.barandbench.com