ಕರುವಣ್ಣೂರ್ ಬ್ಯಾಂಕ್ ಹಗರಣ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಪೊಲೀಸರು ಪ್ರಕರಣ ಕುರಿತಂತೆ ಆಗಾಗ್ಗೆ ಸ್ಥಿತಿಗತಿ ವರದಿ ಮತ್ತು ವಿವಿಧ ಆರೋಪಪಟ್ಟಿಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರ ಗಮನಕ್ಕೆ ತರಲಾಯಿತು.
ಕರುವಣ್ಣೂರ್ ಬ್ಯಾಂಕ್ ಹಗರಣ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
Published on

ಕರುವಣ್ಣೂರ್‌ ಸೇವಾ ಸಹಕಾರಿ ಬ್ಯಾಂಕ್‌ ₹100 ಕೋಟಿ ಮೊತ್ತದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೇರಳ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಸುರೇಶ್ ಎಂವಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣಪ್ರಕರಣ]̤

ಪೊಲೀಸರು ಪ್ರಕರಣ ಕುರಿತಂತೆ ಆಗಾಗ್ಗೆ ಸ್ಥಿತಿಗತಿ ವರದಿ  ಮತ್ತು ಅನೇಕ ಆರೋಪಪಟ್ಟಿಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್  ತನಿಖೆ ಗಣನೀಯವಾಗಿ ಮುಂದುವರೆದಿದ್ದು, ಅಂತಿಮ ವರದಿಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.    

Also Read
ಕೊಚ್ಚಿ ಹಡಗು ದುರಂತ: ಮುಳುಗಿದ ಹಡಗಿನ ಸಮೂಹದ ಮತ್ತೊಂದು ಹಡಗನ್ನು ವಶಕ್ಕೆ ಪಡೆಯಲು ಸೂಚಿಸಿದ ಕೇರಳ ಹೈಕೋರ್ಟ್‌

ಪ್ರಕರಣದ ನೈಜ ಅಪರಾಧಿಗಳು ನ್ಯಾಯಾಲಕ್ಕೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಇದೇ ವೇಳೆ ತಾಕೀತು ಮಾಡಿದರು.

ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಬ್ಯಾಂಕಿನ ಮಾಜಿ ಉದ್ಯೋಗಿ ಸುರೇಶ್ ಎಂವಿ ಅವರು ಅರ್ಜಿ ಸಲ್ಲಿಸಿದ್ದರು. ಪೊಲೀಸ್ ತನಿಖೆಯಲ್ಲಿ ಅದಕ್ಷತೆ, ವಿಳಂಬ ಹಾಗೂ ರಾಜಕೀಯ ಹಸ್ತಕ್ಷೇಪವಿದೆ. ದೂರು ದಾಖಲಾಗಿ ವರ್ಷಗಳೇ ಕಳೆದರೂ ತನಿಖೆ ಪೂರ್ಣಗೊಂಡಿಲ್ಲ ಎಂದು ಅವರು ಆರೋಪಿಸಿದ್ದರು

ಗ್ರಾಹಕರ ಬ್ಯಾಂಕ್‌ ಖಾತೆಗಳಿಂದ ಬೇನಾಮಿಯಾಗಿ ಸಾಲ ಪಡೆಯುವುದು, (ಒಬ್ಬ ವ್ಯಕ್ತಿಯ  ಆಸ್ತಿಯನ್ನು ಇನ್ನೊಬ್ಬರ ಹೆಸರಿನಲ್ಲಿರುವ ಆಸ್ತಿ ಅಥವಾ ವ್ಯವಹಾರ ಎಂಬಂತೆ ಬಿಂಬಿಸುವುದು), ದಾಖಲೆಗಳ ನಕಲಿನಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಅವರು ದೂರಿದ್ದರು.

Also Read
ಮತಾಂತರದ ನಂತರ ಶಾಲಾ ದಾಖಲೆಗಳಲ್ಲಿ ಅದನ್ನು ಸೇರ್ಪಡಿಸುವ ಹಕ್ಕು ಮತಾಂತರಗೊಂಡ ವ್ಯಕ್ತಿಗಿದೆ: ಕೇರಳ ಹೈಕೋರ್ಟ್‌

ಏಪ್ರಿಲ್ 11, 2025ರಂದು ನಡೆದಿದ್ದ ವಿಚಾರಣೆ ವೇಳೆ ಜಾರಿ ಪ್ರಕರಣ ಮಾಹಿತಿ ವರದಿಯಲ್ಲಿ (ಇಸಿಐಆರ್) ಹೆಸರಿಸಿರುವ ಎಲ್ಲಾ ಆರೋಪಿಗಳ ಪಾತ್ರವನ್ನು ತನಿಖೆ ಮಾಡುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ತನಿಖೆ ನಡೆಸುವಾಗ ಅಧಿಕಾರಿ ಯಾವುದೇ ರಾಜಕೀಯ ಅಥವಾ ಅಧಿಕಾರಶಾಹಿ ಒತ್ತಡಕ್ಕೆ ಒಳಗಾಗಬಾರದು ಎಂಬ ಎಚ್ಚರಿಕೆ ನೀಡಿತ್ತು.

ಅಂತಿಮ ವಿಚಾರಣೆ ವೇಳೆ ಮುಖ್ಯ ಪ್ರಕರಣದ ಜೊತೆಗೆ, ಉಳಿದ 21 ಕೇಸ್‌ಗಳಲ್ಲಿ 10ಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಉಳಿದ 11 ಪ್ರಕರಣಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ. ವಿಧಿವಿಜ್ಞಾನ ವರದಿಗಾಗಿ ಕಾಯಲಾಗುತ್ತಿದೆ ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದರು. ಪೊಲೀಸರು ಪ್ರಕರಣ ಕುರಿತಂತೆ ಆಗಾಗ್ಗೆ ಸ್ಥಿತಿಗತಿ ವರದಿ ಎಂಬುದನ್ನೂ ಗಮನಿಸಿದ ನ್ಯಾಯಾಲಯ ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿತು. ಅಹವಾಲುಗಳಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯಗಳನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನೀಡಿತು.

Kannada Bar & Bench
kannada.barandbench.com