
ಕೇರಳ ಹೈಕೋರ್ಟ್ ಗುರುವಾರ ಲೈಬೀರಿಯನ್ ಮೂಲದ ಸರಕು ಹಡಗು ಎಂಎಸ್‌ಸಿ ಮಾನಸ-ಎಫ್ ಅನ್ನು ವಶಕ್ಕೆ ಪಡೆಯಲು ಆದೇಶಿಸಿದೆ, ಇದೇ ಸಂಸ್ಥೆಯ ಮತ್ತೊಂದು ಹಡಗು ಎಂಎಸ್‌ಸಿ ಎಲ್ಸಾ-3 ಇತ್ತೀಚೆಗೆ ಅಲಪ್ಪುಳ ಜಿಲ್ಲೆಯ ಕರಾವಳಿಯಲ್ಲಿ ಮುಳುಗಿತ್ತು [ಸಾಜಿ ಸುರೇಂದ್ರನ್ ವರ್ಸಸ್ ಮಾಲೀಕರು ಮತ್ತು ಹಡಗಿನಲ್ಲಿ ಆಸಕ್ತಿ ಹೊಂದಿರುವ ಪಕ್ಷಕಾರರು].
ವೈಯಕ್ತಿಕ ಖರೀದಿದಾರರು ಮತ್ತು ಕಂಪನಿಗಳು ಸಲ್ಲಿಸಿದ ಐದು ನೌಕಾ ಮೊಕದ್ದಮೆ ಅರ್ಜಿಗಳನ್ನು ಪರಿಗಣಿಸಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎಂ ಎ ಅಬ್ದುಲ್ ಹಖೀಮ್ ಈ ಆದೇಶವನ್ನು ಹೊರಡಿಸಿದರು. ಐವರು ಅರ್ಜಿದಾರರೂ ಮುಳುಗಿದ ಹಡಗಿನಲ್ಲಿದ್ದ ಕಚ್ಚಾ ಗೋಡಂಬಿಯನ್ನು ಖರೀದಿಸಿದ್ದರು. ತಾವು ಅನುಭವಿಸಿದ ನಷ್ಟವನ್ನು ಭರಿಸುವಂತೆ ಅವರು ಕೋರಿದ್ದಾರೆ.
ನ್ಯಾಯಾಲಯವು ಈ ನೌಕಾ ಮೊಕದ್ದಮೆಗಳನ್ನು ಪರಿಗಣಿಸಿದ್ದು, ಅರ್ಜಿದಾರರ ಕಡಲ ಹಕ್ಕುಗಳನ್ನು ಎತ್ತಿ ಹಿಡಿಯುವ ಸಲುವಾಗಿ ಅದೆ ಸಮೂಹದ, ಎಂಎಸ್‌ಸಿ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ ಎಸ್‌ಎ ನಿರ್ವಹಿಸುವ ಎಂಎಸ್‌ಸಿ ಮಾನಸ ಎಫ್ ಅನ್ನು ವಶದಲ್ಲಿರಿಸಿಕೊಳ್ಳಲು ಆದೇಶಿಸಿತು.
"ಒಮ್ಮೆ ಹಡಗಿನ ಮಾಲೀಕರು ಮತ್ತು ಆಸಕ್ತಿದಾರ ಪಕ್ಷಕಾರರು ನ್ಯಾಯಾಲಯದಲ್ಲಿ ಮೊತ್ತವನ್ನು ಠೇವಣಿ ಮಾಡಿದ ನಂತರ ಅಥವಾ ಭದ್ರತೆಯನ್ನು ಒದಗಿಸಿದ ನಂತರ, ಯಾವುದೇ ಹೆಚ್ಚಿನ ಆದೇಶವಿಲ್ಲದೆ ವಶಕ್ಕೆ ಪಡೆದಿರುವ ಷರತ್ತುಬದ್ಧ ಆದೇಶವು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ನ್ಯಾಯಾಲಯವು ವಿವರಿಸಿತು.
ಐವರು ಅರ್ಜಿದಾರರು ತಾವು ಹೂಡಿರುವ ಮೊಕದ್ದಮೆಯಲ್ಲಿ, ಗೋಡಂಬಿಯಿಂದ ತುಂಬಿದ ತಮ್ಮ ಸರಕು ಕಂಟೇನರ್‌ಗಳನ್ನು ಎಂಎಸ್‌ಸಿ ಎಲ್ಸಾ-3 ಹಡಗಿನಲ್ಲಿ ತುಂಬಲಾಗಿತ್ತು ಎಂದು ವಿವರಿಸಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆ, ಕಳಪೆ ನಿರ್ವಹಣೆ ಮತ್ತು ಸರಕುಗಳನ್ನು ತಪ್ಪು ವಿಧಾನದಲ್ಲಿ ತುಂಬಿರುವುದರಿಂದ ಹಡಗು ಮುಳುಗಿದೆ ಎಂದು ಅವರು ಆರೋಪಿಸಿದ್ದಾರೆ. ಸಿಬ್ಬಂದಿಯ ಅಜಾಗರೂಕತೆಯೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ.
ಐವರು ಅರ್ಜಿದಾರರು ಸುಮಾರು 6 ಕೋಟಿ ಮೌಲ್ಯದ ತಮ್ಮ ಸರಕು ಮುಳುಗಿದೆ ಎಂದು ಹೇಳಿದ್ದಾರೆ.